ಆನೆ ಕೊಂದು ದಂತ ಕದ್ದೊಯ್ದ ದುಷ್ಕರ್ಮಿಗಳು: ಇನ್ನೂ ನಿಲ್ಲದ ದಂತಚೋರರ ಅಟ್ಟಹಾಸ
ಚಾಮರಾಜನಗರ, ಫೆಬ್ರವರಿ 7: ವೀರಪ್ಪನ್ ಅಟ್ಟಹಾಸ ಮೆರೆದಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ನರಹಂತಕ ಇಲ್ಲದಿದ್ದರೂ ದಂತಕ್ಕಾಗಿ ಆನೆಗಳ ಹತ್ಯೆ ಇನ್ನೂ ನಿಂತಿಲ್ಲ.
ಜಿಲ್ಲೆಯ ಎಲ್ಲ ವನ್ಯಧಾಮಗಳಲ್ಲಿ ಅರಣ್ಯ ಇಲಾಖೆ ಬಿಗಿ ಭದ್ರತೆ ನಿಯೋಜಿಸಿ ವನ್ಯಜೀವಿಗಳ ರಕ್ಷಣೆಗೆ ಪಣ ತೊಟ್ಟಿದ್ದರೂ ಅವುಗಳ ಬೇಟೆ ತಡೆಯುವುದು ಸಾಧ್ಯವಾಗಿಲ್ಲ.
ಹನೂರು ತಾಲ್ಲೂಕಿನ ಕಾವೇರಿ ವನ್ಯಧಾಮದಲ್ಲಿ ಸುಮಾರು 50 ವರ್ಷದ ಗಂಡಾನೆಯ ಕಳೇಬರ ಪತ್ತೆಯಾಗಿದೆ. ಈ ಆನೆಯನ್ನು ನಾಡಬಂದೂಕಿನಿಂದ ಗುಂಡುಹಾರಿಸಿ ಕೊಂದು ಅದರ ಎರಡೂ ದಂತಗಳನ್ನು ಕಳ್ಳತನ ಮಾಡಲಾಗಿದೆ.

ಕಾವೇರಿ ವನ್ಯಧಾಮದ ಕೊತ್ತನೂರು ವನ್ಯಜೀವಿ ವಲಯದ ಚಿಕ್ಕಲ್ಲೂರು ಗಸ್ತಿನಲ್ಲಿ ಈ ಘಟನೆ ನಡೆದಿದೆ. ನಾಡಬಂದೂಕು ಬಳಸಿ ಆನೆಯನ್ನು ಶೂಟ್ ಮಾಡಲಾಗಿದೆ. ಆನೆಯ ದೇಹದ ಮೇಲೆ ಗುಂಡು ಹೊಕ್ಕಿರುವ ಗುರುತು ಕಂಡುಬಂದಿದೆ. ಆನೆ ಸತ್ತ ಬಳಿಕ ಆಸಿಡ್ ಬಳಸಿ ಅದರ ಎರಡೂ ದಂತಗಳನ್ನು ಕಿತ್ತು ಕದ್ದೊಯ್ಯಲಾಗಿದೆ.
ಸುಮಾರು 15 ದಿನಗಳ ಹಿಂದೆಯೇ ಈ ಕೃತ್ಯ ಎಸಗಲಾಗಿದೆ ಎನ್ನಲಾಗಿದೆ. ಚಿಕ್ಕಲ್ಲೂರಿನಲ್ಲಿ ನಡೆಯುವ ಜಾತ್ರೆಗೆ ಕಾವೇರಿ ನದಿ ಮೂಲಕ ಬರುವ ಭಕ್ತರ ಗುಂಪಿನಲ್ಲಿ ಇರುವ ಬೇಟೆಗಾರರು ಈ ಹತ್ಯೆ ಮಾಡಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಚಿಕ್ಕಲ್ಲೂರಿನ 5 ದಿನಗಳ ಜಾತ್ರೆಗೆ ಕಾವೇರಿ ನದಿಯನ್ನು ದಾಟಿ ಬರುತ್ತಿದ್ದ ಭಕ್ತರ ಗುಂಪಿನಲ್ಲಿ ಬಂದ ಕೆಲ ವೃತ್ತಿನಿರತ ಬೇಟೆಗಾರರು ಈ ಕೃತ್ಯ ಎಸಗಿದ್ದಾರೆ ಎಂಬುದು ಅಧಿಕಾರಿಗಳ ಅಭಿಪ್ರಾಯ. ಗಸ್ತಿನಲ್ಲಿದ್ದ ಸಿಬ್ಬಂದಿಗೆ ತಡವಾಗಿ ಈ ಕಳೇಬರ ಕಂಡುಬಂದಿದೆ. ಆದರೆ, ನಿರಂತರ ಗಸ್ತು ನಡೆಸುವ ಅರಣ್ಯದಲ್ಲಿ ಆನೆ ಮೃತಪಟ್ಟು ಇಷ್ಟು ಸಮಯ ಕಳೆದರೂ ಸಿಬ್ಬಂದಿಗೆ ಗೊತ್ತಾಗಿರಲಿಲ್ಲ ಎನ್ನುವುದು ಅನೇಕ ಅನುಮಾನ ಮೂಡಿಸಿದೆ.












Click it and Unblock the Notifications