ಬಂಡೀಪುರ ಕಾಡಂಚಿನಲ್ಲಿ ಹುಲಿ ಪತ್ತೆಗೆ ಮುಂದುವರೆದ ಕೂಂಬಿಂಗ್
ಚಾಮರಾಜನಗರ, ಏಪ್ರಿಲ್ 25: ಬಂಡೀಪುರ ಕುಂದಕೆರೆ ವಲಯದ ಕಾಡಂಚಿನ ಗ್ರಾಮಗಳಲ್ಲಿ ಮೇಲಿಂದ ಮೇಲೆ ದಾಳಿ ಮಾಡುತ್ತಿರುವ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಮಾಡುತ್ತಿರುವ ಎಲ್ಲ ಪ್ರಯತ್ನಗಳು ವಿಫಲವಾಗುತ್ತಿವೆ.
Recommended Video
ಸಾಕಾನೆಗಳ ಸಹಕಾರದೊಂದಿಗೆ ಕಳೆದ ಐದಾರು ದಿನಗಳಿಂದ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದರೂ ಪ್ರಯತ್ನಗಳು ಫಲ ಕೊಟ್ಟಂತೆ ಕಾಣುತ್ತಿಲ್ಲ. ಈಗಾಗಲೇ ಈ ಹುಲಿ ಕಳೆದ ಹದಿನೈದು ದಿನಗಳಿಂದ ಕುಂದಕೆರೆ ವಲಯದ ಕಾಡಂಚಿನ ಕಡಬೂರು, ಚಿರಕನಹಳ್ಳಿ, ಕುಂದಕೆರೆ ಹಾಗೂ ಉಪಕಾರ ಕಾಲೋನಿಯಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದಿದೆ. ಈ ಹುಲಿ ಸೆರೆಗೆ ಅರಣ್ಯ ಇಲಾಖೆ 25 ಕ್ಯಾಮರಾ ಹಾಗೂ ಹುಲಿ ಸಂಚರಿಸಿದ ಪ್ರದೇಶಗಳಲ್ಲಿ ಮೂರು ಬೋನು ಅಳವಡಿಸಿದೆ.
ಪ್ರಾರಂಭದಲ್ಲಿ ಕ್ಯಾಮರಾಗಳಲ್ಲಿ ಎರಡು ಹುಲಿ ಚಿತ್ರಗಳು ಮಾತ್ರ ಸೆರೆಯಾಗಿದ್ದರೂ ಇತ್ತೀಚೆಗೆ ಮೂರನೆಯ ಹುಲಿಯ ಚಿತ್ರವೂ ಸೆರೆಯಾಗಿದೆ. ಹಾಗಾದರೆ ಜಾನುವಾರುಗಳನ್ನು ಬೇಟೆಯಾಡುತ್ತಿರುವ ಹುಲಿ ಯಾವುದು ಎಂಬುದು ಪ್ರಶ್ನೆಯಾಗಿ ಉಳಿದಿದೆ. ಜತೆಗೆ ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿಗೆ ಯಾವ ಹುಲಿಯನ್ನು ಸೆರೆಹಿಡಿಯಬೇಕೆಂಬುದೇ ಗೊತ್ತಾಗದಂತಾಗಿದೆ.

ಸದ್ಯ ಹುಲಿ ಜಾನುವಾರುಗಳನ್ನು ಬೇಟೆಯಾಡಿದ ಪ್ರದೇಶದಲ್ಲಿ ಈಗಾಗಲೇ ಮೂರು ಬೋನನ್ನು ಇಡಲಾಗಿದೆ. ಈ ಬೋನುಗಳ ಪೈಕಿ ಒಂದರಲ್ಲಿ ಹುಲಿ ಬೇಟೆಯಾಡಿದ ಕಾಡುಹಂದಿಯ ಮಾಂಸ, ಇನ್ನೊಂದರಲ್ಲಿ ಕರು ಹಾಗೂ ಮತ್ತೊಂದರಲ್ಲಿ ಕುರಿಯನ್ನಿರಿಸಲಾಗಿದ್ದರೂ ಕ್ಯಾಮೆರಾ ಕಣ್ಣಿಗೆ ಬೀಳುತ್ತಿರುವ ಹುಲಿ ಅಪ್ಪಿ ತಪ್ಪಿಯೂ ಬೋನಿನತ್ತ ತೆರಳುತ್ತಿಲ್ಲ. ಸಾಕಾನೆಗಳನ್ನಿಟ್ಟುಕೊಂಡು ಅರಣ್ಯ ಇಲಾಖೆ ಉಪಕಾರ ಕಾಲೋನಿ, ಕುಂದಕೆರೆ, ಚಿರಕನಹಳ್ಳಿ ಹಾಗೂ ಕಡಬೂರು ಪ್ರದೇಶಗಳಲ್ಲಿ 25 ಎಸ್ಟಿಪಿಎಫ್ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಟಿ.ಬಾಲಚಂದ್ರ ಮಾತನಾಡಿ, ಕಾಡಿನೊಳಗಿದ್ದು ಆಗಾಗ್ಗೆ ಹೊರಬರುವ ಹುಲಿಗಳನ್ನು ಕಾಡಿಗಟ್ಟಲು ಇಲ್ಲವೇ ಬೋನಿಗೆ ಬಿದ್ದರೆ ಸೆರೆಹಿಡಿದು ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಅರಣ್ಯ ಇಲಾಖೆ ಕಳೆದ ನಾಲ್ಕೈದು ದಿನಗಳಿಂದ ರಾಂಪುರ ಶಿಬಿರದಿಂದ ಕರೆತಂದ ಜಯಪ್ರಕಾಶ, ಪಾರ್ಥಸಾರಥಿ, ಗಣೇಶ ಹಾಗೂ ಕೃಷ್ಣ ಎಂಬ ನಾಲ್ಕು ಸಾಕಾನೆಗಳ ನೆರವಿನಿಂದ ಕೂಂಬಿಂಗ್ ಮುಂದುವರೆಸಿರುವುದಾಗಿ ಹೇಳಿದ್ದಾರೆ.












Click it and Unblock the Notifications