Stock Market: 4 ದಿನದಲ್ಲಿ ₹25 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು
ಭಾರತೀಯ ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಕಳೆದ ನಾಲ್ಕು ದಿನಗಳಿಂದ ನೆಮ್ಮದಿಯೇ ಇಲ್ಲದಂತಾಗಿದೆ. ಸತತವಾಗಿ ನಾಲ್ಕು ದಿನ ಷೇರು ಮಾರುಕಟ್ಟೆ ಕುಸಿತ ಕಂಡಿದ್ದು, ಹೂಡಿಕೆದಾರರು ಬರೋಬ್ಬರಿ 25 ಲಕ್ಷ ರೂಪಾಯಿ ನಷ್ಟ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ಕೇಂದ್ರ ಪಟ್ಟಿ ಮಾಡಲಾದ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣ ₹4,17,05,906.74 ಕೋಟಿ ($4.82 ಟ್ರಿಲಿಯನ್) ಗೆ ಕುಸಿದಿದೆ. ನಾಲ್ಕು ದಿನಗಳಲ್ಲಿ ₹24, 69,243.3 ಕೋಟಿಗಳಷ್ಟು ನಷ್ಟವಾಗಿದೆ. ಷೇರುಗಳ ಮೌಲ್ಯ ತೀವ್ರವಾಗಿ ಕುಸಿತದ ಬಳಿಕ ಬಿಎಸ್‌ಇ ಲಿಸ್ಟೆಡ್ ಸಂಸ್ಥೆಗಳ ಮಾರುಕಟ್ಟೆ ಬಂಡವಾಳೀಕರಣ $5-ಟ್ರಿಲಿಯನ್‌ಗಿಂತ ಕಡಿಮೆಯಾಗಿದೆ.

ಸೋಮವಾರ ಕೂಡ ಮಾರುಕಟ್ಟೆ ತೀವ್ರ ಕುಸಿತ ಕಂಡಿದ್ದು ಒಂದೇ ದಿನ 12.61 ಲಕ್ಷ ಕೋಟಿ ರೂಪಾಯಿ ಸಂಪತ್ತು ಕರಗಿಹೋಗಿದೆ. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಹಲವು ವಿದ್ಯಮಾನಗಳು ಭಾರತೀಯ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ನಾಲ್ಕು ದಿನಗಳಲ್ಲಿ ಬಿಎಸ್‌ಇ ಸೆನ್ಸೆಕ್ಸ್ 1,869.1 ಪಾಯಿಂಟ್‌ಗಳು (2.39%) ಕುಸಿತ ಕಂಡಿದೆ.
ಈ ತಿಂಗಳು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸುಮಾರು 20 ಸಾವಿರ ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿರುವುದು ಷೇರು ಮಾರುಕಟ್ಟೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಅಮೆರಿಕದಲ್ಲಿ ಉದ್ಯೋಗ ಕಡಿತದ ಆತಂಕದ ಬೆನ್ನಲ್ಲೇ ಡಾಲರ್ ಎದುರು ರೂಪಾಯಿ ಮತ್ತಷ್ಟು ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದ್ದು ಇದರ ಪರಿಣಾಮವಾಗಿ ಡಾಲರ್ ಸೂಚ್ಯಂಕ ದೃಢವಾಯಿತು ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್‌ನ ಸಂಶೋಧನೆ, ಸಂಪತ್ತು ನಿರ್ವಹಣೆಯ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಕಳೆದ ಮೂರು ತಿಂಗಳ ಅವಧಿಯಲ್ಲಿ ಕಚ್ಚಾ ತೈಲ ಬೆಲೆಗಳು ಗರಿಷ್ಠ ಮಟ್ಟವನ್ನು ತಲುಪಿವೆ ಎಂದು ಸಿದ್ಧಾರ್ಥ್ ಖೇಮ್ಕಾ ಹೇಳಿದ್ದಾರೆ. ಯುಎಸ್ ನಿರ್ಬಂಧಗಳು ರಷ್ಯಾದ ಕಚ್ಚಾ ತೈಲ ಪೂರೈಕೆಗೆ ಅಡ್ಡಿಯಾಗಿದ್ದು ಜಾಗತಿಕ ಅನಿಶ್ಚಿತತೆಗೆ ಕಾರಣವಾಯಿತು.
ಆಕ್ಸಿಸ್ ಬ್ಯಾಂಕ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಹಿಂದೂಸ್ತಾನ್ ಯೂನಿಲಿವರ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಲಾಭ ಗಳಿಸಿದ್ದರೆ, ಜೊಮಾಟೊ, ಪವರ್ ಗ್ರಿಡ್, ಅದಾನಿ ಪೋರ್ಟ್ಸ್, ಟಾಟಾ ಸ್ಟೀಲ್, ಎನ್‌ಟಿಪಿಸಿ, ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಮಹೀಂದ್ರಾ, ಏಷ್ಯನ್ ಪೇಂಟ್ಸ್, ಟೆಕ್ ಮಹೀಂದ್ರಾ, ಅಲ್ಟ್ರಾಟೆಕ್ ಸಿಮೆಂಟ್, ಸನ್ ಫಾರ್ಮಾ ಷೇರುಗಳ ಬೆಲೆ ಕುಸಿತ ಕಂಡವು. 3562 ಷೇರುಗಳ ಬೆಲೆ ಕುಸಿತ ಕಂಡಿದ್ದರೆ 555 ಷೇರುಗಳ ಬೆಲೆಗಳು ಮಾತ್ರ ಏರಿಕೆಯಾಗಿದೆ. 131 ಷೇರುಗಳ ಬೆಲೆ ತಟಸ್ಥವಾಗಿ ಉಳಿದುಕೊಂಡಿವೆ.












Click it and Unblock the Notifications