RBI Repo Rate: ಚಿನ್ನದ ಬೆಲೆಯ ಜೊತೆಗೆ ರೆಪೋ ರೇಟ್ ಕೂಡ ಕಟ್!
ಭಾರತದಲ್ಲಿ ಬೆಲೆ ಏರಿಕೆ ಸಮಸ್ಯೆ ಪರಿಣಾಮ ಸಾಮಾನ್ಯ ಜನರ ಬದುಕು ಸಂಕಷ್ಟಕ್ಕೆ ಸಿಲುಕಿ ಒದ್ದಾಡಿ ಹೋಗಿದೆ. ಕೇಂದ್ರ & ರಾಜ್ಯ ಸರ್ಕಾರಗಳು ಹೆಚ್ಚಿನ ಟ್ಯಾಕ್ಸ್ ಹಾಕುತ್ತಿರುವ ಹಿನ್ನೆಲೆ ಸಾಕಷ್ಟು ಪರದಾಟ ಶುರುವಾಗಿದೆ. ಒಂದು ಕಡೆ ಇದನ್ನು ನಿಭಾಯಿಸಲು ಆಗದೇ, ಇನ್ನೊಂದು ಕಡೆ ವೇತನ ಹೆಚ್ಚಳ ಆಗದೆ ಪ್ರತಿನಿತ್ಯ ಮಧ್ಯಮ ವರ್ಗ ಹಾಗೂ ಕೆಳ ಮಧ್ಯಮ ವರ್ಗ ಭಾರಿ ಪರದಾಟ ಎದುರಿಸುತ್ತಿತ್ತು. ಆದರೆ ಇದೀಗ ಭಾರತೀಯರಿಗೆ ಭರ್ಜರಿ ಗಿಫ್ಟ್ ನೀಡಿದ ಆರ್‌ಬಿಐ, ರೆಪೋ ರೇಟ್ ಕಟ್ ಮಾಡಿ ಹಾಕಿದೆ. ಈ ಮೂಲಕ ಚಿನ್ನದ ಜೊತೆಗೆ, ಲೋನ್ ಬಡ್ಡಿ ದರ ಕೂಡ ಕಟ್ ಆಗಲಿದೆ.
ಹೌದು, ಸಂಕಷ್ಟದ ಸಮಯದಲ್ಲಿ ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಹತ್ವದ ನಿರ್ಧಾರ ಕೈಗೊಂಡಿದೆ. ಡೊನಾಲ್ಡ್ ಟ್ರಂಪ್ ಅವರ ಅತಿಹೆಚ್ಚು ತೆರಿಗೆ ನೀತಿ, ಇನ್ನೊಂದು ಕಡೆ ಜಾಗತಿಕ ಆರ್ಥಿಕ ಹಿಂಜರಿತ ಭೀತಿ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ರೇಟ್ 25 ಬೇಸಿಸ್ ಪಾಯಿಂಟ್ ಕಟ್ ಮಾಡಿದೆ. ಹಲವು ವರ್ಷಗಳಿಂದಲೂ ಈ ಬಗ್ಗೆ ಒತ್ತಾಯವು ಕೇಳಿ ಬಂದಿತ್ತು, ಅಲ್ಲದೆ ರೆಪೋ ದರವನ್ನು ಶೇಕಡಾ 6ಕ್ಕೆ ಇಳಿಸಬೇಕು ಎಂಬ ಬೇಡಿಕೆಯೂ ಇತ್ತು. ಆದರೂ ಮಹತ್ವದ ನಿರ್ಧಾರಕ್ಕೆ ಬಂದಿರಲಿಲ್ಲ, ಇದೀಗ ರೆಪೋ ರೇಟ್ 25 ಬೇಸಿಸ್ ಪಾಯಿಂಟ್ ಕಟ್ ಮಾಡುವ ಮೂಲಕ ರೆಪೋ ದರವನ್ನು ಶೇಕಡಾ 6ಕ್ಕೆ ಇಳಿಸಿದೆ. ಇದೀಗ ರೆಪೋ ದರ ಇಳಿಕೆ ಹಿನ್ನೆಲೆ ಭರ್ಜರಿ ಅನುಕೂಲ ಆಗುವ ನಿರೀಕ್ಷೆ ಇದೆ.

ಸಾಲ ಪಡೆದವರಿಗೆ ಅನುಕೂಲಕರ ವಾತಾವರಣ!
ರೆಪೋ ದರವನ್ನು ಶೇಕಡಾ 6ಕ್ಕೆ ಇಳಿಸಿರುವ ಹಿನ್ನೆಲೆಯಲ್ಲಿ ಇದೀಗ ಸಾಲ ಪಡೆದವರಿಗೆ ಭಾರಿ ಅನುಕೂಲ ಆಗುವ ನಿರೀಕ್ಷೆ ಇದೆ. ಜಾಗತಿಕವಾಗಿ ಕೂಡ ಸಾಕಷ್ಟು ಆರ್ಥಿಕ ಬದಲಾವಣೆಗಳು ಸಂಭವಿಸಿದ್ದು, ಜನರು ಒತ್ತಡದಲ್ಲಿ ಇದ್ದರು. ಇನ್ನು ಲೋನ್ ಇಎಂಐ ಮರುಪಾವತಿ ಕೂಡ ಕಷ್ಟಕರ ಎನ್ನುವ ಸ್ಥಿತಿ ಇತ್ತು. ಆದರೆ ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೈಗೊಂಡ ನಿರ್ಧಾರ ಸಾಕಷ್ಟು ಅನುಕೂಲ ಮಾಡಿಕೊಡಲಿದೆ. ರೆಪೋ ದರ ಕಡಿಮೆ ಮಾಡಲು ಎಂಪಿಸಿ ಸರ್ವಾನುಮತದಿಂದ ಮತ ಚಲಾಯಿಸಿದೆ ಎಂಬ ವಿಚಾರವನ್ನ ಕೂಡ ಈಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.
ಆರ್ಥಿಕತೆಗೆ ಬಹುಮುಖ್ಯ ರೆಪೋ ರೇಟ್
ಸಾಮಾನ್ಯ ಭಾಷೆಯಲ್ಲಿ ರೆಪೋ ದರ ಅಥವಾ ರೆಪೋ ರೇಟ್ ಎಂದು ಇದನ್ನ ಕರೆಯಲಾಗುತ್ತದೆ. ಈ ರೆಪೋ ದರವು, ಖರೀದಿ ಒಪ್ಪಂದದ ದರವೇ ಆಗಿದೆ. ಇನ್ನೂ ಆಳವಾಗಿ ಹೇಳಬೇಕಾದರೆ, ಈ ರೆಪೋ ದರ, ವಾಣಿಜ್ಯ ಬ್ಯಾಂಕುಗಳಿಂದ ಅವುಗಳಿಗೆ ನೀಡುವ ಹಣದ ಮೇಲೆ RBI ವಿಧಿಸುವ ಬಡ್ಡಿ ದರ ಅಂತಾ ಕೂಡ ಕರೆಯಬಹುದಾಗಿದೆ. ಇದೇ ಕಾರಣಕ್ಕೆ RBI ರೆಪೋ ಕಟ್ ಮಾಡಿದ ನಂತರ ಬ್ಯಾಂಕುಗಳು ಅದರ ಪ್ರಯೋಜನ ಗ್ರಾಹಕರಿಗೆ ಹಸ್ತಾಂತರ ಮಾಡುತ್ತವೆ. ಹೀಗಾಗಿಯೇ ರೆಪೋ ಕಡಿತ ನಿರ್ಧಾರ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಮತ್ತು ಗ್ರಾಹಕರಿಗೆ ಕೂಡ ಅನುಕೂಲ ಮಾಡಿಕೊಡುವ ನಿರೀಕ್ಷೆ ಇರುತ್ತದೆ. ಆ ಮೂಲಕ ಆರ್ಥಿಕತೆ ಚೇತರಿಕೆಗೆ ಸಹಾಯ ಕೂಡ ಆಗುತ್ತದೆ.












Click it and Unblock the Notifications