ಗೃಹಲಕ್ಷ್ಮಿ ಯೋಜನೆ ಚಾಲನೆಗೆ 310 ಸಾರಿಗೆ ಬಸ್‌ಗಳ ಬಳಕೆ: ಗುಂಡ್ಲುಪೇಟೆಯಲ್ಲಿ ವಿದ್ಯಾರ್ಥಿಗಳ ಪರದಾಟ
ಚಾಮರಾಜನಗರ, ಆಗಸ್ಟ್ 30: ರಾಜ್ಯ ಸರ್ಕಾರದ ಬಹುನಿರೀಕ್ಷಿತ ಗೃಹಲಕ್ಷ್ಮಿ ಯೋಜನೆಗೆ ಇಂದು ಮೈಸೂರಿನಲ್ಲಿ ಚಾಲನೆ ದೊರೆಯುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗದಿಂದ ಬರೋಬ್ಬರಿ 310 ಬಸ್‌ಗಳು ತೆರಳಿದ್ದು, ಸಾರಿಗೆ ಬಸ್ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.
ಚಾಮರಾಜನಗರ ವಿಭಾಗದಲ್ಲಿ ಒಟ್ಟು 510 ಬಸ್‌ಗಳು ನಿತ್ಯ ಸಂಚಾರ ನಡೆಸುತ್ತಿದ್ದವು. ರಾಜ್ಯ ಸರ್ಕಾರದ ಯೋಜನೆ ಚಾಲನೆ ಕಾರ್ಯಕ್ರಮಕ್ಕೆ ಫಲಾನುಭವಿಗಳು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಇನ್ನಿತರರನ್ನು ಕರೆದೊಯ್ಯುವ ಸಲುವಾಗಿ 310 ಬಸ್‌ಗಳನ್ನು ನಿಯೋಜನೆ ಮಾಡಿರುವ ಪರಿಣಾಮ ಕೇವಲ 200 ಬಸ್ ನಿತ್ಯದ ಮಾರ್ಗದಲ್ಲಿ ಸಂಚಾರ ಮಾಡುತ್ತಿವೆ.
ವಿದ್ಯಾರ್ಥಿಗಳು, ಪ್ರಯಾಣಿಕರು ಬಸ್‌ಗಾಗಿ ಪರದಾಡುತ್ತಿದ್ದು, ಗ್ರಾಮೀಣ ಭಾಗದಲ್ಲಿ ಬಸ್‌ಗಳ ಸಂಚಾರ ವ್ಯತ್ಯಯ ಉಂಟಾಗಿದೆ. ವಿದ್ಯಾರ್ಥಿಗಳು ಹಾಗೂ ದಿನ ನಿತ್ಯದ ಪ್ರಯಾಣಿಕರು ಬಸ್‌ಗಾಗಿ ಪರದಾಡಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಬಸ್‌ಗಳನ್ನು ತಡೆದು ನಿಲ್ಲಿಸಿ ನೂಕು ನುಗ್ಗಲಿನಲ್ಲಿ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಿದ ಘಟನೆ ಕೂಡ ನಡೆದಿದೆ.

ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯಿಂದ ಕೊಳ್ಳೇಗಾಲದಿಂದ ಮೈಸೂರು, ಚಾಮರಾಜನಗರದಿಂದ ಮೈಸೂರು, ಗುಂಡ್ಲುಪೇಟೆಯಿಂದ ಮೈಸೂರು ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ತೆರಳುವ ಬಸ್‌ಗಳಿಗಾಗಿ ಪ್ರಯಾಣಿಕರು ಗಂಟೆಗಟ್ಟಲೇ ಕಾಯಬೇಕಾಗಿದೆ.
ಗೃಹಲಕ್ಷ್ಮಿ ಯೋಜನೆಗೆ ಅದ್ಧೂರಿ ಚಾಲನೆ
ಇಂದು(ಆಗಸ್ಟ್ 30) ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೈಸೂರಿನಲ್ಲಿ ಚಾಲನೆ ನೀಡಲಿದ್ದಾರೆ. ರಾಜ್ಯದ 10 ಸಾವಿರ ಸ್ಥಳಗಳಲ್ಲಿ ಏಕಕಾಲಕ್ಕೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದೆ. ಜೊತೆಗೆ ನೇರಪ್ರಸಾರ ಇರಲಿದೆ. ಗ್ರಾಪಂ, ನಗರಪಾಲಿಕೆ, ನಗರಸಭೆ ಮಟ್ಟದಲ್ಲಿ ಈ ಕಾರ್ಯಕ್ರಮ ನೇರ ಪ್ರಸಾರ ನಡೆಯಲಿದ್ದು. ಪ್ರತಿ ಜಿಲ್ಲೆಯ ಒಂದೆರಡು ಗ್ರಾಪಂಗಳಲ್ಲಿ ಫಲಾನುಭವಿಗಳೊಂದಿಗೆ ಸರ್ಕಾರ ಸಂವಾದ ನಡೆಸಲಿದೆ. ಪ್ರತಿ ಪಂಚಾಯಿತಿಗೂ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದ್ದು, ನೇರಪ್ರಸಾರಕ್ಕೆ ನೆರವಾಗಲು ಮುಖ್ಯ ವೇದಿಕೆಗೆ 140 ಅಡಿ ಸ್ಕ್ರೀನ್ ಅಳವಡಿಸಲಾಗಿದೆ.












Click it and Unblock the Notifications