ಕಾವೇರಿ ನದಿಯಲ್ಲಿ ನವವಿವಾಹಿತೆಯ ಶವ ಪತ್ತೆ: ಮರ್ಯಾದಾ ಹತ್ಯೆ ಶಂಕೆ?
ಚಾಮರಾಜನಗರ, ನವೆಂಬರ್.21: ನವವಿವಾಹಿತೆಯೊಬ್ಬಳ ಶವ ತಾಲೂಕಿನ ಶಿವನಸಮುದ್ರ ವಿದ್ಯುತ್ ಘಟಕದ ಕಾವೇರಿ ನದಿಯಲ್ಲಿ ಪತ್ತೆಯಾಗಿದ್ದು, ಇದೊಂದು ಮರ್ಯಾದಾ ಹತ್ಯೆನಾ? ಎಂಬ ಸಂಶಯ ಬರತೊಡಗಿದೆ.
ಎಲ್ಲೇಮಾಳ ಸಮೀಪದ ಕೆ.ವಿ.ಎನ್. ದೊಡ್ಡಿ ಗ್ರಾಮದ ನಿವಾಸಿ ಕೃಷ್ಣ ಎಂಬುವರ ಪುತ್ರಿ ಜ್ಯೋತಿ ಎಂಬಾಕೆಯೇ ಮೃತಪಟ್ಟ ಯುವತಿಯಾಗಿದ್ದು, ಈಕೆಯ ಸಾವಿನ ಸುತ್ತ ಸಂಶಯದ ಹುತ್ತ ಬೆಳೆಯತೊಡಗಿದೆ.
ಮೃತ ಜ್ಯೋತಿಯು ತನ್ನ ಸೋದರ ಮಾವ ಮುತ್ತುರಾಜುನನ್ನು ಪ್ರೀತಿಸಿ ಮದುವೆಯಾಗಿ ಬೆಂಗಳೂರಿನಲ್ಲಿ ಜೀವನ ನಡೆಸುತ್ತಿದ್ದರು. ಈ ಮದುವೆಗೆ ಆಕೆಯ ಹೆತ್ತವರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆ ನಂತರ ಆಕೆಯನ್ನು ಮನೆಯವರು ಬಂದು ಕರೆದುಕೊಂಡು ಹೋಗಿದ್ದರು ಎನ್ನಲಾಗಿದ್ದು, ಇದೀಗ ಆಕೆ ಸಾವನ್ನಪ್ಪಿರುವುದು ಸಂಶಯಕ್ಕೆಡೆ ಮಾಡಿಕೊಟ್ಟಿದೆ.

ಇದೀಗ ಯುವತಿಯ ಗಂಡ ದೂರು ನೀಡಿದ್ದು ಅದರ ಸಾರಾಂಶ ಹೀಗಿದೆ. ನಮ್ಮಿಬ್ಬರ ಮದುವೆಯನ್ನು ನಿರಾಕರಿಸಿದ ಜ್ಯೋತಿಯ ಮನೆಯವರು ನ.17 ರಂದು ಮನೆಯಲ್ಲಿದ್ದ ನನ್ನ ಹೆಂಡತಿ ಜ್ಯೋತಿಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿದ್ದಾರೆ. ವಿಚಾರ ತಿಳಿದು ನೋಡಲು ಹೋದಾಗ ಹುಟ್ಟೂರು ಕೆ.ವಿ.ಎನ್ ದೊಡ್ಡಿ ಗ್ರಾಮದಲ್ಲಿ ಯಾರು ಇರಲಿಲ್ಲ.
ಈ ನಡುವೆ ಆಕೆಯನ್ನು ಹುಡುಕುತ್ತಿದ್ದಾಗ ಶಿವನಸಮುದ್ರದ ಬಳಿ ನೀರಿನಲ್ಲಿ ಶವವೊಂದು ತೇಲುತ್ತಿರುವುದು ಗೊತ್ತಾಗಿ ಸ್ಥಳಕ್ಕೆ ಹೋಗಿ ನೋಡಿದಾಗ ಅದು ನನ್ನ ಹೆಂಡತಿ ಜ್ಯೋತಿಯ ಶವವಾಗಿತ್ತು. ಟವಲ್ ಅನ್ನು ಕತ್ತಿಗೆ ಬಿಗಿದು ಉಸಿರುಕಟ್ಟಿ ಸಾಯಿಸಿ ನಂತರ ನದಿಗೆ ಬೀಸಾಕಿದ್ದಾರೆ.

ಆದ್ದರಿಂದ ಜ್ಯೋತಿಯ ತಂದೆ ಕೃಷ್ಣಯ್ಯ, ತಾಯಿ ವೆಂಕಟಲಕ್ಷಮ್ಮ ಮತ್ತು ಅವಳ ಸೋದರ ಮಾವ ಕೈಲಾಸ, ಅಜ್ಜಿ ತಿರುಮಮ್ಮ, ತಾತ ಗೋವಿಂದಯ್ಯ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.












Click it and Unblock the Notifications