ಚಾಮರಾಜನಗರ: ನಾಡಿನತ್ತ ಹೆಜ್ಜೆ ಹಾಕಿದ ಗಜಪಡೆ, ಈ ವಿಡಿಯೋ ವೈರಲ್ ಆದ ತಕ್ಷಣ ಆತಂಕಗೊಂಡ ಅನ್ನದಾತ
ಚಾಮರಾಜನಗರ, ಜನವರಿ, 10: ಬರೋಬ್ಬರಿ 10 ಆನೆಗಳ ಹಿಂಡು ಬೀಡು ಬಿಟ್ಟು ಬೆಳೆನಾಶದ ಆತಂಕಕ್ಕೆ ಕಾರಣವಾಗಿರುವ ಘಟನೆ ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ಅರಳವಾಡಿಯಲ್ಲಿ ನಡೆದಿದೆ.
ಕರ್ನಾಟಕ ಮತ್ತು ತಮಿಳುನಾಡಿನ ಗಡಿ ಪ್ರದೇಶ ಇದಾಗಿದ್ದು, ಎರಡೂ ರಾಜ್ಯಗಳ ಗಡಿಗ್ರಾಮಗಳ ರೈತರು ಕೃಷಿಯನ್ನೇ ಹೆಚ್ಚು ಅವಲಂಬಿಸಿದ್ದಾರೆ. ಇಂದು (ಜನವರಿ 10) ಮಧ್ಯಾಹ್ನ ಕಾಡಿನಿಂದ ಆಹಾರ ಅರಸಿ ನಾಡಿನತ್ತ ಬಂದಿರುವ ಕಾಡಾನೆ ಹಿಂಡು ಅರಳವಾಡಿ ಬಳಿ ಬೀಡು ಬಿಟ್ಟಿದ್ದು, ಗಡಿ ಗ್ರಾಮಗಳಲ್ಲಿ ಬೆಳೆನಾಶದ ಭೀತಿ ಶುರುವಾಗಿದೆ.

ತಮಿಳುನಾಡು ಭಾಗದಲ್ಲಿರುವ ಸದ್ಯ ಆನೆಗಳ ಹಿಂಡು ಅಲ್ಲಿಂದ ಅರಕಲವಾಡಿ, ಬಿಸಲವಾಡಿ, ಯಾನಗಳ್ಳಿ, ಬಂಡಿಗೌಡನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕೈಗೊಂಡು ಕಾಡಿಗೆ ಆನೆಗಳನ್ನು ಓಡಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಕಾಡೆಮ್ಮೆಗಳು ಹಾಗೂ ಗಜಪಡೆ ಮುಖಾಮುಖಿ
ವನ್ಯಜೀವಿಗಳು ಅಗಾಗ್ಗೆ ಮುಖಾಮುಖಿ ಆಗುತ್ತಿರುತ್ತವೆ. ಕೆಲವೊಮ್ಮೆ ಕಾಳಗಕ್ಕೆ ಇಳಿದರೇ, ಮತ್ತೊಮ್ಮೆ ಕಾಲ್ಕೀಳುತ್ತವೆ. ಇನ್ನೂ ಕೆಲವು ತಮ್ಮ ಪಾಡಿಗೆ ತಾವು ಹೋಗುತ್ತವೆ.ಇದೀಗ ಅಂಥದ್ದೇ ಒಂದು ಘಟನೆ ಚಾಮರಾಜನಗರದ ಬಿಳಿಗಿರಿರಂಗನಾಥ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ಕಾಡೆಮ್ಮೆ ಹಾಗೂ ಕಾಡಾನೆಗಳ ಹಿಂಡು ಮುಖಾಮುಖಿ ಆಗಿವೆ. ಕಾಡೆಮ್ಮೆ ಹಾಗೂ ಆನೆಗಳು ಕೆಲ ಕ್ಷಣ ದೃಷ್ಟಿ ಯುದ್ಧ ನಡೆಸಿದ ಬಳಿಕ, ಎಮ್ಮೆಗಳ ಸಹವಾಸ ಬೇಡ ಎನ್ನುವ ರೀತಿ ಕಾಡಾನೆಗಳ ಹಿಂಡು ಬೇರೆ ದಾರಿಯತ್ತ ತೆರಳಿರುವ ದೃಶ್ಯ ಇದೀಗ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ.
ಒಟ್ಟಿನಲ್ಲಿ ಹೇಳುವುದಾದರೆ ಮನುಷ್ಯರು ಕಾದಾಡುವಾಗಲೂ, ಕ್ಲೈಮ್ಯಾಕ್ಸ್ ಎನ್ನುವ ರೀತಿಯಲ್ಲಿ ಕೊನೆಯಲ್ಲಿ ಜಗಳ ಬಿಡಿಸಿ ಇದಕ್ಕೆಲ್ಲ ನಾಂದಿಯಾಡುವವರು ಇದ್ದೇ ಇರುತ್ತಾರೆ. ಅದೇ ರೀತಿ ಇಲ್ಲಿ ಕಾಡೆಮ್ಮೆ ಹಾಗೂ ಕಾಡಾನೆಗಳು ಮುಖಾಮುಖಿಯಾಗಿದ್ದು, ಕೊನೆಗೆ ತಾವೇ ಸೋಲೊಪ್ಪಿಕೊಳ್ಳುವ ರೀತಿಯಲ್ಲಿ ಕಾಡಾನೆಗಳು ಹಿಂದೆ ಸರಿದ ಘಟನೆ ನಡೆದಿದೆ.












Click it and Unblock the Notifications