ವಿಷಯುಕ್ತ ಪ್ರಸಾದ ಸೇವಿಸಿ ಚಿಕಿತ್ಸೆ ಪಡೆಯುತ್ತಿರುವವನ್ನು ಕಟ್ಟಿಹಾಕಿದ್ದಾರೆ ವೈದ್ಯರು! ಏಕೆ?
ಚಾಮರಾಜನಗರ, ಡಿಸೆಂಬರ್ 15: ಜಿಲ್ಲೆಯ ಕಿಚ್ಚುಗತ್ತಿ ಮಾರಮ್ಮ ದೇವಾಲಯದ ಪ್ರಸಾದ ಸೇವಿಸಿ ಈಗಾಗಲೇ 11 ಮಂದಿ ಸಾವನ್ನಪ್ಪಿದ್ದರೆ 104 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಾಮರಾಜನಗರ, ಮಂಡ್ಯ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಚಿಕಿತ್ಸೆಗೆ ಬಂದ ರೋಗಿಗಳನ್ನು ಆಸ್ಪತ್ರೆಯ ಬೆಡ್‌ಗೆ ಕಟ್ಟಿ ಹಾಕಿ ಚಿಕಿತ್ಸೆ ನೀಡುತ್ತಿರುವ ದೃಶ್ಯ ಆಸ್ಪತ್ರೆಗಳಲ್ಲಿ ಕಾಣುತ್ತಿದೆ.
ಟಿವಿ ಮಾಧ್ಯಮಗಳಲ್ಲಿ ಈ ದೃಶ್ಯಗಳನ್ನು ನೋಡುವವರಿಗೆ ವಿಚಿತ್ರವಾಗಿ ಕಾಣುತ್ತದೆಯಾದರೂ ವೈದ್ಯರ ಈ ಕ್ರಮ ಅತ್ಯಂತ ಅವಶ್ಯಕ ಎಂದು ಚಿಕಿತ್ಸೆಯ ಬಗ್ಗೆ ತಿಳಿದಿರುವವರಿಗೆ ಗೊತ್ತಾಗುತ್ತದೆ.
ಹೌದು, ಪ್ರಸಾದ ತಿಂದು ಚಿಕಿತ್ಸೆ ಪಡೆಯುತ್ತಿರುವವರನ್ನು ಆಸ್ಪತ್ರೆಯಲ್ಲಿ ಮಂಚಕ್ಕೆ ಕಟ್ಟಿಹಾಕಲಾಗಿದೆ. ಅವರು ಬಿಡಿಸಿಕೊಳ್ಳಲು ಒದ್ದಾಡುತ್ತಿರುವ ದೃಶ್ಯಗಳು ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಆದರೆ ಇದಕ್ಕೆ ಕಾರಣವೇನು. ಇಲ್ಲಿದೆ ಮಾಹಿತಿ.

ವಿಷ ಸೇವಿಸಿದವರಿಗೆ, ಹಾವು ಕಚ್ಚಿದವರಿಗೆ ಅಟ್ರೋಪಿನ್
ವಿಷ ತೆಗೆದುಕೊಂಡ ವ್ಯಕ್ತಿಗಳಿಗೆ ಅಥವಾ ಹಾವು ಕಚ್ಚಿದ ವ್ಯಕ್ತಿಗಳಿಗೆ ಅಟ್ರೋಪಿನ್ ನೀಡಲಾಗುತ್ತದೆ. ಇದು ನಾಡಿ ಬಡಿತ ಹೆಚ್ಚು ಮಾಡುತ್ತದೆ. ನಾಡಿ ಬಡಿತ ಹೆಚ್ಚಾದಾಗ ದೇಹದ ಮೇಲೆ ವಿಷದ ಪ್ರಭಾವ ಕಡಿಮೆ ಮಾಡುತ್ತದೆ ಎನ್ನುತ್ತಾರೆ ವೈದ್ಯರು.

ಅಟ್ರೋಪಿನ್ ನಿಂದಾಗಿ ಹಿಂಸಾತ್ಮಕವಾಗಿ ವರ್ತಿಸುತ್ತಾರೆ ರೋಗಿಗಳು
ಆದರೆ ಅಟ್ರೋಪಿನ್ ನೀಡಿದಾಗ ವ್ಯಕ್ತಿ ಬಹಳ ಹಿಂಸಾತ್ಮಕ ರೂಪ ತಾಳುತ್ತಾನೆ. ಕೂಗಾಡುತ್ತಾನೆ, ಕಿರುಚಾಡುತ್ತಾನೆ, ಚಾಕು ತೆಗೆದುಕೊಂಡು ಚುಚ್ಚಿದ ಉದಾಹರಣೆಯೂ ಇದೆ. ಹಾಗಾಗಿ ಅಟ್ರೋಪಿನ್ ನೀಡುವ ಮುನ್ನಾ ರೋಗಿಗಳನ್ನು ಆಸ್ಪತ್ರೆಯ ಬೆಡ್‌ಗೆ ಕಟ್ಟಿಹಾಕಿ ಇಂಜೆಕ್ಷನ್ ನೀಡಲಾಗುತ್ತದೆ.

48 ಗಂಟೆಗಳ ಕಾಲ ಹಿಂಸಾತ್ಮಕ ರೂಪ ತಾಳುತ್ತಾನೆ ರೋಗಿ
ಈ ಅಟ್ರೋಪಿನ್ ಅನ್ನು ಜೀವ ರಕ್ಷಕ ಔಷಧವಾಗಿ ವೈದ್ಯರು ಬಳಸುತ್ತಾರೆ. ಸಾಮಾನ್ಯವಾಗಿ ದೊರೆಯುವ ವಿಷಗಳ ಚಿಕಿತ್ಸೆಗೆ ಇದೇ ಅಟ್ರೋಪಿನ್ ಅನ್ನು ಬಳಸಲಾಗುತ್ತದೆ. ಇದರ ಪ್ರಭಾವ ಸುಮಾರು 48 ಗಂಟೆಗಳ ಕಾಲ ಇರುತ್ತದೆ. 48 ಗಂಟೆಗಳ ಕಾಲ ರೋಗಿಯು ತಾನು-ತಾನಾಗಿರುವುದಿಲ್ಲ.

ನರಕವಾಗಿರುವ ಚಾಮರಾಜನಗರ ಆಸ್ಪತ್ರೆ
ಚಾಮರಾಜನಗರ ಆಸ್ಪತ್ರೆಯಲ್ಲಿ ಒಟ್ಟಿಗೆ 60-70 ಜನರಿಗೆ ಈ ಅಟ್ರೋಪಿನ್ ನೀಡಲಾಗಿದೆ. ಎಲ್ಲರೂ ಹಿಂಸಾತ್ಮಕವಾಗಿ ವರ್ತಿಸುತ್ತಿದ್ದಾರೆ, ಕೂಗಾಡುತ್ತಿದ್ದಾರೆ, ಕಿರುಚಾಡುತ್ತಿದ್ದಾರೆ ಅಲ್ಲಿನ ಪರಿಸ್ಥಿತಿಯನ್ನು ಒಮ್ಮೆ ಊಹಿಸಿಕೊಳ್ಳಿ ಸತ್ತವರ ಆಕ್ರಂದನ ಒಂದೆಡೆ ಆದರೆ ರೋಗಿಗಳ ಆಕ್ರಂದನ ಆಸ್ಪತ್ರೆ ಸಿಬ್ಬಂದಿಗಳ ಪರಿಸ್ಥಿತಿ ದೇವರಿಗೆ ಪ್ರೀತಿ ಆಗಿರುತ್ತದೆ ಅಷ್ಟೆ.












Click it and Unblock the Notifications