ರುಪಾಯಿ ಮೌಲ್ಯ ಕುಸಿದಿಲ್ಲ, ಡಾಲರ್ ಮೌಲ್ಯ ಬಲಗೊಳ್ಳುತ್ತಿದೆ: ನಿರ್ಮಲಾ ಸೀತಾರಾಮನ್
ವಾಷಿಂಗ್ಟನ್, ಅಕ್ಟೋಬರ್ 17: ಭಾರತದ ರುಪಾಯಿ ಮೌಲ್ಯ ಕುಸಿದಿಲ್ಲ. ಆದರೆ, ಅಮೆರಿಕದ ಡಾಲರ್ ಮೌಲ್ಯ ಬಲಗೊಳ್ಳುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಹೀಗೆ ಹೇಳುವ ಮೂಲಕ ಭಾರತದ ರುಪಾಯಿ ಮೌಲ್ಯ ಕುಸಿತವನ್ನು ಸಮರ್ಥಿಕೊಳ್ಳಲು ನಿರ್ಮಲಾ ಸೀತಾರಾಮನ್ ಯತ್ನಿಸಿದ್ದಾರೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ ಹಾಗೂ ವಿಶ್ವಬ್ಯಾಂಕ್ ವಾರ್ಷಿಕ ಸಭೆಗಳಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು ಪ್ರಬಲವಾಗಿವೆ. ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದಲ್ಲಿ ಹಣದುಬ್ಬರ ಕಡಿಮೆಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.
'ಭಾರತದ ಹಣದುಬ್ಬರವನ್ನು ರುಪಾಯಿ ಮೌಲ್ಯದ ಕುಸಿತವೆಂದು ನಾನು ಭಾವಿಸುವುದಿಲ್ಲ. ಆದರೆ, ಡಾಲರ್ ಮೌಲ್ಯ ನಿರಂತರವಾಗಿ ಬಲಗೊಳ್ಳುತ್ತಿದೆ ಎಂಬುದಾಗಿ ಭಾವಿಸುತ್ತೇನೆ' ಎಂದು ತಿಳಿಸಿದರು. ರುಪಾಯಿ ಮೌಲ್ಯ ಕುಸಿಯುತ್ತಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಈ ರೀತಿಯಾಗಿ ಉತ್ತರಿಸಿದರು.
'ಡಾಲರ್ ಮೌಲ್ಯದ ಏರಿಕೆಯನ್ನು ಭಾರತದ ರುಪಾಯಿ ತಡೆದುಕೊಂಡಿದೆ. ಡಾಲರ್ ಬಲವರ್ಧನೆಯ ಪರವಾಗಿ ವಿನಿಮಯ ದರವಿದೆ. ಹಲವು ದೇಶಗಳ ಕರೆನ್ಸಿಗಳಿಗಿಂತ ಭಾರತದ ರೂಪಾಯಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ' ಎಂದು ಅವರು ಹೇಳಿದರು.
ವ್ಯಾಪಕ ಟೀಕೆಗೆ ಗುರಿಯಾದ ನಿರ್ಮಲಾ ಸೀತಾರಾಮನ್ ಹೇಳಿಕೆ
ರುಪಾಯಿ ಮೌಲ್ಯ ಕುಸಿತದ ಬಗ್ಗೆ ನಿರ್ಮಲಾ ಸೀತಾರಾಮನ್ ನೀಡಿರುವ ಹೇಳಿಕೆಯು ಟೀಕೆಗೆ ಗುರಿಯಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, 'ರುಪಾಯಿ ಮೌಲ್ಯ ಕುಸಿಯುತ್ತಿಲ್ಲ. ಆದರೆ, ಡಾಲರ್ ಮೌಲ್ಯ ಬಲಗೊಳ್ಳುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದು ಸಂಪೂರ್ಣವಾಗಿ ನಿಜವಾಗಿದೆ. ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಅಥವಾ ಪಕ್ಷ ಯಾವಾಗಲೂ ಹೀಗೆ ಹೇಳುತ್ತದೆ: ನಾವು ಚುನಾವಣೆಯಲ್ಲಿ ಸೋತಿಲ್ಲ. ಆದರೆ, ಇನ್ನೊಂದು ಪಕ್ಷ ಜಯಸಾಧಿಸಿದೆ' ಎಂದು ವ್ಯಂಗ್ಯವಾಡಿದ್ದಾರೆ.

ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್, 'ರೂಪಾಯಿ ಕುಸಿಯುತ್ತಿಲ್ಲ, ಡಾಲರ್ ಬಲಗೊಳ್ಳುತ್ತಿದೆ ಅಷ್ಟೇ ಎಂದು ಕೇಂದ್ರ ವಿತ್ತ ಸಚಿವೆ ಹೇಳಿದ್ದಾರೆ. ಭಾರತದ ಅರ್ಥ ವ್ಯವಸ್ಥೆ ಇಂತವರ ಕೈಗೆ ಸಿಕ್ಕು ನರಳುತ್ತಿರುವುದು 'ಆಕ್ಟ್ ಆಫ್ ಗಾಡ್' ಇರಬಹುದೇನೋ! ಅಲ್ಲವೇ, ನಿರ್ಮಲಾ ಸೀತಾರಾಮನ್ ಅವರೇ' ಎಂದು ಕೇಳಿದೆ.
'ಇಂತಹ ಬೆಪ್ಪುತಕ್ಕಡಿಗಳನ್ನು ಹೊಂದಿರುವ ಬಿಜೆಪಿ ಇತರರ ಬಗ್ಗೆ ಟೀಕಿಸುವುದು ಕಾಗೆ ನವಿಲನ್ನು ಟೀಕಿಸಿದಂತೆಯೇ ಸರಿ' ಎಂದೂ ಕಾಂಗ್ರೆಸ್ ಟೀಕಿಸಿದೆ.
ನಿರ್ಮಲಾ ಸೀತಾರಾಮನ್ ಹೇಳಿಕೆಯನ್ನು ಖಂಡಿಸಿರುವ ಟಿಆರ್‌ಎಸ್ ಪಕ್ಷವು, ರುಪಾಯಿ ಮೌಲ್ಯ ಕುಸಿದಿಲ್ಲ. ಆದರೆ, ಡಾಲರ್ ಮೌಲ್ಯವು ಕುಸಿದಿದೆ ಎಂದು ಕೇಂದ್ರ ವಿತ್ತ ಸಚಿವೆ ಹೇಳಿಕೆ ನೀಡಿದ್ದಾರೆ. ನಾನು ಕಳಪೆ ಸಾಧನೆ ಮಾಡುವ ವಿದ್ಯಾರ್ಥಿ ಅಲ್ಲ. ಆದರೆ, ಪಠ್ಯಕ್ರಮ ಕಠಿಣವಾಗಿತ್ತು ಎಂಬ ಮಕ್ಕಳ ಮಾತುಗಳನ್ನು ನೆನಪಿಸುತ್ತಿದೆ' ಎಂದು ಟೀಕಿಸಿದೆ.
ಹಲವಾರು ತಿಂಗಳಿಂದ ರೂಪಾಯಿ ಮೌಲ್ಯದಲ್ಲಿ ಭಾರಿ ಕುಸಿತ ಉಂಟಾಗುತ್ತಿದೆ. ಅಮೆರಿಕದ ಡಾಲರ್ ಬಲವು ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಫೆಡರಲ್ ರಿಸರ್ವ್ ಬಡ್ಡಿದರ ಅಧಿಕವಾಗಿದೆ. ಭಾರತದ ಶೇರು ಮಾರುಕಟ್ಟೆಯಲ್ಲಿ ನಕಾರಾತ್ಮಕ ಬೆಳವಣಿಗೆ ಕಂಡುಬರುತ್ತಿರುವುದು ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಇರಬಹುದು ಎಂದು ಆರ್ಥಿಕ ತಜ್ಞರ ವಾದವಾಗಿದೆ.
ಹಸಿವು ಸೂಚ್ಯಂಕದಲ್ಲಿ ಭಾರತ ಕುಸಿತ
ಜಾಗತಿಕ ಹಸಿವು ಸೂಚ್ಯಂಕದ ಕುರಿತು ಐರ್ಲೆಂಡ್ ಹಾಗೂ ಜರ್ಮನಿಯ ಸರ್ಕಾರೇತರ ಸಂಸ್ಥೆಗಳಾದ 'ಕನ್ಸರ್ನ್ ವರ್ಲ್ಡ್‌ವೈಡ್' ಮತ್ತು 'ವೆಲ್ಟ್ ಹಂಗರ್ ಹಿಲ್ಫ್' ಜಂಟಿಯಾಗಿ ವರದಿ ನೀಡಿದೆ.
2022ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 107ನೇ ಸ್ಥಾನದಲ್ಲಿದೆ. ಜಗತ್ತಿನ 121 ದೇಶಗಳ ಸೂಚ್ಯಂಕವನ್ನು ಈ ವರದಿ ನೀಡಿದೆ. ಭಾರತದ ಹಸಿವು ಸೂಚ್ಯಂಕವು ದಕ್ಷಿಣ ಏಷ್ಯಾದ ನೆರೆಹೊರೆಯ ರಾಷ್ಟ್ರಗಳಿಗಿಂತಲೂ ಕುಸಿದಿದೆ. ಪಾಕಿಸ್ತಾನಕ್ಕಿಂತಲೂ ಭಾರತ ಸೂಚ್ಯಂಕವು ಕಡಿಮೆ ಇದೆ.












Click it and Unblock the Notifications