ಚಾಮರಾಜನಗರ ಜಿಲ್ಲಾಸ್ಪತ್ರೆ ಬಾಗಿಲಲ್ಲೇ ಆಯ್ತು ಹೆರಿಗೆ; ಸಾವನ್ನಪ್ಪಿತು ಮಗು
ಚಾಮರಾಜನಗರ, ಮಾರ್ಚ್ 11: ಹೆರಿಗೆಗಾಗಿ ಜಿಲ್ಲಾಸ್ಪತ್ರೆಗೆ ಬಂದಿದ್ದ ಬಿಳಿಗಿರಿ ರಂಗನಬೆಟ್ಟದ ಸೋಲಿಗರ ಪೋಡಿನ ಮಹಿಳೆಯೊಬ್ಬರನ್ನು ಜಿಲ್ಲಾಸ್ಪತ್ರೆ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಹೆರಿಗೆ ವಾರ್ಡ್ ಗೆ ಕರೆದುಕೊಂಡು ಹೋಗದೆ ಬೇಜವಾಬ್ದಾರಿಯಿಂದ ವರ್ತಿಸಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಆಸ್ಪತ್ರೆ ಒಳಗೆ ಕರೆದುಕೊಂಡು ಹೋಗದೇ ಇದ್ದರಿಂದ ಸ್ಥಳದಲ್ಲಿದ್ದ ಮಹಿಳೆಯರೇ ಹೆರಿಗೆ ಮಾಡಿಸಿದ್ದು, ಬಳಿಕ ಆಸ್ಪತ್ರೆ ಸಿಬ್ಬಂದಿ ವಾರ್ಡ್ ಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.
ಬಿಳಿಗಿರಿ ರಂಗನಬೆಟ್ಟದ ಸೋಲಿಗ ಜನಾಂಗದ ಗರ್ಭಿಣಿ ಮಾದಮ್ಮ ಅವರಿಗೆ ನಿನ್ನೆ ಹೆರಿಗೆ ನೋವು ಕಾಣಿಸಿದ್ದು, ಆಂಬ್ಯುಲೆನ್ಸ್ ಗೆ ಕರೆ ಮಾಡಿದರೂ ಬರಲಿಲ್ಲ. ಇವರ ಕಷ್ಟ ನೋಡಿದ ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ಜೀಪಿನಲ್ಲೇ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಆದರೆ ಅದಾಗಲೇ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಆಕೆಯನ್ನು ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಸಿಬ್ಬಂದಿ ವಾರ್ಡ್ ಗೆ ದಾಖಲು ಮಾಡಿಕೊಳ್ಳದೆ ಬೇಜವಾಬ್ದಾರಿ ತೋರಿದ್ದಾರೆ. ಈ ವೇಳೆ ಅರಣ್ಯ ಇಲಾಖೆ ವಾಹನದಿಂದ ಕೆಳಗಿಳಿದ ಮಹಿಳೆ ಮಾದಮ್ಮಗೆ ಹೆರಿಗೆ ನೋವು ಇನ್ನಷ್ಟು ಜಾಸ್ತಿಯಾಗಿ ಆಕೆ ಚೀರಾಡುವುದನ್ನು ಕಂಡ ಮಹಿಳೆಯರು ಸ್ಥಳದಲ್ಲಿಯೇ ಸೀರೆ ಮರೆ ಮಾಡಿ ಹೆರಿಗೆ ಮಾಡಿಸಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಆಸ್ಪತ್ರೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹೆರಿಗೆಯಾದ ಮಹಿಳೆಯನ್ನು ಹಾಗೂ ಮಗುವನ್ನು ಹೆರಿಗೆ ವಾರ್ಡ್ ಗೆ ಕರೆದೊಯ್ದಿದ್ದಾರೆ. ಅಲ್ಲದೆ ಶಿಶುವನ್ನು ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃತಪಟ್ಟಿದೆ. ಒಂದೆಡೆ ಬಾರದ ಆಂಬ್ಯುಲೆನ್ಸ್ ಸಿಬ್ಬಂದಿ, ಮತ್ತೊಂದೆಡೆ ಸ್ಪಂದಿಸದ ಜಿಲ್ಲಾಸ್ಪತ್ರೆ ಸಿಬ್ಬಂದಿ ಇದರಿಂದಾಗಿ ನವಜಾತ ಗಂಡು ಶಿಶು ಸಾವನ್ನಪ್ಪುವಂತಾಗಿದೆ.












Click it and Unblock the Notifications