ಲಂಚ ಪಡೆದ ಆರೋಪ: ಬಾಗಳಿ ಗ್ರಾಮದ ಬಳಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಇಬ್ಬರು ಇಂಜಿನಿಯರ್‌ಗಳು
ಚಾಮರಾಜನಗರ, ಜೂನ್, 10: ಶಾಲಾ ಕಟ್ಟಡದ ಬಿಲ್ ಮಂಜೂರು ಮಾಡಲು ಗುತ್ತಿಗೆದಾರನಿಂದ ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆಯುವಾಗ ಇಬ್ಬರು ಎಂಜಿನಿಯರ್‌ಗಳು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಾಮರಾಜನಗರ ತಾಲೂಕಿನ ಬಾಗಳಿ ಗ್ರಾಮದ ಸಮೀಪ ಶುಕ್ರವಾರ ರಾತ್ರಿ (ಜೂನ್ 09) ನಡೆದಿದೆ.
ಚಾಮರಾಜನಗರ ಲೋಕಪಯೋಗಿ ಇಲಾಖೆಯ ಎಇಇ ಕೆಂಪರಾಜು ಹಾಗೂ ಎಇ ಲಂಚ ಸ್ವೀಕರಿಸಿದ ಆರೋಪಿಗಳಾಗಿದ್ದಾರೆ. ಚಾಮರಾಜನಗರದ ಗುತ್ತಿಗೆದಾರ ಸುನೀಲ್ ಕುಮಾರ್ ಎಂಬುವವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಾಗಳಿ ಗ್ರಾಮದಲ್ಲಿ ನಿರ್ಮಿಸಿದ್ದ ಶಾಲಾ ಕಟ್ಟಡಕ್ಕೆ ಬಿಲ್ ಮಂಜೂರಾತಿ ಮಾಡಲು 30 ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಅದೇ 30 ಸಾವಿರ ಲಂಚದ ಹಣವನ್ನು ಪಡೆದು ಕಾಲ್ಕಿಳುವಾಗ ಲೋಕಾಯುಕ್ತ ಪೊಲೀಸರು ಹಿಂಬಾಲಿಸಿ ಇಬ್ಬರು ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ, ಇಬ್ಬರೂ ಲೋಕಾಯುಕ್ತ ಪೊಲೀಸರ ವಶದಲ್ಲಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ
ಇನ್ನು ಮೇ 31ರಂದು ಬೆಳಂಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆಗಳಲ್ಲಿ ಎನ್‌ಐಎ ದಾಳಿ ಮಾಡಿದ್ದರು. ಹಾಗೆಯೇ ಅಂದೇ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ನಡೆಸಿತ್ತು. ಬೆಂಗಳೂರು, ತುಮಕೂರು, ಮೈಸೂರು ಹಾವೇರಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು.
ಸರ್ಕಾರಿ ಅಧಿಕಾರಿಗಳು ಆದಾಯ ಮೀರಿ ಅಧಿಕ ಆಸ್ತಿ ಗಳಿಸಿದ ಆರೋಪದ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಆದಾಯದ ಮೂಲ, ಆಸ್ತಿ ಪತ್ರಗಳು, ಬ್ಯಾಂಕ್ ವಿವರಗಳ ಕುರಿತು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಮಾಡಿದ್ದರು ಎಂದು ತಿಳಿದುಬಂದಿತ್ತು.
ತುಮಕೂರಿನ ಕೆಐಎಡಿಬಿ ಅಧಿಕಾರಿ ನರಸಿಂಹಮೂರ್ತಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ನಗರದ ಆರ್.ಟಿ. ನಗರದಲ್ಲಿ ಇರುವ ಮನೆ ಮೇಲೆ ಲೋಕಾಯುಕ್ತ ಡಿಎಸ್‌ಪಿಗಳಾದ ಮಂಜುನಾಥ್ ಹಾಗೂ ಹರೀಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಈ ವೇಳೆ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದರು ಎಂದು ತಿಳಿದುಬಂದಿತ್ತು.
ಹಾಗೆಯೆ ಹಾವೇರಿ ಜಿಲ್ಲೆಯಲ್ಲೂ ಲೋಕಾಯುಕ್ತ ದಾಳಿ ನಡೆಸಿದೆ. ಹಾವೇರಿಯ ನಿರ್ಮಿತಿ ಕೇಂದ್ರದ ಇಂಜಿನಿಯರ್ ವಾಗೀಶ್ ಶೇಟ್ಟರ್ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿದ್ದರು. ಅಲ್ಲದೆ ರಾಣೆಬೆನ್ನೂರು ನಗರದ ನಿವಾಸ, ಹಾವೇರಿಯ ದೇವಗರಿಯ ಡಿಸಿ ಕಚೇರಿ ಬಳಿ ಇರುವ ನಿರ್ಮಿತಿ ಕೇಂದ್ರ ಕಚೇರಿ ಮೇಲೆ ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು.
ಸಿಲಿಕಾನ್ ಟಿಸಿ ಬೆಂಗಳೂರಿನ ಎರಡು ಕಡೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ್ದರು. ನಗರದ ಬಸವೇಶ್ವರನಗರದಲ್ಲಿ ಇರುವ ಬೆಸ್ಕಾಂ ಟೆಕ್ನಿಕಲ್ ಡೈರೆಕ್ಟರ್ ರಮೇಶ್ ಮನೆ ಮೇಲೆ ದಾಳಿ ಆಗಿತ್ತು. ಇನ್ನು ಇಂಡಸ್ಟ್ರೀಸ್ ಆಂಡ್ ಬಾಯ್ಲರ್ ಇಲಾಖೆ ಅಧಿಕಾರಿಯೊಬ್ಬರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಕಡತಗಳ ಪರಿಶೀಲನೆ ಮಾಡಿದ್ದರು ಎಂದು ತಿಳಿದುಬಂದಿತ್ತು.
ಮೈಸೂರಿನ ನಿವೇದಿತಾ ನಗರದ ಸಂಕ್ರಾಂತಿ ವೃತ್ತದ ಬಳಿ ಇರುವ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿ ಮಹೇಶ್ ಕುಮಾರ್ ನಿವಾಸದ ಮೇಲೆ ದಾಳಿ ಆಗಿತ್ತು. ತೋಟದ ಮನೆ ಸೇರಿ ಹಲವು ಕಡೆ ಒಟ್ಟು 13 ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ನಡೆಸಿ ಕಾರ್ಯಾಚರಣೆ ಮಾಡಿದ್ದರು. ಇನ್ನು ಬೀದರ್ ಭೂಸೇನಾ ನಿಗಮದ ಅಧಿಕಾರಿ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಬೀದರ್, ಚಿಟಗುಪ್ಪಾ ತಾಲೂಕಿನ ಮುತ್ತಂಗಿ ಗ್ರಾಮದ ಫಾರ್ಮ್ ಹೌಸ್ ಮೇಲೂ ಲೋಕಾಯುಕ್ತ ಡಿವೈಎಸ್‌ಪಿ ಓಲೆಕಾರ ನೇತೃತ್ವದಲ್ಲಿ ದಾಳಿ ದಾಳಿ ಮಾಡಲಾಗಿತ್ತು.












Click it and Unblock the Notifications