ಬೆಂಗಳೂರಿಗೆ ಜೋಳಿಗೆ ಹಿಡಿದು ಬರಲಿರುವ ರಾಜಸ್ಥಾನ ಸಚಿವ
ಬೆಂಗಳೂರು, ಮೇ.3: ಉದ್ಯಮಿಗಳು ಮತ್ತು ಕಾರ್ಪೊರೇಟ್ ನಾಯಕರನ್ನು ಭೇಟಿ ಮಾಡಿ ರಾಜ್ಯದಲ್ಲಿನ ಹೂಡಿಕೆದಾರರನ್ನು ಸೆಳೆಯಲು ರಾಜಸ್ಥಾನ ಸರ್ಕಾರದ ನಗರಾಭಿವೃದ್ಧಿ ಮತ್ತು ವಸತಿ ಸಚಿವ ರಾಜ್ ಪಾಲ್ ಸಿಂಗ್ ಶೇಕಾವತ್ ಬೆಂಗಳೂರಿಗೆ ಬರುತ್ತಿದ್ದಾರೆ. ಈ ಹಿಂದೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಇಲ್ಲಿನ ಕಂಪನಿಗಳಿಗೆ ಆಮಿಷವೊಡ್ಡಿ ತಮ್ಮ ರಾಜ್ಯದತ್ತ ಸೆಳೆದಿದ್ದು ಮರೆಯುವಂತಿಲ್ಲ.
ರಾಜಸ್ಥಾನ ಸರ್ಕಾರದ ನಗರಾಭಿವೃದ್ಧಿ ಮತ್ತು ವಸತಿ ಸಚಿವ ರಾಜ್ ಪಾಲ್ ಸಿಂಗ್ ಶೇಕಾವತ್ ಮೇ.5 ಮತ್ತು 6ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ರಾಜಸ್ಥಾನ ಸರ್ಕಾರ, ಭಾರತೀಯ ಕೈಗಾರಿಕೆ ಒಕ್ಕೂಟದ(ಸಿಐಐ) ಸಹಭಾಗಿತ್ವದಲ್ಲಿ ಆಯೋಜಿಸಿರುವ ಹೂಡಿಕೆದಾರರ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಬೆಂಗಳೂರು ರೋಡ್ ಶೋ ಕುರಿತು ಪ್ರತಿಕ್ರಿಯಿಸಿದ ಶೇಕಾವತ್, ರಾಜಸ್ಥಾನ ವಿಫುಲವಾದ ನೈಸರ್ಗಿಕ ಸಂಪತ್ತು, ಭೂಮಿ, ಇಂಧನ, ಕೌಶಲ್ಯ ಹೊಂದಿದ ಮಾನವಸಂಪನ್ಮೂಲ, ಉತ್ತಮ ಕೈಗಾರಿಕೆ ಮೂಲಸೌಕರ್ಯ ಮತ್ತು ಸುಲಭವಾಗಿ ವಹಿವಾಟು ನಡೆಸಬಹುದಾದ ವ್ಯವಸ್ಥೆಗಳನ್ನು ಹೊಂದಿದೆ. ನಾವು ನಮ್ಮಲ್ಲಿನ ಅವಕಾಶವನ್ನು ಪ್ರದರ್ಶಿಸಲು ಕರ್ನಾಟಕದ ಹೂಡಿಕೆದಾರರನ್ನು ಸ್ವಾಗತಿಸುತ್ತೇವೆ. ವಿಶೇಷವಾಗಿ ಐಟಿ ಮತ್ತು ಐಟಿಇಎಸ್ ನಲ್ಲಿ ಬೃಹತ್ ಮಾರುಕಟ್ಟೆಯಿದೆ' ಎಂದರು.

ಈ ಕಾರ್ಯಕ್ರಮ ಒನ್ ಆನ್ ಒನ್ ಮತ್ತು ಬಿ2ಜಿ ಸಭೆಗಳು ಮತ್ತು ಪ್ರಾತ್ಯಕ್ಷತೆಗಳನ್ನು ಹೊಂದಿದೆ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ದೇಶೀಯ ಮತ್ತು ಅಂತಾರಾಷ್ಟ್ರೀಯ ರೋಡ್ ಶೋಗಳನ್ನು ನಡೆಸಲಿದೆ.
ಈ ಕಾರ್ಯಕ್ರಮ ರಾಜಸ್ಥಾನ ಸರ್ಕಾರ ರಾಜ್ಯವನ್ನು ಹೂಡಿಕೆ ತಾಣವಾಗಿ ಉತ್ತೇಜಿಸಲು ಆಯೋಜಿಸಿರುವ ದೇಶೀಯ ಮತ್ತು ಅಂತಾರಾಷ್ಟ್ರೀಯ ರೋಡ್ ಶೋಗಳ ಒಂದು ಭಾಗವಾಗಿದೆ. ರಾಜಸ್ಥಾನ ಪುನರುಜ್ಜೀವನ ಪಾಲುದಾರಿಕೆ ಶೃಂಗಸಭೆ 2015ನ್ನು ಈ ವರ್ಷದ ನವೆಂಬರ್ 19-20ರಂದು ಜೈಪುರದಲ್ಲಿ ಹಮ್ಮಿಕೊಂಡಿದೆ.
ರಾಜಸ್ಥಾನ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಿ.ಎಸ್ ರಾಜನ್, ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಕಾರ್ಯದರ್ಶಿ ಮತ್ತು ಆಯುಕ್ತರಾದ ರಜತ್ ಮಿಶ್ರ, ಯೋಜನೆ ಮತ್ತು ಐಟಿ ಕಾರ್ಯದರ್ಶಿ ಅಖಿಲ್ ಅರೋರ ಭೇಟಿ ನೀಡುವ ಗಣ್ಯರ ತಂಡದಲ್ಲಿರುತ್ತಾರೆ.
ಈ ಹಿಂದೆ ಜರ್ಮನಿ, ಜಪಾನ್, ಪುಣೆ, ಕೋಲ್ಕತಾ, ಚೆನ್ನೈ, ಹೈದ್ರಾಬಾದ್ ಮತ್ತು ಲೂಧಿಯಾನಗಳಲ್ಲಿ ರೋಡ್ ಶೋ ನಡೆಸಿ ವ್ಯಾಪಕ ಯಶಸ್ಸು ಸಾಧಿಸಿ, ಅನೇಕ ಹೂಡಿಕೆದಾರರನ್ನು ಆಕರ್ಷಿಸಿದೆ.












Click it and Unblock the Notifications