ಮಾದಪ್ಪನ ಬೆಟ್ಟದಲ್ಲಿ ಸಿದ್ದರಾಮಯ್ಯ ಬೆಳ್ಳಿ ರಥ ಸೇವೆ: ಸಿಎಂಗೆ ಪುತ್ರನ ಸಾಥ್
ಚಾಮರಾಜನಗರ, ಸೆಪ್ಟೆಂಬರ್ 27: ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.
ಇಂದು ಬೆಳಗ್ಗೆ ಮಾದಪ್ಪನ ಬೆಟ್ಟಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಚಿವರಾದ ಕೆ.ವೆಂಕಟೇಶ್, ಎಚ್.ಸಿ.ಮಹಾದೇವಪ್ಪ ಜೊತೆಗೂಡಿ ಬಂದ ಸಿದ್ದರಾಮಯ್ಯ ಮಾದಪ್ಪನ ಬೆಟ್ಟದಲ್ಲಿ ಬೆಳ್ಳಿ ದಂಡ ಹಿಡಿದು ಬೆಳ್ಳಿ ರಥ ಸೇವೆ ನಡೆಸಿದರು.

ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಾಧಿಕಾರದ ವತಿಯಿಂದ ಪೂರ್ಣ ಕುಂಭ ಸ್ವಾಗತಕೋರಲಾಯಿತು. ಮಾದಪ್ಪನ ಬೆಳ್ಳಿ ರಥಕ್ಕೆ ಪುಷ್ಪಾರ್ಚನೆ ಮಾಡಿದ ಸಿಎಂ, ಬಳಿಕ ಮಹದೇಶ್ವರ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿದರು.
ಇನ್ನು ಸಿಎಂ ಸಿದ್ದರಾಮಯ್ಯಗೆ ಅವರಿಗೆ ಪುತ್ರ ಡಾ.ಯತೀಂದ್ರ ಸಾಥ್ ನೀಡಿದ್ದಾರೆ. ಆಶ್ರಯ ಸಮಿತಿ ಯೋಜನೆ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಮಂಗಳವಾರ ರಾತ್ರಿಯೇ ಮಲೆ ಮಹದೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಮಾದಪ್ಪನ ಸನ್ನಿಧಿಯಲ್ಲಿ ಹುಲಿ ವಾಹನ ಪೂಜೆ ನೆರವೇರಿಸಿದ್ದಾರೆ.
ಮಹದೇಶ್ವರ ಬೆಟ್ಟದಲ್ಲಿ ಸಾಮೂಹಿಕ ವಿವಾಹ
ಸದ್ಯ ಮಾದಪ್ಪನ ಬೆಟ್ಟದಲ್ಲಿರುವ ಸಿಎಂ ಸಿದ್ದರಾಮಯ್ಯ ಸಾಮೂಹಿಕ ವಿವಾಹದಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಸುತ್ತೂರು ಶ್ರೀಗಳನ್ನು ಸಿದ್ದರಾಮಯ್ಯ ಭೇಟಿ ಮಾಡಲಿದ್ದಾರೆ. ಮಲೆಮಹದೇಶ್ವರ ಬೆಟ್ಟದಲ್ಲಿ ಇಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 39 ಜೋಡಿಗಳು ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಸುತ್ತೂರು ಶ್ರೀ ಹಾಗೂ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.

ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರದ ಸಭೆ
ಸಾಮೂಹಿಕ ವಿವಾಹ ಕಾರ್ಯಕ್ರಮದ ಬಳಿಕ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರದ ಸಭೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಸಭೆ ಆರಂಭವಾಗಲಿದ್ದು, ಐತಿಹಾಸಿಕ ಧಾರ್ಮಿಕ ಕ್ಷೇತ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಡಬೇಕಿದೆ.
ಈಗಾಗಲೇ ಅಧಿಕಾರಿಗಳು ಮಲೆಮಹದೇಶ್ವರನ ಸನ್ನಿಧಿ ಅಭಿವೃದ್ಧಿಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೇ ಇಂದಿನ ಸಭೆಯಲ್ಲಿ ಪ್ರಮುಖ 18 ವಿಚಾರಗಳನ್ನು ಸಿಎಂ ಗಮನಕ್ಕೆ ತರಲು ನಿರ್ಧರಿಸಿದ್ದಾರೆ. ದೇವಾಲಯಕ್ಕೆ ಸೇರಿದ 122 ಎಕರೆ ಜಮೀನು ಸಂಪೂರ್ಣ ಹಿಡಿತದಲ್ಲಿ ಇಲ್ಲ. ಒತ್ತುವರಿ ಜಾಗ ಪ್ರಾಧಿಕಾರಕ್ಕೆ ಸೇರಿಸುವಂತೆ, ದೇವಾಲಯ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಮಿತಿ ಮೀರಿದ್ದು, ಸಂಪೂರ್ಣ ಕಡಿವಾಣ ಹಾಕಬೇಕುವಂತೆ, ಮಲೆಮಹದೇಶ್ವರ ಬೆಟ್ಟಕ್ಕೆ ನೀರಿನ ಸಮಸ್ಯೆ ಹೆಚ್ಚಿದೆ. ಕಾವೇರಿ ನದಿ ಬರಿದಾಗಿರುವುದರಿಂದ ಸಮರ್ಪಕ ನೀರು ಲಭ್ಯವಾಗುತ್ತಿಲ್ಲ. ತಮಿಳುನಾಡು-ಕರ್ನಾಟಕ ಗಡಿಯ ಪಾಲಾರ್ ಸಮೀಪ ಇರುವ ಪಂಪ್ ಹೌಸ್ ಗೆ ಪರ್ಯಾಯ ಪೈಪ್ ಲೈನ್ ಅಳವಡಿಸುವಂತೆ. ಇದಕ್ಕಾಗಿ ಹೆಚ್ಚುವರಿ ಅನುದಾನ ನೀಡುವಂತೆ ಪ್ರಾಧಿಕಾರದ ಅಧಿಕಾರಿಗಳು ಸಿಎಂ ಬಳಿ ಮನವಿ ಮಾಡಲಿದ್ದಾರೆ.












Click it and Unblock the Notifications