15 ಕೆ.ಜಿ. ತೂಕದ ಆನೆ ದಂತ ಕದ್ದಿದ್ದವನ ಬಂಧನ
ಚಾಮರಾಜನಗರ, ಮೇ 30: ಅರಣ್ಯದಲ್ಲಿ ಸ್ವಾಭಾವಿಕವಾಗಿ ಸಾವನ್ನಪ್ಪಿದ ಆನೆಯ ದಂತ ಕದ್ದಿದ್ದ ವ್ಯಕ್ತಿಯೊಬ್ಬನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ಹನೂರು ತಾಲೂಕಿನ ಸೂಳೆಕೊಬೆ ನಿವಾಸಿ ಸಣ್ಣಪುಟ್ಟ ಎಂಬಾತ ಬಂಧಿತ ಆರೋಪಿ. ಈತನಿಂದ 15 ಕೆ.ಜಿ. ತೂಕದ ದಂತವನ್ನು ವಶಪಡಿಸಿಕೊಳ್ಳಲಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೂಗ್ಯಂ ವಲಯ ಅರಣ್ಯ ಪ್ರದೇಶದಲ್ಲಿ ಮೂರು ದಿನಗಳ ಹಿಂದೆ ಕಾಲು ಜಾರಿ ಬೆಟ್ಟದ ಮೇಲಿಂದ ಕೆಳಕ್ಕೆ ಬಿದ್ದು ಆನೆಯೊಂದು ಸಾವನ್ನಪ್ಪಿತ್ತು. ಈ ಆನೆ ಸತ್ತ ವಿಚಾರ ಅರಣ್ಯ ಇಲಾಖೆ ಗಮನಕ್ಕೆ ಬಂದಿರಲಿಲ್ಲ.

ಈ ನಡುವೆ ಸೂಳೆಕೊಬೆ ನಿವಾಸಿ ಸಣ್ಣಪುಟ್ಟ ಎಂಬಾತ ಸೀಗೆಸೊಪ್ಪು ತರಲೆಂದು ಅರಣ್ಯಕ್ಕೆ ಹೋದ ವೇಳೆ ಸಾವಿಗೀಡಾಗಿದ್ದ ಆನೆ ಕಂಡಿದೆ. ಅಷ್ಟೇ ಅಲ್ಲ, ಅದರ ದಂತ ನೋಡಿದ ಆತನಿಗೆ ಅದನ್ನು ಬೇರ್ಪಡಿಸಿ ಕೊಂಡೊಯ್ಯುವ ಆಲೋಚನೆ ಬಂದಿದ್ದು, ಅದರಂತೆ 15 ಕೆ.ಜಿ. ದಂತವನ್ನು ಬೇರ್ಪಡಿಸಿ, ಮಾರಾಟದ ಉದ್ದೇಶದಿಂದ ಮನೆಯಲ್ಲಿ ಅಡಗಿಸಿಟ್ಟಿದ್ದ.
ಈ ವಿಚಾರ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಖಚಿತ ಮಾಹಿತಿ ಮೇರೆಗೆ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಡಿಎಫ್ ಒ ಏಳುಕುಂಡಲು ಮಾರ್ಗದರ್ಶನದಲ್ಲಿ ಆರ್ ಎಫ್ ಒ ಸುಂದರ್ ದಾಳಿ ನಡೆಸಿ, ದಂತ ಸಹಿತ ಆರೋಪಿಯನ್ನು ಬಂಧಿಸಿ, ವಿಚಾರಣೆ ಕೈಗೊಂಡಿದ್ದಾರೆ.












Click it and Unblock the Notifications