ಕೊಳ್ಳೇಗಾಲದ ಅಭ್ಯರ್ಥಿ ಘೊಷಿಸದ ಕಾಂಗ್ರೆಸ್: ಮತ್ತೆ ಶಾಸಕರಾಗುವ ಕನವರಿಕೆಯಲ್ಲಿ ಎನ್.ಮಹೇಶ್
ಚಾಮರಾಜನಗರ, ಮಾರ್ಚ್28: ಯಾವ ಪಕ್ಷವನ್ನು ವಿರೋಧಿಸಿಕೊಂಡು ಬಂದಿದ್ದರೋ ಅದೇ ಪಕ್ಷವನ್ನು ಸೇರಿ ಈ ಬಾರಿ ಅದೇ ಪಕ್ಷದಿಂದ ಎರಡನೇ ಬಾರಿಗೆ ಶಾಸಕರಾಗುವ ಕನಸು ಕಾಣುತ್ತಿರುವ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರ ಕನಸು ನನಸಾಗುತ್ತಾ ಎನ್ನುವ ಪ್ರಶ್ನೆ ಮೂಡಿದೆ.
ಜಿಲ್ಲೆಯಲ್ಲಿ ಪ್ರತಿಷ್ಠಿತ ಮೀಸಲು ಕ್ಷೇತ್ರವಾಗಿರುವ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯಯತೆಯಿರುವುದರಿಂದ ಎನ್. ಮಹೇಶ್ ಅವರಿಗೆ ಗೆಲುವು ಸುಲಭವೇನಲ್ಲ. ಹಿಂದುಳಿದ ದಲಿತ ನಾಯಕನಾಗಿ ಕ್ಷೇತ್ರದಲ್ಲಿ ಬಿಂಬಿಸಿಕೊಂಡು ಬಂದಿದ್ದ ಎನ್.ಮಹೇಶ್ ಅವರು ಬಿಎಸ್‌ಪಿ ಪಕ್ಷದಲ್ಲಿದ್ದುಕೊಂಡು ಸಂಘಟನೆ ಮಾಡಿದ್ದರು. ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಕಟ್ಟಿ ಬೆಳೆಸುವ ಪ್ರಯತ್ನ ಮಾಡಿದ್ದರು.

ಜೊತೆಗೆ ಕೊಳ್ಳೇಗಾಲ ಕ್ಷೇತ್ರದಲ್ಲಿ ತನ್ನದೇ ಆದ ಹೋರಾಟ, ಕೆಲಸ ಕಾರ್ಯಗಳ ಮೂಲಕ ದಲಿತರು, ಹಿಂದುಳಿದ ವರ್ಗಗಳ ನಾಯಕರಾಗಿ ಹೊರಹೊಮ್ಮಿದ್ದರು. ಕಳೆದ ಬಾರಿಯ ಚುನಾವಣೆಯಲ್ಲಿ ಆರಿಸಿ ಶಾಸಕ, ಬಳಿಕ ಸಚಿವರೂ ಆದರು. ಸಮ್ಮಿಶ್ರ ಸರ್ಕಾರ ಪತನಗೊಂಡಾಗ ಕೆಲಕಾಲ ಮೌನವಾಗಿಯೇ ಇದ್ದರಲ್ಲದೆ, ಬಿಎಸ್‌ಪಿ ಪಕ್ಷದಿಂದ ದೂರವಾಗಿ ತಮ್ಮಪಾಡಿಗೆ ತಾವು ಎಂಬಂತಿದ್ದರು. ಆ ನಂತರ ಬದಲಾದ ರಾಜಕೀಯದಲ್ಲಿ ತೆಪ್ಪಗಿದ್ದರೆ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಅಸಾಧ್ಯ ಎಂದರಿತ ಅವರು ಬಿಜೆಪಿ ಕಡೆಗೆ ಮುಖ ಮಾಡಿದರು.
ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿ ಎನ್.ಮಹೇಶ್
ಇವತ್ತಿಗೂ ಅವರನ್ನು ಬೆಂಬಲಿಸುವ ಕೆಲವರಿಗೆ ಅವರು ಬಿಜೆಪಿ ಸೇರಿರುವುದು ಇಷ್ಟವಿಲ್ಲದಿರಬಹುದು. ಆದರೆ ಪಕ್ಷ ಅವರ ಬೆನ್ನಿಗೆ ಇರುವುದು, ಪಕ್ಷ ನೋಡಿ ಮತನೀಡುವ ಖಾಯಂ ಮತದಾರರು ಇರುವುದರಿಂದ ಜೊತೆಗೆ ತಮ್ಮ ವರ್ಚಸ್ಸಿನಿಂದಲೇ ಒಂದಷ್ಟು ಮತಗಳನ್ನು ಪಡೆಯುವ ಶಕ್ತಿಯಿರುವುದರಿಂದಲೇ ಎನ್.ಮಹೇಶ್ ಅವರು ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಆದರೆ ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಜೆಡಿಎಸ್ ಮತ್ತು ಕಾಂಗ್ರೆಸ್‌ನಲ್ಲಿಯೂ ಘಟಾನುಘಟಿ ನಾಯಕರು ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿರುವುದರಿಂದ ಪ್ರಬಲ ಪೈಪೋಟಿಗಳು ಎದುರಾಗುವುದಂತು ಖಚಿತ.
ಹಾಲಿ ಶಾಸಕ ಎನ್.ಮಹೇಶ್ ಅವರನ್ನು ಕಟ್ಟಿ ಹಾಕಲು ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಯತ್ನ ಪಡುತ್ತಿದ್ದರೂ ಇದೆರಡು ಪಕ್ಷಗಳಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಜೊತೆಗೆ ಟಿಕೆಟ್‌ಗಾಗಿ ಕಸರತ್ತು ಕೂಡ ನಡೆಸುತ್ತಿದ್ದಾರೆ. ಹಾಗಾಗಿ ಯಾರಿಗೆ ಟಿಕೆಟ್ ನೀಡುತ್ತಾರೆ ಎನ್ನುವುದೇ ಕಗ್ಗಂಟಾಗಿ ಉಳಿದಿದೆ. ಸದ್ಯ ಸ್ಪರ್ಧೆ ಬಯಸಿರುವ ನಾಯಕರು ಘಟಾನುಘಟಿಗಳಾಗಿದ್ದು, ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಅಷ್ಟು ಸುಲಭವಾಗಿ ಉಳಿದಿಲ್ಲ. ಒಂದು ವೇಳೆ ಒಬ್ಬರಿಗೆ ಟಿಕೆಟ್ ನೀಡಿದರೆ ಉಳಿದ ಆಕಾಂಕ್ಷಿಗಳಿಗೆ ಬೇಸರವಾಗುವುದಂತು ನಿಜ.

ಜೆಡಿಎಸ್ ಕಾಂಗ್ರೆಸ್‌ನಲ್ಲಿ ಟಿಕೆಟ್ ಗೊಂದಲ
ಈಗ ಕಾಂಗ್ರೆಸ್ ಆಗಲೀ, ಜೆಡಿಎಸ್ ಆಗಲೀ ಕೊಳ್ಳೇಗಾಲಕ್ಕೆ ಅಭ್ಯರ್ಥಿ ಯಾರು ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಆದರೆ ಆಕಾಂಕ್ಷಿಗಳಂತು ತಾವೇ ಅಭ್ಯರ್ಥಿ ಎಂಬಂತೆ ಕ್ಷೇತ್ರದ ತುಂಬಾ ಓಡಾಡುತ್ತಿದ್ದಾರೆ. ಜೆಡಿಎಸ್‌ನಿಂದ ಸ್ಪರ್ಧಿಸಲು ಪುಟ್ಟಸ್ವಾಮಿ ಮತ್ತು ವಾಲೆ ಮಹದೇವು ಅವರು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.
ನಿವೃತ್ತ ಪೊಲೀಸ್ ಅಧಿಕಾರಿಯಾಗಿರುವ ಪುಟ್ಟಸ್ವಾಮಿ ಅವರು ಕ್ಷೇತ್ರದುದ್ದಕ್ಕೂ ಸಂಚಾರ ಮಾಡಿ ಮತದಾರರ ಸೆಳೆಯುವ ಪ್ರಯತ್ನ ಮಾಡುತ್ತಿದ್ದರೆ, ಇನ್ನೊಬ್ಬ ಆಕಾಂಕ್ಷಿ ವಾಲೆ ಮಹದೇವು ಕೂಡ ಕೈಕಟ್ಟಿ ಕೂರದೆ ತಮ್ಮದೇ ಕೆಲಸ ಕಾರ್ಯಗಳಿಂದ ರಾಜ್ಯ ನಾಯಕರ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಕಾಂಗ್ರೆಸ್ ನಲ್ಲಿ ಘಟಾನುಘಟಿ ನಾಯಕರಾದ ಎ.ಆರ್. ಕೃಷ್ಣಮೂರ್ತಿ, ಮಾಜಿ ಶಾಸಕ ಬಾಲರಾಜ್ ಹಾಗೂ ಎಸ್ ಜಯಣ್ಣ ಟಿಕೆಟ್ ಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಈ ಪೈಕಿ ಎ.ಆರ್.ಕೃಷ್ಣಮೂರ್ತಿ ಮತ್ತು ಎಸ್.ಜಯಣ್ಣ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದರೆ, ಮಾಜಿ ಶಾಸಕ ಬಾಲರಾಜ್ ಡಿ.ಕೆ.ಶಿವಕುಮಾರ್ ಅವರಿಗೆ ಆಪ್ತರಾಗಿದ್ದಾರೆ. ಈ ಮೂರು ನಾಯಕರು ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಇವರ ನಡುವೆ ಯಾರಿಗೆ ಕಾಂಗ್ರೆಸ್ ಟಿಕೆಟ್ ನೀಡುತ್ತದೆಯೋ ಗೊತ್ತಿಲ್ಲ. ಕ್ಷೇತ್ರದಲ್ಲಿ ಟಿಕೆಟ್ ಯಾರಿಗೆ ಕೊಡಬೇಕು ಎಂಬ ಗೊಂದಲ ಏರ್ಪಟ್ಟಿರುವುದರಿಂದಲೇ ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಹೆಸರು ಪ್ರಕಟವಾಗಿಲ್ಲ.

ಎನ್.ಮಹೇಶ್ ಗೆಲುವಿಗೆ ಬ್ರೇಕ್ ಹಾಕಲು ಕಾಂಗ್ರೆಸ್, ಜೆಡಿಎಸ್ ತಂತ್ರ
ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿರುವ ಗೊಂದಲ ಬಿಜೆಪಿ ಅಭ್ಯರ್ಥಿಯಾಗಿ ಎರಡನೇ ಬಾರಿ ಶಾಸಕರಾಗುವ ಕನಸು ಕಾಣುತ್ತಿರುವ ಎನ್.ಮಹೇಶ್‌ಗೆ ವರವಾದರೂ ಅಚ್ಚರಿಯಿಲ್ಲ. ಆದರೆ ಕ್ಷೇತ್ರದ ಚುನಾವಣಾ ಇತಿಹಾಸ ನೋಡಿದರೆ ಜನ ಬದಲಾವಣೆ ಬಯಸಿದ್ದು ಹೆಚ್ಚಾಗಿ ಕಂಡು ಬರುತ್ತಿದೆ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಅಭ್ಯರ್ಥಿಗಳ ಘೋಷಣೆಯಾದ ಬಳಿಕವಷ್ಟೆ ಪೈಪೋಟಿಯ ತೀವ್ರತೆ ಗೊತ್ತಾಗಲಿದೆ.
ಒಂದು ವೇಳೆ ಎರಡು ಪಕ್ಷಗಳಲ್ಲಿನ ಟಿಕೆಟ್ ನೀಡುವ ವಿಚಾರದಲ್ಲಿ ಗೊಂದಲಗಳು ಏರ್ಪಟ್ಟು ಆಕಾಂಕ್ಷಿಗಳ ನಡುವೆ ಭಿನ್ನಾಭಿಪ್ರಾಯಗಳು ಮೂಡಿದರೆ ಅದರ ಲಾಭ ಎನ್.ಮಹೇಶ್ ಅವರಿಗೆ ಆಗುವ ಸಾಧ್ಯತೆ ಇದೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಜೆಡಿಎಸ್ ಮತ್ತು ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ಬಳಿಕವಷ್ಟೆ ಕ್ಷೇತ್ರದಲ್ಲಿ ರಾಜಕೀಯ ಸಂಚಲನ ಶುರುವಾಗಲಿದೆ. ಏನೇ ಆದರೂ ಈ ಬಾರಿಯ ಚುನಾವಣೆಯಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳ ನಡುವೆ ಪೈಪೋಟಿಯಂತು ಇದ್ದೇ ಇರುತ್ತದೆ. ಮುಂದೇನು ಆಗುತ್ತದೆ ಎನ್ನುವುದನ್ನು ಮತದಾರರ ತೀರ್ಮಾನದ ಮೇಲೆ ನಿಂತಿದೆ.












Click it and Unblock the Notifications