RBI : ರಿಯಲ್ ಜಿಡಿಪಿ ಇನ್ನಷ್ಟು ಕುಂಠಿತಗೊಳ್ಳುವ ನಿರೀಕ್ಷೆ; ಶೇ. 7.2 ಎಂದು ಆರ್‌ಬಿಐ ಅಂದಾಜು
ನವದೆಹಲಿ, ಏ. 8: ರಷ್ಯಾ ಉಕ್ರೇನ್ ಯುದ್ಧದ ಪರಿಣಾಮ ಭಾರತದ ಆರ್ಥಿಕ ಚೇತರಿಕೆ ಮೇಲೆ ಎಷ್ಟು ಪರಿಣಾಮ ಬೀರಬಹುದು ಎಂಬ ಚಿಂತೆ ದೇಶವನ್ನು ಕಾಡುತ್ತಿದೆ. ಈ ಕಾರ್ಮೋಡದ ಮಧ್ಯೆ ಇಂದು ಭಾರತೀಯ ರಿಸರ್ವ್ ಬ್ಯಾಂಕ್‌ನ (RBI) ಮಾನಿಟರಿ ಪಾಲಿಸಿ ಕಮಿಟಿ (Monetary Policy Committee) ಸಭೆ ನಡೆಸಿ ಚರ್ಚಿಸಿತು.
ಭಾರತದ ರಿಯಲ್ ಜಿಡಿಪಿ ದರ (Real GDP) ಪ್ರಸಕ್ತ 2023ನೇ ಸಾಲಿನ ಹಣಕಾಸು ವರ್ಷದಲ್ಲಿ ಶೇ. 7.2 ಇರಬಹುದು ಎಂದು ಆರ್‌ಬಿಐ ಅಂದಾಜು ಮಾಡಿದೆ. ಎಂಪಿಸಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಈ ವಿಚಾರವನ್ನು ತಿಳಿಸಿದರು. ಕುತೂಹಲವೆಂದರೆ ಕಳೆದ ಬಾರಿಯ ಸಭೆಯಲ್ಲಿ ರಿಯಲ್ ಜಿಡಿಪಿ ಬೆಳವಣಿಗೆ ಶೇ. 7.8 ಇರಬಹುದು ಎಂದು ಆರ್‌ಬಿಐ ಅಂದಾಜು ಮಾಡಿತ್ತು. ಆದರೆ, ಉಕ್ರೇನ್ ಯುದ್ಧದ ಕಾರಣದಿಂದ ಆರ್ಥಿಕತೆ ಬೆಳವಣಿಗೆ ವೇಗ ತಗ್ಗಬಹುದು ಎಂದು ನಿರೀಕ್ಷಿಸಿ ರಿಯಲ್ ಜಿಡಿಪಿ ಬೆಳವಣಿಗೆ ವೇಗದ ಅಂದಾಜನ್ನು ಆರ್‌ಬಿಐ ಪರಿಷ್ಕರಿಸಿದೆ.
ರೆಪೋ ದರವನ್ನು ಶೇ. 4ರ ಯಥಾಸ್ಥಿತಿಯಲ್ಲೇ ಮುಂದುರಿಸಲು ಎಂಪಿಸಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ರಿವರ್ಸ್ ರೆಪೋ ದರವನ್ನು ಏರಿಸಲಾಗಿದೆ. ಶೇ 3.35ರಷ್ಟು ಇದ್ದ ರಿವರ್ಸ್ ರೆಪೋ ದರ ಶೇ. 3.75ಕ್ಕೆ ಏರಿಕೆ ಆಗಿದೆ ಎಂದು ನ್ಯೂಸ್18 ವರದಿಯಲ್ಲಿ ತಿಳಿಸಲಾಗಿದೆ. ರಿವರ್ಸ್ ರೆಪೋ ದರ ಯಥಾಸ್ಥಿತಿಯಲ್ಲಿ ಮುಂದುವರಿಯಬಹುದು ಎಂದು ಈ ಮೊದಲು ನಿರೀಕ್ಷಿಸಲಾಗಿತ್ತು. ಇದೇ ವೇಳೆ ರೆಪೋ ದರ ಸತತ 11ನೇ ಬಾರಿ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.

ಏನಿದು ರಿಪೋ ಮತ್ತು ರಿವರ್ಸ್ ರಿಪೋ ದರ?
ರೆಪೋ ದರ (Repo Rate) ಎಂದರೆ ವಾಣಿಜ್ಯ ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಹಣಕ್ಕೆ ವಿಧಿಸಲಾಗುವ ಬಡ್ಡಿ ದರ ಆಗಿದೆ. ಇದು ಬ್ಯಾಂಕ್‌ಗಳು ಅವುಗಳ ಗ್ರಾಹಕರಿಗೆ ವಿಧಿಸುವ ಬಡ್ಡಿ ಮೇಲೆ ಪರಿಣಾಮ ಬೀರಬಹುದು. ಇನ್ನು, ರಿವರ್ಸ್ ರಿಪೋ ದರ (Reverse Repo Rate) ಎಂದರೆ ವಾಣಿಜ್ಯ ಬ್ಯಾಂಕ್‌ಗಳು ಆರ್‌ಬಿಐನಲ್ಲಿ ಇರಿಸುವ ಠೇವಣಿ ಹಣಕ್ಕೆ ಸಿಗುವ ಬಡ್ಡಿ ದರವಾಗಿದೆ.
ಆರ್ಥಿಕ ಶಿಸ್ತಿಗೆ ಪ್ರಮುಖ ಅಂಶವಾಗಿರುವ ರೀಟೇಲ್ ಹಣದುಬ್ಬರದ ಪ್ರಮಾಣ ಈ ಹಣಕಾಸು ವರ್ಷದಲ್ಲಿ ಶೇ. 5.7ಕ್ಕೆ ಏರಬಹುದು ಎಂದು ಇದೇ ವೇಳೆ ಆರ್‌ಬಿಐ ಅಂದಾಜು ಮಾಡಿದೆ. ಈ ಮುಂಚೆ ಈ ಹಣದುಬ್ಬರ ಶೇ. 4.5 ಇರಬಹುದು ಎಂದು ಅಂದಾಜು ಮಾಡಲಾಗಿತ್ತು.

ಹಣದುಬ್ಬರವನ್ನು ಶೇ. 2-6 ಮಧ್ಯೆ ಇರಿಸುವಂತೆ ಕೇಂದ್ರ ಸರಕಾರಕ್ಕೆ ಆರ್‌ಬಿಐ ಸೂಚಿಸಿತ್ತು. ಆದರೆ, ಫೆಬ್ರವರಿ ತಿಂಗಳಲ್ಲಿ ರೀಟೇಲ್ ಇನ್‌ಫ್ಲೇಷನ್ ದರ ಶೇ. 6.07ಕ್ಕೆ ಏರಿಕೆ ಆಗಿ ಹೋಗಿದ್ದು ಆರ್‌ಬಿಐಗೆ ಚಿಂತೆ ಉಂಟು ಮಾಡಿತೆನ್ನಲಾಗಿದೆ. ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಕೆಲವಾರು ಕ್ರಮ ಕೈಗೊಂಡಿದ್ದು, ಆರ್‌ಬಿಐ ಈ ದರ ಶೇ. 5.7ಕ್ಕೆ ಸೀಮಿತವಾಗಬಹುದು ಎಂಬ ಆಶಯದಲ್ಲಿದೆ.
ಹೊಸ ಆರ್ಥಿಕ ಸವಾಲುಗಳ ನಿರೀಕ್ಷೆ:
ಕಳೆದ ಎರಡು ವರ್ಷಗಳಿಂದ ಆರ್ಥಿಕ ಸವಾಲುಗಳು ದೇಶವನ್ನು ಬಾಧಿಸುತ್ತಿವೆ. ಕೋವಿಡ್ ಸಂಕಷ್ಟದ ಪರಿಸ್ಥಿತಿಯಿಂದ ಚೇತರಿಸಿಕೊಂಡು ಆರ್ಥಿಕವಾಗಿ ಮುಂದಡಿ ಇಡುವ ಆತ್ಮವಿಶ್ವಾಸ ಹೆಚ್ಚುತ್ತಿದ್ದಂತೆಯೇ ಇದೀಗ ರಷ್ಯಾ ಉಕ್ರೇನ್ ಯುದ್ಧ ಹೊಸ ಹಿಂಜರಿತ ಸೃಷ್ಟಿ ಮಾಡಿದೆ. ಈ ಯುದ್ಧವು ವಿಶ್ವದ ಆರ್ಥಿಕತೆ ಮೇಲೆ ತೀವ್ರತರ ಪರಿಣಾಮ ಬೀರಲಿದೆ. ಇದು ಭಾರತಕ್ಕೂ ಇನ್ನಿಲ್ಲದ ಸವಾಲು ಒಡ್ಡುವ ನಿರೀಕ್ಷೆ ಇದೆ. ಇಂದು ಸುದ್ದಿಗೋಷ್ಠಿಯಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಈ ವಿಚಾರವನ್ನು ಪ್ರಸ್ತಾಪಿಸಿ ಇದೇ ಆತಂಕ ತೋಡಿಕೊಂಡರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications