ರಾಜ್ಯಕ್ಕೆ ದ್ರೋಹ ಬಗೆಯುತ್ತಿರುವ CWMA ಬ್ಯಾನ್ ಆಗ್ಬೇಕು ಅಷ್ಟೇ; ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳ ಆಕ್ರೋಶ
ಚಾಮರಾಜನಗರ, ಅಕ್ಟೋಬರ್, 12: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ಇಂದು ಚಾಮರಾಜನಗರದಲ್ಲಿ ಕನ್ನಡಪರ ಸಂಘನೆಗಳು ಪ್ರತಿಭಟನೆ ನಡೆಸಿದವು.
ತಮಿಳುನಾಡಿಗೆ ಮತ್ತೆ ನೀರು ಹರಿಸಬೇಕೆಂದು ಆದೇಶ ಬಂದಿರುವ ಹಿನ್ನೆಲೆ ಕನ್ನಡಪರ ಸಂಘಟನೆಗಳು ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದವು. ನಗರದ ಚಾಮರಾಜೇಶ್ವರ ದೇವಾಲಯದಿಂದ ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನೆ ಮೆರವಣಿಗೆ ಸಾಗಿದ್ದು, ಈ ವೇಳೆ ಮಂಡಳಿಯಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ. ನಮ್ಮ ರಾಜ್ಯದ ಹಿತ ಕಾಯದ ಕಾವೇರಿ ನೀರು ನಿರ್ವಹಣಾ ಮಂಡಳಿ ನಮಗೆ ಬೇಡವೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಳೇ ಸೈಕಲ್, ಕಬ್ಬಿಣ, ಸೀಸ ಹಿಡಿದು ಆಕ್ರೋಶ
ಇತ್ತೀಚೆಗಷ್ಟೇ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಚಾಮರಾಜನಗರದಲ್ಲಿ ಕಳೆದ 1 ತಿಂಗಳಿನಿಂದಲೂ ನಿರಂತರವಾಗಿ ಪ್ರತಿಭಟನೆ ನಡೆಸಿದ್ದು,ಗುಜರಿ ವಸ್ತುಗಳನ್ನು ಹಿಡಿದು ಆಕ್ರೋಶ ಹೊರಹಾಕಿದ್ದರು.
ಇದೇ ವೇಳೆ ರಾಜ್ಯದ ಜನರಿಗೆ ಅನ್ಯಾಯ ಮಾಡುತ್ತಿರುವ ರಾಜ್ಯ ಸರ್ಕಾರ, ಕೇಂದ್ರ ಹಾಗೂ ತಮಿಳುನಾಡು ಸರ್ಕಾರಗಳು ತುಕಾಲಿ ಸರ್ಕಾರಗಳಾಗಿವೆ ಎಂದು ಆಕ್ರೋಶ ಹೊರಹಾಕಿದ್ದರು.
ರಾಜ್ಯ ಸರ್ಕಾರ, ತಮಿಳುನಾಡು ಸರ್ಕಾರ ಹಾಗೂ ಕೇಂದ್ರ ಸರ್ಕಾರ ರೈತರು, ಕನ್ನಡಿಗರ ಪಾಲಿಗೆ ಗುಜರಿ ಸರ್ಕಾರಗಳಾಗಿವೆ ಎಂಬುದನ್ನು ತೋರಿಸಲು ಮುರುಕಲು ಸೈಕಲ್, ಹಳೇ ಕಬ್ಬಿಣ, ಖಾಲಿ ಸೀಸಗಳನ್ನು ಹಿಡಿದು ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದರು.
ರಾಜ್ಯದ ಜನರ ಹಿತ ಕಾಯದೇ ನಿರಂತರವಾಗಿ ನೀರು ಹರಿಸುತ್ತಿರುವ ಕರ್ನಾಟಕ ಸರ್ಕಾರ, ಮಾತನಾಡದ ಜನಪ್ರತಿನಿಧಿಗಳು, ಮಧ್ಯಸ್ಥಿಕೆ ವಹಿಸದ ಕೇಂದ್ರ ಸರ್ಕಾರ, ಕಾವೇರಿ ಕ್ಯಾತೆ ತೆಗೆಯುವ ತಮಿಳುನಾಡು ಸರ್ಕಾರ ಯಾವುದಕ್ಕೂ ಉಪಯೋಗಕ್ಕೆ ಬಾರದ ಗುಜರಿ ಸರ್ಕಾರಗಳಾಗಿವೆ ಎಂದು ಆಕ್ರೋಶ ಹೊರಹಾಕಿದರು. ಇನ್ನು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.












Click it and Unblock the Notifications