'ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಪಿಎಲ್ಐ ಯೋಜನೆ 1 ವರ್ಷ ವಿಸ್ತರಣೆ': ವಿತ್ತ ಸಚಿವೆ ಘೋಷಣೆ
ನವದೆಹಲಿ, ಜೂ.28: ''ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ಸ್ ಉತ್ಪಾದನೆಗಾಗಿ ಉತ್ಪಾದನಾ-ಲಿಂಕ್ಡ್ ಪ್ರೋತ್ಸಾಹಕ (ಪಿಎಲ್ಐ) ಯೋಜನೆಯ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ,'' ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜೂನ್ 28 ರಂದು ಘೋಷಿಸಿದರು.
''ಈ ಯೋಜನೆ 2020-21ರಲ್ಲಿ ಪ್ರಾರಂಭವಾಗಿ, ಐದು ವರ್ಷಗಳ ಅವಧಿಗೆ ಚಾಲ್ತಿಯಲ್ಲಿ ಇರಬೇಕಾಗಿತ್ತು. ಈ ಯೋಜನೆ ಈಗ 2025-26ರವರೆಗೆ ಮುಂದುವರಿಯಲಿದೆ,'' ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.
ಈ ಯೋಜನೆಯಡಿ ಭಾಗಿಯಾಗುವ ಕಂಪನಿಗಳು ತಮ್ಮ ಉತ್ಪಾದನಾ ಗುರಿಗಳನ್ನು ಪೂರೈಸಲು ಐದು ವರ್ಷಗಳ ಕಾಲಾವಕಾಶ ಪಡೆಯಲಿದೆ.

"2019-20ರ ಅವಧಿಯಲ್ಲಿ ಸಂಸ್ಥೆಗಳಿಗೆ ಪ್ರೋತ್ಸಾಹಕಗಳು ಅನ್ವಯವಾಗುತ್ತವೆ. ಆದಾಗ್ಯೂ, ಕೋವಿಡ್ ಸಂಬಂಧಿತ ಲಾಕ್‌ಡೌನ್‌ನಿಂದಾಗಿ ಕಂಪೆನಿಗಳಿಗೆ ಮಾರಾಟ ಹೆಚ್ಚಳ ಸಾಧಿಸಲು ಸಾಧ್ಯವಾಗಲಿಲ್ಲ," ಎಂದಿದ್ದಾರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.
ನವೆಂಬರ್ 2020 ರಲ್ಲಿ ಕೇಂದ್ರ ಸಚಿವ ಸಂಪುಟ 10 ಕ್ಷೇತ್ರಗಳಿಗೆ ಪಿಎಲ್ಐ ಯೋಜನೆಗೆ ಅನುಮೋದನೆ ನೀಡಿದೆ. ಇವುಗಳಲ್ಲಿ ಸೆರಾಮಿಕ್ ವಸ್ತುಗಳು, ಆಟೋಮೋಟಿವ್ ಮತ್ತು ಆಟೋಮೋಟಿವ್ ಘಟಕಗಳು, ಟೆಲಿಕಾಂ ಮತ್ತು ನೆಟ್‌ವರ್ಕಿಂಗ್ ಉತ್ಪನ್ನಗಳು, ಸುಧಾರಿತ ಕೆಮಿಸ್ಟ್ರಿಗಳು, ಸೆಲ್ ಬ್ಯಾಟರಿ, ಜವಳಿ, ಆಹಾರ ಉತ್ಪನ್ನಗಳು, ಸೋಲರ್ ಮಾಡ್ಯೂಲ್‌ಗಳು, ವೈಟ್ ಗೂಟ್ಸ್ ಹಾಗೂ ವಿಶೇಷ ಉಕ್ಕುಗಳು ಸೇರಿವೆ. ಫೆಬ್ರವರಿ 2021 ರಲ್ಲಿ ಲ್ಯಾಪ್‌ಟಾಪ್‌ಗಳು ಮತ್ತು ಐಟಿ ಹಾರ್ಡ್‌ವೇರ್ ಅನ್ನು ಈ ಪಟ್ಟಿಗೆ ಸೇರಿಸಲಾಗಿದೆ.
ಸರಕುಗಳಿಗಾಗಿ (ವೈಟ್ ಗೂಡ್ಸ್) ಪಿಎಲ್ಐ ಯೋಜನೆ 2021 ರ ಏಪ್ರಿಲ್ 1 ರಂದು ಕಾರ್ಯರೂಪಕ್ಕೆ ಬಂದಿದೆ. ಈ ಕಾರ್ಯಕ್ರಮದಡಿಯಲ್ಲಿ, ಹವಾನಿಯಂತ್ರಣ ಮತ್ತು ಎಲ್ಇಡಿ ಉತ್ಪಾದನಾ ಜಾಗದಲ್ಲಿ ಅರ್ಹರಿಗೆ ಐದು ವರ್ಷಗಳ ಅವಧಿಯಲ್ಲಿ 6,238 ಕೋಟಿ ರೂ. ಲಭಿಸಲಿದೆ. ಇದಕ್ಕಿಂತ ಹೆಚ್ಚಾಗಿ, ಲ್ಯಾಪ್‌ಟಾಪ್‌ಗಳು ಮತ್ತು ಐಟಿ ಹಾರ್ಡ್‌ವೇರ್ ಯೋಜನೆ ನಾಲ್ಕು ವರ್ಷಗಳಲ್ಲಿ ಒಟ್ಟು 7,350 ಕೋಟಿ ರೂ. ಪಡೆಯಲಿದೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications