ವಿವಾದದ ಬಳಿಕ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸುತ್ತಮುತ್ತ ಡ್ರೋನ್, ಕ್ಯಾಮರಾ ಶೂಟಿಂಗ್ ಬ್ಯಾನ್
ಚಾಮರಾಜನಗರ, ಫೆಬ್ರವರಿ. 09: ಗುಂಡ್ಲುಪೇಟೆನ ತಾಲೂಕಿನಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಈ ಹಿಂದೆ ವಿವಾದಲ್ಲಿ ಸುದ್ದಿಯಾಗಿತ್ತು. ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಡ್ರೋನ್ ಕ್ಯಾಮರಾದಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ಅದನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡು ವಿವಾದಕ್ಕೆ ಎಡೆ ಮಾಡಿದ್ದರು.
ಈ ಪ್ರಕರಣದ ಬೆನ್ನಲ್ಲೇ ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಡ್ರೋನ್ ಮತ್ತು ಕ್ಯಾಮರಾ ಚಿತ್ರೀಕರಣಕ್ಕೆ ನಿಷೇದ ಹೇರಲಾಗಿದೆ. ತಹಸೀಲ್ದಾರ್ ಟಿ.ರಮೇಶ್ ಬಾಬು ನಿಷೇಧ ಹೇರಿ ಆದೇಶ ಹೊರಡಿಸಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೋರ್ ಜೋನ್‌ನಲ್ಲಿ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನವಿದ್ದು, ತನ್ನ ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕ ಸ್ಥಳವಾಗಿ ಅತಿ ಹೆಚ್ಚು ಭಕ್ತರು ಮತ್ತು ಪ್ರವಾಸಿಗರನ್ನು ಸೆಳೆಯುತ್ತಿದೆ. ವನ್ಯಜೀವಿಗಳ ಸ್ಥಾನವಾಗಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಆನೆಯನ್ನು ನೋಡಲು ಅನೇಕರು ಕಾಯುತ್ತಿರುತ್ತಾರೆ. ಫೋಟೋ, ವಿಡಿಯೋ ಮತ್ತು ಸೆಲ್ಫಿ ಸ್ಪಾಟ್ ಆಗಿ ಬದಲಾಗಿದ್ದು, ಪ್ರವಾಸಿಗರು ಅತಿರೇಕಕ್ಕೆ ಹೋಗುತ್ತಿದ್ದಾರೆ.
ಪ್ರತಿದಿನ ಸಂಜೆ ವೇಳೆ ಹಿಮವದ್ ಗೋಪಾಲಸ್ವಾಮಿ ದೇವಾಲಯದ ಹತ್ತಿರ ಬರುವ ಕಾಡಾನೆಯ ಬಳಿ ಪ್ರವಾಸಿಗರ ದಂಡು ಸೇರುತ್ತಿದೆ. ಅದರ ಬಳಿ ತೆರಳಿ ಫೋಟೋ ತೆಗೆಯುವುದು, ಸೆಲ್ಪಿ ಕ್ಲಿಕ್ಕಿಸಿಕೊಂಡು ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ. ಜೊತೆಗೆ ಕಾಡಾನೆಗಳಿಂದ ಪ್ರವಾಸಿಗರಿಗೂ ತೊಂದರೆಯಾಗುತ್ತಿದೆ. ಹೀಗಾಗಿ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಮೇಲುಕಾಮನಹಳ್ಳಿ ವಲಯ ಅರಣ್ಯಧಿಕಾರಿಗಳು ಮನವಿ ಮಾಡಿದ್ದರು.

ಗೋಪಾಲಸ್ವಾಮಿ ಬೆಟ್ಟ ವಲಯದ ಮೇಲುಕಾಮನಹಳ್ಳಿ ವಲಯ ಅರಣ್ಯಧಿಕಾರಿಗಳ ಮನವಿಯನ್ನು ತಹಸೀಲ್ದಾರ್ ಹಾಗೂ ತಾಲೂಕು ಆಡಳಿತ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನದ ಸುತ್ತಮುತ್ತ ಪ್ರದೇಶದಲ್ಲಿ ಕಾಡುಪ್ರಾಣಿಗಳ ಕ್ಯಾಮರಾ ಚಿತ್ರೀಕರಣ ಹಾಗೂ ಡ್ರೋನ್ ಬಳಕೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಮುಜರಾಯಿ ಇಲಾಖೆಯ ಅಧಿಕಾರಿ ಹಾಗೂ ತಹಶೀಲ್ದಾರ್ ಟಿ.ರಮೇಶ್ ಬಾಬು ಆದೇಶ ಹೊರಡಿಸಿದ್ದಾರೆ.
ಪತ್ರಕರ್ತ ವಿಶ್ವೇಶ್ವರ ಭಟ್ ಡ್ರೋನ್ ಕಹಾನಿ
ಇನ್ನು, ಡ್ರೋನ್, ಕ್ಯಾಮೆರಾ ಚಿತ್ರೀಕರಣಕ್ಕೆ ನಿಷೇಧ ಹೇರಲು ಹೆಚ್ಚು ಕಾರಣವಾಗಿದ್ದು, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್. ಹೌದು, ಕೆಲ ದಿನಗಳ ಹಿಂದೆ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ನಿಷೇಧಿತ ವಲಯ ಗೋಪಾಲಸ್ವಾಮಿ ಬೆಟ್ಟದಲ್ಲಿ ಸಂಜೆ ವೇಳೆ ಡ್ರೋನ್ ಬಳಸಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶ ಹಾಗೂ ಪ್ರತಿನಿತ್ಯ ದೇವಸ್ಥಾನದ ಬಳಿ ಬರುವ ಕಾಡಾನೆಯ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಈ ವಿಡಿಯೋ ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಜೊತೆಗೆ ಅರಣ್ಯಾಧಿಕಾರಿಗಳ ವಿರುದ್ಧ ಸಾರ್ವಜನಿಕರು ಮತ್ತು ವನ್ಯಜೀವಿ ತಜ್ಞರು ಆಕ್ರೋಶ ಹೊರಹಾಕಿದ್ದರು. ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಇದರಿಂದಾಗಿಯೇ ಗೋಪಾಲಸ್ವಾಮಿ ಬೆಟ್ಟದಲ್ಲಿ ಡ್ರೋನ್ ಬಳಕೆ ನಿಷೇಧ ಕುರಿತು ಕೂಗು ಕೇಳಿಬಂದಿತ್ತು. ಇದು ಡ್ರೋನ್, ಕ್ಯಾಮೆರಾ ಚಿತ್ರೀಕರಣ ನಿಷೇಧಕ್ಕೆ ಕಾರಣವಾಗಿದೆ.












Click it and Unblock the Notifications