ಹನೂರು: ಅಂಗಡಿಗಳಲ್ಲಿ ಮೊಟ್ಟೆ-ಹಣ್ಣು ತಿನ್ನುವುದಲ್ಲದೆ ಜನರ ನಿದ್ದೆಗೆಡಿಸಿದ್ದ ಜಾಂಬವಂತ ಕೊನೆಗೂ ಸೆರೆ
ಚಾಮರಾಜನಗರ, ಡಿಸೆಂಬರ್, 14: ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕರಡಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿ ಬಿದ್ದಿರುವ ಘಟನೆ ಹನೂರು ತಾಲೂಕಿನ ಅಜ್ಜಿಪುರ ಗ್ರಾಮದಲ್ಲಿ ನಡೆದಿದೆ.
ಕಳೆದ ಶನಿವಾರ ಅಜ್ಜಿಪುರ ಗ್ರಾಮದ ಪೆಟ್ಟಿಗೆ ಅಂಗಡಿಗಳ ಮೇಲೆ ಈ ಕರಡಿ ಆಹಾರ ಅರಸಿ ಬಂದು ಮೊಟ್ಟೆ, ಹಣ್ಣು ತಿಂದು, ಧ್ವಂಸ ಮಾಡಿ ಹೋಗಿತ್ತು. ಅದರ, ದಾಂಧಲೆ ವಿಡಿಯೋ ಸಿಸಿಟಿವಿಯಲ್ಲೂ ಸೆರೆಯಾಗಿತ್ತು. ಕಳೆದ ನಾಲ್ಕು ದಿನಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿ ಹಿಡಿಯಲು ಅಜ್ಜಿಪುರ ಗ್ರಾಮದ ಹೊರವಲಯದಲ್ಲಿ ಬೋನನ್ನು ಇಟ್ಟು ಕರಡಿ ಸೆರೆಗೆ ಸತತ ಪ್ರಯತ್ನಪಟ್ಟಿದ್ದು, ಕೊನೆಗೂ ಇಂದು (ಡಿಸೆಂಬರ್ 14) ಆಹಾರ ಅರಸಿ ಬಂದ ಜಾಂಬವಂತ ಬೋನಿನಲ್ಲಿ ಸೆರೆಯಾಗಿದೆ.

ನಿಟ್ಟಿಸಿರು ಬಿಟ್ಟ ಗ್ರಾಮಸ್ಥರು
ಕಳೆದ ಶನಿವಾರ ರಾತ್ರಿ ಕರಡಿಯು ಗ್ರಾಮದ ಪೆಟ್ಟಿಗೆ ಅಂಗಡಿಗಳಿಗೆ ನುಗ್ಗಿ ಆಹಾರ ಪದಾರ್ಥಗಳನ್ನು ತಿಂದು ನಾಶಗೊಳಿಸಿ, ಭಯದ ವಾತಾವರಣವನ್ನು ಉಂಟು ಮಾಡಿತ್ತು. ಕರಡಿ ಗ್ರಾಮಕ್ಕೆ ಬಂದು ಪೆಟ್ಟಿಗೆ ಅಂಗಡಿಗಳ ಮೇಲೆ ದಾಳಿ ನಡೆಸುವ ಚಿತ್ರಣ ಸಿಸಿಟಿವಿಯಲ್ಲಿ ಸೆರೆಯಾದ ಚಿತ್ರಣವನ್ನು ನೋಡಿ ರಾತ್ರಿ ವೇಳೆ ಗ್ರಾಮಸ್ಥರು ಓಡಾಡುವುದಕ್ಕೂ ಭಯಪಟ್ಟಿದ್ದರು. ಈಗ ಕರಡಿ ಬೋನಿಗೆ ಬಿದ್ದ ಹಿನ್ನೆಲೆಯಲ್ಲಿ ಭಯದ ವಾತಾವರಣದಲ್ಲಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಸೆರೆಯಾದ ಕರಡಿಯನ್ನು ಸುರಕ್ಷಿತವಾಗಿ ಮತ್ತೇ ಕಾಡಿಗೆ ಬಿಡಲಾಗಿದೆ.
ಕೊಳೆತ ಸ್ಥಿತಿಯಲ್ಲಿ ಆನೆ ಕಳೆಬರಹ ಪತ್ತೆ
ಕೊಳೆತ ಸ್ಥಿತಿಯಲ್ಲಿ ಗಂಡಾನೆಯೊಂದರ ಕಳೆಬರ ಪತ್ತೆಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಓಂಕಾರ ವಲಯ ವ್ಯಾಪ್ತಿಯ ನಾಗಣಾಪುರ ಬ್ಲಾಕ್-02 ಗಸ್ತಿನ ಹುಣಸೆತಾಳ ಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಗಂಡಾನೆಗೆ ಸುಮಾರು 40 ರಿಂದ 45 ವರ್ಷ ವಯಸ್ಸಾಗಿದೆ. ಸತ್ತ ಆನೆಯಿಂದ 02 ದಂತಗಳನ್ನು ಬೇರ್ಪಡಿಸಿ ಇಲಾಖೆ ವಶ ಪಡಿಸಿಕೊಂಡಿದೆ. ನಂತರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್ ಕುಮಾರ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಂದ್ರ ಸೂಚನೆ ಮೇರೆಗೆ ಪಶು ವೈದ್ಯಾಧಿಕಾರಿ ಡಾ.ಮಿರ್ಜಾ ವಾಸೀಂ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ, ನಿಯಮಾನುಸಾರ ಕಳೆಬರವನ್ನು ಅರಣ್ಯ ಪ್ರದೇಶದಲ್ಲೇ ಬಿಡಲಾಗಿದೆ.
ಕಾಡಾನೆಯು ಸ್ವಾಭಾವಿಕವಾಗಿ ಮೃತಪಟ್ಟಿರುವುದಾಗಿ ಅರಣ್ಯಾಧಿಕಾರಿಗಳು ದೃಢಪಟ್ಟಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಉಪ ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗಳು ಗಸ್ತು ನಡೆಸುತ್ತಿದ್ದ ವೇಳೆ ಕೊಳೆತೆ ವಾಸನೆ ಬಂದ ಕಾರಣ ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಶೀಲಿಸಿದಾಗ ಆನೆಯೊಂದು ಸಾವನ್ನಪ್ಪಿರುವುದು ಕಂಡುಬಂದಿದೆ.
ಕೂಡಲೇ ಸಿಬ್ಬಂದಿಗಳು ಹಾಗೂ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಕಾಡಾನೆಯೊಂದು ಕೊಳೆತ ಸ್ಥಿತಿಯಲ್ಲಿ ಸತ್ತಿರುವುದು ಖಚಿತವಾಗಿದೆ.
ವಿದ್ಯುತ್ ಶಾಕ್‌ನಿಂದ ಕಾಡಾನೆ
ಜಮೀನಿನಲ್ಲಿ ಅಕ್ರಮವಾಗಿ ಹಾಕಲಾಗಿದ್ದ ವಿದ್ಯುತ್ ಬೇಲಿಗೆ ಸಿಲುಕಿ ಮೃತಪಟ್ಟಿದ ಆನೆಯನ್ನು ಜಮೀನಿನಲ್ಲಿಯೇ ಗುಂಡಿ ತೋಡಿ ಮುಚ್ಚಿದ ಪ್ರಕರಣ ಜಿಲ್ಲೆಯ ಕನಕಪುರ ತಾಲೂಕಿನ ಸಂತೇ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾಲ್ಕು ದಿನಗಳ ಹಿಂದೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸಂತೇಕೋಡಹಳ್ಳಿಯ ನಂಜೇಗೌಡ ಎಂಬುವರಿಗೆ ಸೇರಿದ್ದ ಜಮೀನನ್ನು ಪಿಳ್ಳೇಗೌಡ ಎನ್ನುವಾತ ನಡೆಸುತ್ತಿದ್ದು, ಆನೆಗಳ ಹಾವಳಿ ಹೆಚ್ಚಿದ ಕಾರಣ ಬೆಳೆಗಳ ರಕ್ಷಣೆಗಾಗಿ ಅಕ್ರಮವಾಗಿ ವಿದ್ಯುತ್ ಬೇಲಿ ಅಳವಡಿಸಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಈ ಭಾಗಕ್ಕೆ ಬಂದ ಆನೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದೆ. ಈ ವಿಚಾರ ತಿಳಿದ ಪಿಳ್ಳೇಗೌಡ ವಿಚಾರ ಹೊರಬರದಂತೆ ಜೆಸಿಬಿ ಮೂಲಕ ಆನೆಯನ್ನು ಸ್ಥಳದಲ್ಲಿಯೇ ಮಣ್ಣು ಮಾಡಿದ್ದರು.











Click it and Unblock the Notifications