ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 20 ವರ್ಷದ ಸಾಕಾನೆ ಸಾವು
ಚಾಮರಾಜನಗರ, ಸೆಪ್ಟೆಂಬರ್ 23: ಅನಾರೋಗ್ಯದಿಂದ ಸಾಕಾನೆಯೊಂದು ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಲ್ಲಿ ನಡೆದಿದೆ.
ಗಣೇಶ(20) ಎಂಬುದು ಮೃತಪಟ್ಟಿರುವ ಗಂಡಾನೆ. ಕಳೆದ ವಾರದ ಹಿಂದೆ ಗಂಟಲಿನ ಅನ್ನನಾಳದ ತೊಂದರೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರು ಬಿಟ್ಟಿದೆ. ಕಲ್ಕರೆ ವಲಯದ ರಾಂಪುರ ಆನೆ ಶಿಬಿರದಲ್ಲಿ ಅನಾರೋಗ್ಯದಿಂದ ಆನೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ರಾಂಪುರ ಆನೆ ಶಿಬಿರದಿಂದ ಬಂಡೀಪುರ ಕ್ಯಾಂಪಸ್‍ಗೆ ಕರೆತಂದಿದ್ದರು.
ಬಂಡೀಪುರ ಕ್ಯಾಂಪಸ್‍ನಲ್ಲಿ ಕಳೆದ ಐದು ದಿನಗಳಿಂದ ಚಿಕಿತ್ಸೆ ಕೊಟ್ಟರು ಆನೆ ಸ್ಪಂದಿಸದ ಕಾರಣ ಸಾವನ್ನಪ್ಪಿದೆ. 20 ವರ್ಷ ವಯಸ್ಸಿನ ಗಣೇಶ ಹುಲಿ ಸೆರೆ ಸೇರಿದಂತೆ ಹಲವು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ. ಸಾಕಾನೆ ಗಣೇಶನ ಅಂತ್ಯಕ್ರಿಯೆ ಬಂಡೀಪುರ ವಲಯದಲ್ಲಿ ನಡೆದಿದೆ.

ಪ್ಲಾಸ್ಟಿಕ್ ತಿಂದ ಆನೆ!
ಪ್ರವಾಸಿಗರ ಬೇಜವಾಬ್ದಾರಿಯಿಂದಾಗಿ ಕಾಡಾನೆಯೊಂದು ಪ್ಲಾಸ್ಟಿಕ್ ಕವರ್ ಅನ್ನು ತಿನ್ನುತ್ತಿರುವ ದೃಶ್ಯ ಬಂಡೀಪುರ ಮದುಮಲೈ ಅರಣ್ಯ ನಡುವಿನ ರಸ್ತೆಯ ಪಕ್ಕದಲ್ಲಿ ಕಂಡು ಬಂದಿದೆ. ಅಭಯಾರಣ್ಯಕ್ಕೆ ಭೇಟಿ ನೀಡಿದ್ದ ಪ್ರವಾಸಿಗರು ನಿಷೇಧಿತ ಪ್ಲಾಸ್ಟಿಕ್ ಕವರ್ ಅನ್ನು ಎಸೆದು ಹೋಗಿದ್ದಾರೆ. ಅದೇ ಪ್ಲಾಸ್ಟಿಕ್ ಕವರ್ ಆಹಾರವೆಂದು ತಿಳಿದ ಆನೆಯೊಂದು ಸೊಂಡಿಲಿನಿಂದ ತೆಗೆದುಕೊಂಡ ಬಳಿಕ ಬಾಯಿಗೆ ಹಾಕಿಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು. ಈ ಕುರಿತು ಪ್ರಾಣಿ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.
ಅಭಯಾರಣ್ಯಗಳಿಗೆ ಭೇಟಿ ನೀಡುವ ಪ್ರವಾಸಿಗರು ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಾಹನ ನಿಲ್ಲಿಸಬಾರದು, ಏನನ್ನೂ ಎಸೆಯಬಾರದು ಎಂಬ ನಿಯಮವಿದ್ದರೂ ಎಚ್ಚೆತ್ತುಕೊಳ್ಳದೇ ಈ ರೀತಿಯಲ್ಲಿ ಪ್ರಾಣಿಗಳ ಜೀವಕ್ಕೆ ಕುತ್ತು ತರುತ್ತಿದ್ದಾರೆ ಎಂದು ಸಾಮಾಜಿಕ ಜಾಲಾತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತ್ಯಾವರ ಕೊಪ್ಪದ ಹುಲಿ-ಸಿಂಹಧಾಮದಲ್ಲಿ ಹುಲಿ ಸಾವು
ಶಿವಮೊಗ್ಗ ಜಿಲ್ಲೆಯ ತ್ಯಾವರಕೊಪ್ಪದ ಹುಲಿ-ಸಿಂಹಧಾಮದಲ್ಲಿ ಅತ್ಯಂತ ಹಿರಿಯ ಹುಲಿ ಎಂಬ ಶ್ರೇಯಕ್ಕೆ ಪಾತ್ರವಾಗಿದ್ದ 20 ವರ್ಷದ ಹನುಮ ಎಂಬ ಹುಲಿ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದೆ.
ಹನುಮ 2002ರಲ್ಲಿ ಚಾಮುಂಡಿ-ಮಲೇಶಂಕರ ಹುಲಿಗಳ ಸಾಂಗತ್ಯದಿಂದ ಜನಿಸಿದ್ದ. ಪ್ರವಾಸಿಗರ ಆಕರ್ಷಣೆಗೆ ಪಾತ್ರವಾಗಿದ್ದ ಹನುಮ ವನ್ಯಧಾಮದಲ್ಲಿ ದೀರ್ಘಾವಧಿಯಲ್ಲಿದ್ದ ಹುಲೆ ಎಂಬ ಶ್ರೇಯಕ್ಕೆ ಪಾತ್ರನಾಗಿದ್ದ. ಗುರುವಾರ ಹುಲಿ ಹನುಮನ ಮರೋತ್ತರ ಪರೀಕ್ಷೆ ನಡೆಸಿ ವನ್ಯಧಾಮದಲ್ಲಿಯೇ ಅಂತ್ಯಕ್ರಿಯೆ ನಡೆಸಲಾಗಿದೆ.












Click it and Unblock the Notifications