120.22 ಲಕ್ಷ ಕೋಟಿ ತಲುಪಿದ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಬಂಡವಾಳ

By: ಕೆಜಿ ಕೃಪಾಲ್
Subscribe to Oneindia Kannada

ಕೆಜಿ ಕೃಪಾಲ್ ಅವರಿಗೆ ಷೇರು ಮಾರುಕಟ್ಟೆಯಲ್ಲಿ ಎರಡು-ಮೂರು ದಶಕಗಳ ಅನುಭವವಿದೆ. ಸಾಂಪ್ರದಾಯಿಕ ಹೂಡಿಕೆ ಹಾಗೂ ಬದಲಾದ ಟ್ರೆಂಡ್ ಜತೆಜತೆಗೆ ಅವರ ಚಿಂತನೆ ಬೆಸೆದುಕೊಂಡಿರುತ್ತದೆ. ಇಂದಿನ ಲೇಖನದಲ್ಲಿ ಷೇರು ಪೇಟೆ ಬಂಡವಾಳ ಮೌಲ್ಯದ ಬಗ್ಗೆ ತುಂಬ ಸೊಗಸಾಗಿ ತಿಳಿಸಿಕೊಟ್ಟಿದ್ದಾರೆ.

"ಷೇರು ಮಾರುಕಟ್ಟೆಯಲ್ಲಿ ಈ ಕಂಪೆನಿಯ ಬಂಡವಾಳ ಅಷ್ಟು ಸಾವಿರ ಕೋಟಿ ನಷ್ಟವಾಯಿತು, ಇಷ್ಟು ಸಾವಿರ ಕೋಟಿ ಹೆಚ್ಚಾಯಿತು ಎಂಬಂಥ ಸುದ್ದಿ ನೀವು ಓದಿರ್ತೀರಿ, ಟಿವಿಗಳಲ್ಲಿ ನೋಡಿರ್ತೀರಿ ಕೂಡ. ಇದೇನು ಬಂಡವಾಳ? ಅದು ಹೇಗೆ ನಷ್ಟವಾಗುತ್ತೆ, ಅದು ಹೇಗೆ ಲಾಭ ಎಂಬ ಪ್ರಶ್ನೆ ನಿಮಗೆ ಬಂದಿರುತ್ತೆ. ಅದನ್ನು ಇವತ್ತು ವಿವರಿಸಿ, ಒಂದು ಹೆಮ್ಮೆ ಹಾಗೂ ಸಂತೋಷದ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ತಿದೀನಿ".[ಬಿಜೆಪಿ ಜಯದ ಎಫೆಕ್ಟ್: ಸೆನ್ಸೆಕ್ಸ್, ನಿಫ್ಟಿಯಲ್ಲಿ ದಾಖಲೆಯ ಏರಿಕೆ]

ಕ್ಯಾಪಿಟಲೈಸೇಷನ್ ಎಂಬುದು ಇಂಗ್ಲಿಷ್ ಪದ. ಅದನ್ನೇ ಬಂಡವಾಳ ಮೌಲ್ಯ ಎಂದು ಕನ್ನಡದಲ್ಲಿ ಕರೆಯಬಹುದು. ಉದಾಹರಣೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಷೇರುಗಳು ಮಾರುಕಟ್ಟೆಯಲ್ಲಿವೆ. ಒಂದು ಷೇರಿನ ಇವತ್ತಿನ (ಮಾರ್ಚ್ 20, 2017) ಬೆಲೆ 274 ರುಪಾಯಿ ಇದೆ. ಬಂಡವಾಳ ಮೌಲ್ಯ ಅಂದರೆ, ಒಟ್ಟಾರೆ ವಿತರಿಸಿರುವ ಷೇರುಗಳ ಸಂಖೆಯನ್ನು 274ರಿಂದ ಗುಣಿಸಬೇಕು. ಅದು ಎಸ್ ಬಿಐ ಒಂದರ ಲೆಕ್ಕವಾಯಿತು.

ಇನ್ಫೋಸಿಸ್, ವಿಪ್ರೋ, ಬಿಎಚ್ ಇಎಲ್, ಎಲ್ ಅಂಡ್ ಟಿ ಈ ಥರ ಎಷ್ಟೋ ಕಂಪೆನಿಗಳ ಕ್ಯಾಪಿಟಲೈಸೇಷನ್ ಇರುತ್ತದೆ. ಒಟ್ಟು 5500ಕ್ಕೂ ಹೆಚ್ಚು ಕಂಪೆನಿಗಳು ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ನೋಂದಾಯಿಸಿಕೊಂಡಿವೆ. ಅವೆಲ್ಲದರ ಒಟ್ಟು ಬಂಡವಾಳ ಮೌಲ್ಯ ಸೇರಿದರೆ, ಅದು ಷೇರು ಪೇಟೆಯ ಬಂಡವಾಳ ಮೌಲ್ಯ ಆಗುತ್ತದೆ.[ಎಚ್ಚರ, ಏನನ್ನಾದರೂ ಮಾರಲು ಸಿದ್ಧವಿರುವ ಲಾಭಕೋರ ಜಗತ್ತಿದು...]

ಅಂದಹಾಗೆ ಈ ಎಲ್ಲ ಷೇರುಗಳ ಒಟ್ಟು ಮೌಲ್ಯವು ಈಗ ದಾಖಲೆಯ ಮಟ್ಟಕ್ಕೆ ತಲುಪಿದೆ. 20ನೇ ಮಾರ್ಚ್ 2017ರಂದು ಪೇಟೆಯ ಬಂಡವಾಳ ಮೌಲ್ಯವು 120.22 ಲಕ್ಷ ಕೋಟಿ ರುಪಾಯಿಗೆ ಏರಿಕೆ ಕಂಡು, ಸಾರ್ವಕಾಲಿಕ ಗರಿಷ್ಠವಾದ 120.32 ಲಕ್ಷ ಕೋಟಿಗೆ ಸಮೀಪವಿದೆ.

ಇವುಗಳಲ್ಲಿ ಕೇವಲ ಅಗ್ರಮಾನ್ಯ ಕಂಪೆನಿಗಳಷ್ಟೇ ಅಲ್ಲದೆ ಎಲ್ಲಾ ವರ್ಗದ ಷೇರುಗಳ, ಅಂದರೆ ಜೊಳ್ಳು, ಟೊಳ್ಳು, ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್ ಎನ್ನುವ ಭೇದವಿಲ್ಲದೆ, ಎಲ್ಲಾ ವಲಯದ ಷೇರುಗಳ ಮೌಲ್ಯವನ್ನು ಸೇರಿಸಲಾಗಿದೆ.[ಆಕ್ಸಿಸ್ ಬ್ಯಾಂಕ್ ಷೇರುಗಳಲ್ಲಿ ಅದೆಂಥ ಮಿಂಚು, ಇದೆಂಥ ತಲ್ಲಣ?]

2001-02 ರಲ್ಲಿ 6.12 ಲಕ್ಷ ಕೋಟಿ

2001-02 ರಲ್ಲಿ 6.12 ಲಕ್ಷ ಕೋಟಿ

ಬದಲಾವಣೆಯ ವೇಗ ಹೇಗಿದೆ ಎಂದರೆ, 2001-02 ರಲ್ಲಿ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನ ಮಾರ್ಕೆಟ್ ಕ್ಯಾಪಿಟಲೈಸೇಶನ್ ಮೌಲ್ಯ 6.12 ಲಕ್ಷ ಕೋಟಿಯಿತ್ತು. ಇದು 2004-05 ರಲ್ಲಿ 16.98 ಲಕ್ಷ ಕೋಟಿಗೆ ಏರಿಕೆ ಕಂಡಿತು. ನಂತರದ ವರ್ಷ 2005-06ರಲ್ಲಿ 30.22 ಲಕ್ಷ ಕೋಟಿಗೆ ಜಿಗಿಯಿತು.

30.86 ಲಕ್ಷ ಕೋಟಿಗೆ ಕುಸಿತ

30.86 ಲಕ್ಷ ಕೋಟಿಗೆ ಕುಸಿತ

2008ರ ಜನವರಿ 10ರಂದು ಸೆನ್ಸೆಕ್ಸ್ 21,206 ಪಾಯಿಂಟುಗಳಿಗೆ ಚಿಮ್ಮಿ, ಆಗ ಅಲ್ಲಿಯವರೆಗಿನ ಆಲ್ ಟೈಮ್ ಹೈ ದಾಖಲೆ ನಿರ್ಮಿಸಿದಾಗ ಮಾರ್ಕೆಟ್ ಕ್ಯಾಪಿಟಲೈಸೇಶನ್ ಮೌಲ್ಯ 71,41,611 ಕೋಟಿಯೂ ಹೊಸ ದಾಖಲೆಯಾಗಿತ್ತು. ಪೇಟೆಯ ವಿಸ್ಮಯಕಾರಿ ಬೆಳನಣಿಗೆಯು ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನ ಮಾರ್ಕೆಟ್ ಕ್ಯಾಪಿಟಲೈಸೇಶನ್ ಮೌಲ್ಯದ ಗಾತ್ರವನ್ನು ನಂತರದ ವರ್ಷದಲ್ಲಿ ಅಂದರೆ 2008-09 ರಲ್ಲಿ 30.86 ಲಕ್ಷ ಕೋಟಿಗೆ ಕುಸಿಯುವಂತೆ ಮಾಡಿತು.

ಮಿಂಚಿನ ವೇಗದಲ್ಲಿ ಏರಿಕೆ

ಮಿಂಚಿನ ವೇಗದಲ್ಲಿ ಏರಿಕೆ

ಇಲ್ಲಿಂದ ಚೇತರಿಕೆಯು ಸಹ ಮಿಂಚಿನ ವೇಗದಲ್ಲಿ ಕಂಡು 2009-10 ರಲ್ಲಿ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನ ಮಾರ್ಕೆಟ್ ಕ್ಯಾಪಿಟಲೈಸೇಶನ್ ಮೌಲ್ಯ 61.65 ಲಕ್ಷ ಕೋಟಿಗೆ ಜಿಗಿಯಿತು. ಇದು ನಂತರದ ಮೂರು ವರ್ಷಗಳು ಮುಂದುವರೆದು ಸಮತೋಲನ ಕಂಡು ಈಗ 122.22 ಲಕ್ಷ ಕೋಟಿ ಮೀರಿ ನಿಂತಿದೆ.

ಇಪ್ಪತ್ತು ಪಟ್ಟು ಹೆಚ್ಚಳ

ಇಪ್ಪತ್ತು ಪಟ್ಟು ಹೆಚ್ಚಳ

ವಿಶ್ವದಲ್ಲಿ ಅತಿ ಹೆಚ್ಚು ಕಂಪೆನಿಗಳನ್ನು ಲಿಸ್ಟಿಂಗ್ ಮಾಡಿಕೊಂಡಿರುವ ಸ್ಟಾಕ್ ಎಕ್ಸ್ ಚೇಂಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನ ಮಾರ್ಕೆಟ್ ಕ್ಯಾಪಿಟಲೈಸೇಶನ್ ಮೌಲ್ಯ 2001-02ರಿಂದ ಇಲ್ಲಿಯವರೆಗೂ ಅಂದರೆ ಸುಮಾರು 16 ವರ್ಷಗಳಲ್ಲಿ ಇಪ್ಪತ್ತು ಪಟ್ಟು ಹೆಚ್ಚಾಗಿದೆ ಎಂಬುದು ಗಮನಾರ್ಹವಾಗಿದೆ.

ಎ ಗುಂಪಿನ ಷೇರುಗಳ ಕೊಡುಗೆ

ಎ ಗುಂಪಿನ ಷೇರುಗಳ ಕೊಡುಗೆ

122 ಲಕ್ಷ ಕೋಟಿ ರುಪಾಯಿಗಳ ಮಾರ್ಕೆಟ್ ಕ್ಯಾಪಿಟಲೈಸೇಶನ್ ಮೌಲ್ಯದಲ್ಲಿ ಷೇರು ವಿನಿಮಯ ಕೇಂದ್ರದ 'ಎ' ಗುಂಪಿನ ಕಂಪೆನಿಗಳ ಕೊಡುಗೆ ಹೆಚ್ಚಾಗಿದ್ದು, ಸಿಂಹಪಾಲು ಪಡೆದಿವೆ. ಮೊದಲಿನಿಂದಲೂ 'ಎ' ಗುಂಪಿನ ಕಂಪೆನಿಗಳು ಶೇ 80ಕ್ಕೂ ಹೆಚ್ಚಿನ ಕೊಡುಗೆಯನ್ನು ಮಾರ್ಕೆಟ್ ಕ್ಯಾಪಿಟಲೈಸೇಷನ್ ಗೆ ನೀಡಿರುವುದು ವಿಶೇಷವಾಗಿದೆ.

ಹೂಡಿಕೆಗೆ ಸುರಕ್ಷಿತ

ಹೂಡಿಕೆಗೆ ಸುರಕ್ಷಿತ

'ಎ' ಗುಂಪಿನ ಕಂಪೆನಿಗಳ ಬಂಡವಾಳದ ಗಾತ್ರವು ಹೆಚ್ಚಾಗಿದ್ದು, ಇವುಗಳು ಹಿತಾಸಕ್ತರ ಚಟುವಟಿಕೆಗೆ ಸುಲಭವಾಗಿ ದೊರೆಯದ ಕಾರಣ ಸ್ವಲ್ಪಮಟ್ಟಿನ ಸುರಕ್ಷಿತ ಹೂಡಿಕೆಗೆ ಅನುವು ಮಾಡಿಕೊಟ್ಟಿದೆ. ವಿವಿಧ ವಿತ್ತೀಯ ಸಂಸ್ಥೆಗಳು ಹೆಚ್ಚಾಗಿ 'ಎ' ಗುಂಪಿನ ಷೇರುಗಳಲ್ಲಿ ವಹಿವಾಟು ನಡೆಸುವುದರಿಂದ ವಹಿವಾಟಿನ ಪ್ರಮಾಣದಲ್ಲೂ ಈ ಸಮೂಹವು ಸಿಂಹಪಾಲು ಪಡೆಯಲು ಸಾಧ್ಯವಾಗಿದೆ. ಈ ಕಂಪೆನಿಗಳ ಷೇರಿನ ಬೆಲೆಯೂ ಸ್ವಲ್ಪ ಏರಿಕೆ ಕಂಡರೂ ಮಾರ್ಕೆಟ್ ಕ್ಯಾಪಿಟಲೈಸೇಷನ್ ಗೆ ಬೃಹತ್ ಕೊಡುಗೆ ನೀಡುತ್ತವೆ.

ಸಾರ್ವಕಾಲಿಕ ಗರಿಷ್ಠ

ಸಾರ್ವಕಾಲಿಕ ಗರಿಷ್ಠ

ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನ ಹೆಗ್ಗುರುತಾದ ಸೆನ್ಸೆಕ್ಸ್ 2015ರ, ಮಾರ್ಚ್ 4ರಂದು 30,024.74 ಅಂಶ (ಪಾಯಿಂಟ್) ತಲುಪಿ ಸಾರ್ವಕಾಲಿಕ ಗರಿಷ್ಠ ದಾಖಲಿಸಿದಾಗಲೂ ಮಾರ್ಕೆಟ್ ಕ್ಯಾಪಿಟಲೈಸೇಶನ್ ಮೌಲ್ಯವು 105.39 ಲಕ್ಷ ಕೋಟಿಯಲ್ಲಿತ್ತು. ಈಗ ಸೆನ್ಸೆಕ್ಸ್ ವಾರ್ಷಿಕ ಗರಿಷ್ಠದಲ್ಲಿ ಇಲ್ಲದಿದ್ದರೂ ಮಾರ್ಕೆಟ್ ಕ್ಯಾಪಿಟಲೈಸೇಶನ್ ಮೌಲ್ಯ ಮಾತ್ರ ಸಾರ್ವಕಾಲೀನ ಗರಿಷ್ಠ ತಲುಪಿರುವುದು ವಿಸ್ಮಯಕಾರಿಯಾಗಿದೆ.

ಬೆಲೆ ವಿಪರೀತ ಏರಿದಾಗ ಹೂಡಿಕೆಯಲ್ಲಿ ಎಚ್ಚರ

ಬೆಲೆ ವಿಪರೀತ ಏರಿದಾಗ ಹೂಡಿಕೆಯಲ್ಲಿ ಎಚ್ಚರ

ಷೇರು ಪೇಟೆಯಲ್ಲಿ ಚಟುವಟಿಕೆಗಳು ಒಂದೇ ಅಂಶವನ್ನು ಅವಲಂಬಿಸಿಲ್ಲ. ಸೆನ್ಸೆಕ್ಸ್ ಆಲ್ ಟೈಮ್ ಹೈ ತಲುಪದಿದ್ದರೂ ಮಾರ್ಕೆಟ್ ಕ್ಯಾಪಿಟಲೈಸೇಶನ್ ಮೌಲ್ಯ ದಾಖಲೆ ಮಟ್ಟಕ್ಕೆ ತಲುಪಿರುವುದು ಇಂದಿನ ಚಟುವಟಿಕೆಗಳು ಬ್ರಾಡ್ ಬೇಸ್ ಆಗಿ ಹೆಚ್ಚಿನ ಕಂಪೆನಿಗಳು ಏರಿಕೆಯಲ್ಲಿ ಭಾಗಿಯಾಗಿವೆ ಎನ್ನಬಹುದು. ಈ ಸಂದರ್ಭದಲ್ಲಿ ಮಾರ್ಕೆಟ್ ಗುರು ವಾರನ್ ಬಫೆಟ್ ನೀಡಿರುವ ಎಚ್ಚರಿಕೆ ಮಾತು, "ಈಗಿನ ಷೇರು ದರಗಳು ಓವರ್ ವ್ಯಾಲ್ಯೂ ಜೋನ್ ನತ್ತ ಸಾಗಿವೆ" ಎಂಬುದನ್ನು ಹೂಡಿಕೆದಾರರು ಗಮನದಲ್ಲಿಟ್ಟುಕೊಳ್ಳಿ.

ಕೆಜಿ ಕೃಪಾಲ್ ಅವರ ಸಂಪರ್ಕ ಮಾಹಿತಿ

ಕೆಜಿ ಕೃಪಾಲ್ ಅವರ ಸಂಪರ್ಕ ಮಾಹಿತಿ

ಷೇರು ಮಾರುಕಟ್ಟೆಗೆ ಸಂಬಂಧಿಸಿದಂತೆ ಪ್ರಶ್ನೆ, ಗೊಂದಲ, ಸಲಹೆಗಳಿಗೆ ಕೆಜಿ ಕೃಪಾಲ್ ಅವರನ್ನು ಸೋಮವಾರದಿಂದ ಬುಧವಾರದವರೆಗೆ ಸಂಜೆ 4.30ರ ನಂತರ ಸಂಪರ್ಕಿಸಬಹುದು. ಮೊಬೈಲ್ ಫೋನ್ ಸಂಖ್ಯೆ 9886313380.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bombay stock exchange capitalisation near it's all time high on March 20th, 2017. Stock market expert KG Kripal explains about capitalisation milestone reached by BSE.
Please Wait while comments are loading...