• search
 • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ: ಸೋಲಿಗರ ಈ ಮೂರು ಗ್ರಾಮಗಳು ಕೋವಿಡ್ ಮುಕ್ತ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಜೂನ್‌ 3: ಇಡೀ ದೇಶಾದ್ಯಂತ ಕೋವಿಡ್ ಮಹಾಮಾರಿ ತನ್ನ ಪ್ರಭಾವವನ್ನು ಪ್ರತಾಪವನ್ನೂ ತೋರಿಸುತ್ತಿದೆ. ಆದರೆ ಕೊಳ್ಳೇಗಾಲ ತಾಲ್ಲೂಕಿನ ಆದಿವಾಸಿ ಸೋಲಿಗ ಸಮುದಾಯವೇ ಜಾಸ್ತಿ ಇರುವ ಮೂರು ಗ್ರಾಮಗಳಗೆ ಕೊರೊನಾ ಸೋಂಕು ಇನ್ನೂ ಪ್ರವೇಶಿಸಲು ಸಾಧ್ಯವೇ ಆಗಿಲ್ಲ.

ಇಲ್ಲಿನ ಎರೆಕಟ್ಟೆ ಗ್ರಾಮ, ಕರಳಕಟ್ಟೆ ಗ್ರಾಮ ಹಾಗೂ ಮೊಳಗನ ಕಟ್ಟೆ ಗ್ರಾಮಗಳು ಕೋವಿಡ್‌ನಿಂದ ಮುಕ್ತವಾಗಿವೆ. ಆ ಮೂಲಕ ಕೋವಿಡ್ ನಿಯಂತ್ರಣದ ವಿಚಾರದಲ್ಲಿ ಈ ಗ್ರಾಮಗಳು ರಾಜ್ಯಕ್ಕೇ ಮಾದರಿಯಾಗಿವೆ. ಕೋವಿಡ್‌ನ್ನು ತಡೆಯಲು ಇಲ್ಲಿನ ಬುಡಕಟ್ಟು ಸಮುದಾಯದವರ ಜೀವನಶೈಲಿ ಹಾಗೂ ಗ್ರಾಮ ಪಂಚಾಯಿತಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳೇ ಇದಕ್ಕೆ ಪ್ರಮುಖ ಕಾರಣವಾಗಿವೆ.

ಇಲ್ಲಿನ ಕಾಡಿನ ಮಕ್ಕಳು ಜೀವನಕ್ಕೆ ತಲೆತಲಾಂತರಗಳಿಂದ ತಾವು ಮಾಡಿಕೊಂಡು ಬಂದಿರುವ ಪಶುಪಾಲನೆ, ಜೇನು ಸಾಕಾಣೆ, ಹಾಗೂ ಕೃಷಿ ಚಟುವಟಿಕೆಯನ್ನೇ ಅವಲಂಬಿಸಿವೆ. ತಮ್ಮದೇ ಸಣ್ಣ ಹಿಡುವಳಿಗಳಲ್ಲೇ ಕೃಷಿ ಮಾಡುವ ಇವರು ದುಡಿಯಲು ಹೊರಗಡೆ ಹೋಗುವುದಿಲ್ಲ. ಅಷ್ಟೇ ಅಲ್ಲ ಅವಶ್ಯಕತೆ ಇದ್ದಾಗ ಮಾತ್ರ ವಾರಕ್ಕೊಮ್ಮೆ ಹೋಗಿ ಸಂತೆಯಲ್ಲಿ ದಿನಸಿ ಮತ್ತಿತರ ಸಾಮಗ್ರಿ ತರುತ್ತಾರೆ. ಜನರು ಸೋಂಕಿನಿಂದ ದೂರ ಇರಲು ಈ ಕಟ್ಟು ನಿಟ್ಟಿನ ನಿರ್ಬಂಧವೇ ಕಾರಣವಾಗಿದೆ.

ಇಷ್ಟೇ ಅಲ್ಲದೆ ಗ್ರಾಮದ ಮುಖ್ಯ ರಸ್ತೆಗಳನ್ನು ಗ್ರಾಮಸ್ಥರೇ ಬಂದ್ ಮಾಡಿದ್ದಾರೆ. ಗ್ರಾಮಸ್ಥರನ್ನು ಬಿಟ್ಟು ಇನ್ಯಾರಾದರೂ ಹೊಸಬರು ಈ ಗ್ರಾಮಕ್ಕೆ ಪ್ರವೇಶ ಮಾಡಿದರೆ, ಅವರು ಏಕೆ ಬಂದಿದ್ದಾರೆ, ಯಾವಾಗ ಹೋಗುತ್ತಾರೆ ಎಂಬ ಬಗ್ಗೆ ನಿಗಾ ಇಡುತ್ತಾರೆ. ಒಂದು ವೇಳೆ ಯಾರಾದರೂ ಹೊಸಬರು ಅನವಶ್ಯಕವಾಗಿ ತಿರುಗಾಡಿಕೊಂಡು ಈ ಗ್ರಾಮಕ್ಕೆ ಪ್ರವೇಶ ಮಾಡಿದರೆ ಅವರನ್ನು ವಾಪಸ್ ಕಳುಹಿಸುತ್ತಾರೆ.

ತಮ್ಮ ಜಮೀನುಗಳಲ್ಲಿ ಬೆಳೆದ ಸೊಪ್ಪು, ತರಕಾರಿಯನ್ನೇ ಇವರು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಕೋವಿಡ್ ಸಾಂಕ್ರಾಮಿಕ ರೋಗದ ಬಾಧೆಯಿಂದ ಎಲ್ಲೆಡೆ ಜನರು ತತ್ತರಿಸಿ ಹೋಗಿದ್ದರೂ ಸೋಂಕಿನ ಭಯ ಭೀತಿಯಾಗಲಿ ಇದುವರೆಗೆ ಈ ಗ್ರಾಮಗಳಲ್ಲಿ ಕಂಡು ಬಂದಿಲ್ಲ. ಒಂದು ವೇಳೆ ಯಾರಿಗಾದರೂ ಜ್ವರ, ಇನ್ನಿತರ ಖಾಯಿಲೆ ಬಂದರೆ ತಾವೇ ತಯಾರಿಸಿದ ಗಿಡಮೂಲಿಕೆಗಳ ಕಷಾಯ, ಮದ್ದು ಮಾಡಿಕೊಂಡು ಸೇವಿಸುತ್ತಾರೆ.

ತಿಮ್ಮರಾಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮಗಳಲ್ಲಿ ಗಿರಿಜನರು ಸೋಂಕಿನ ಭಯವಿಲ್ಲದೇ ನೆಮ್ಮದಿಯಿಂದ ಇದ್ದಾರೆ. ಕರಳಕಟ್ಟೆ ಗ್ರಾಮದಲ್ಲಿ 71 ಕುಟುಂಬಗಳು, ಎರೆಕಟ್ಟೆ ಗ್ರಾಮದಲ್ಲಿ 47 ಕುಟುಂಬಗಳು, ಮೊಳಗನ ಕಟ್ಟೆ ಗ್ರಾಮದಲ್ಲಿ 49 ಕುಟುಂಬಗಳು ಇವೆ.

'ಮುಂಜಾಗ್ರತಾ ಕ್ರಮವಾಗಿ ಪ್ರತಿ ಗ್ರಾಮಗಳಲ್ಲೂ ಸ್ಯಾನಿಟೈಸ್ ಮಾಡಿದ್ದಾರೆ. ರಸ್ತೆ, ಚರಂಡಿ ಸ್ವಚ್ಛತೆಯ ಜೊತೆಗೆ ಬ್ಲೀಚಿಂಗ್ ಪೌಡರ್, ಫಿನಾಯಿಲ್ ಸಿಂಪಡಣೆ ಮಾಡಲಾಗಿದೆ. ಅಲ್ಲಿಯ ಜನರಿಗೆ ಸ್ವಯಂ ಸ್ವಚ್ಛತೆ, ಗ್ರಾಮ ನೈರ್ಮಲ್ಯ ಹಾಗೂ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿವಳಿಕೆ ನೀಡಲಾಗಿದೆ.

ನರೇಗಾ ಯೋಜನೆಯ ಅಡಿಯಲ್ಲಿ ಗ್ರಾಮ ಪಂಚಾಯಿತಿಯಿಂದ ಸಾಕಷ್ಟು ಕೂಲಿ ಕೆಲಸವನ್ನು ಒದಗಿಸುವ ಮೂಲಕ ನಗರ ಪ್ರದೇಶಕ್ಕೆ ವಲಸೆ ಹೋಗುವುದನ್ನು ತಪ್ಪಿಸಲಾಗಿದೆ. ಮೊದಲಿನಿಂದಲೂ ಹೊರಗಿನವರ ಸಂಪರ್ಕವಿಲ್ಲ ಯಾರೊಂದಿಗೂ ಬೆರೆಯುವುದು ಇಲ್ಲ. ಹೆಚ್ಚು ವಾಹನಗಳ ಓಡಾಟವಿಲ್ಲ. ಹೀಗಾಗಿ ಜನರಿಗೆ ಯಾವುದೇ ಸೋಂಕಿನ ಭಯಭೀತಿ ಇಲ್ಲ' ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಂಗರಾಜು ಹೇಳುತ್ತಾರೆ.

Recommended Video

   17 ವರ್ಷದ ಬಾಲಕಿ ದೈತ್ಯಾಕಾರದ ಕರಡಿಗೆ ಏನ್ ಮಾಡಿದ್ಲು ನೋಡಿ | Oneindia Kannada

   "ಈ ಗ್ರಾಮಗಳ ಜನರು ಕೋವಿಡ್ ಬಗ್ಗೆ ಎಚ್ಚರ ವಹಿಸಿದ್ದಾರೆ. ಆ ಕಾರಣದಿಂದ ಇವು ಕೋವಿಡ್ ಮುಕ್ತ ಗ್ರಾಮವಾಗಿವೆ' ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮಿ ತಿಳಿಸಿದರು.

   English summary
   Erakkatte, Karalakatte and Mulagana Katte village's Are free from Covid-19 infection In Chamarajanagar district.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X