ವೋಡಾಫೋನ್ ಐಡಿಯಾ ಸಿಇಒಗೆ ಸಂಬಳವೇ ಇಲ್ಲ
ನವದೆಹಲಿ, ಸೆ. 9: ವೋಡಾಫೋನ್ ಐಡಿಯಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ರವೀಂದರ್ ಠಕ್ಕರ್ ಅವರು ಸಂಬಳವಿಲ್ಲದೆ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಸಂಸ್ಥೆಯು ವಿಐಎಲ್ ಬೋರ್ಡ್ ಮುಂದೆ ಪ್ರಸ್ತಾವನೆ ಮುಂದಿಟ್ಟಿದೆ. ಮುಂದಿನ ಮೂರು ವರ್ಷಗಳ ಅವಧಿ ಯಾವುದೇ ಸಂಬಳ, ಸಂಭಾವನೆ ಇರುವುದಿಲ್ಲ.
ಸೆಪ್ಟೆಂಬರ್ 30 ರಂದು ಸಂಸ್ಥೆಯ ವಾರ್ಷಿಕ ಪ್ರಧಾನ ಸಭೆ ನಡೆಯಲಿದ್ದು, ವೋಡಾಫೋನ್ ಹೊಸ ಸ್ವರೂಪ ಬ್ರ್ಯಾಂಡ್ ನೇಮ್ ನೊಂದಿಗೆ ಸಭೆ ಆರಂಭಿಸಲಿದೆ. ಪ್ರಮುಖ ಟೆಲಿಕಾಂ ಕಂಪನಿಗಳಾದ ವೊಡಾಫೋನ್-ಐಡಿಯಾ ಸಂಯೋಜನೆಗೊಂಡು ಎರಡು ವರ್ಷಗಳ ಬಳಿಕ ಹೊಸ ಲೋಗೊವೊಂದನ್ನು ಲಾಂಚ್ ಮಾಡಿದ್ದು, ಅದಕ್ಕೆ 'Vi' ಎಂದು ನಾಮಕರಣ ಮಾಡಲಾಗಿದೆ.
ಬಾಲೇಶ್ ಶರ್ಮ ಅವರ ರಾಜೀನಾಮೆ ನಂತರ ಠಕ್ಕರ್ ಅವರನ್ನು ಸಂಸ್ಥೆಯ ಎಂಡಿ, ಸಿಇಒ ಆಗಿ ವಿಐಎಲ್ ನೇಮಿಸಿತ್ತು. ಆಗಸ್ಟ್ 19, 2019ರಿಂದ ಮೂರು ವರ್ಷಗಳ ಅವಧಿಗೆ ಯಾವುದೇ ಸಂಬಳ ವಿಲ್ಲದೆ ಕಾರ್ಯ ನಿರ್ವಹಿಸಲಿದ್ದಾರೆ. ಆದರೆ, ಠಕ್ಕರ್ ಅವರ ಪ್ರವಾಸ, ವಸತಿ, ಮನರಂಜನೆ ಮುಂತಾದ ಖರ್ಚು ವೆಚ್ಚವನ್ನು ಸಂಸ್ಥೆ ನಿಭಾಯಿಸಲಿದೆ. ಹಳೆ ಸಿಇಒ ಶರ್ಮ ಅವರಿಗೆ 8.59 ಕೋಟಿ ಸಂಬಳ ನಿಗದಿಯಾಗಿತ್ತು.

ಕುಮಾರಮಂಗಲಂ ಬಿರ್ಲಾ ಅವರ ಆದಿತ್ಯ ಬಿರ್ಲಾ ಹಾಗೂ ಯುಕೆಯ ವೋಡಾಫೋನ್ ಸಮೂಹ ಒಡೆತನ ವೋಡಾಫೋನ್ ಐಡಿಯಾ ಹೊಸ ಲೋಗೋ, ಬ್ರ್ಯಾಂಡ್ ನೇಮ್ ಅಡಿಯಲ್ಲಿ ಮಾರುಕಟ್ಟೆಯಲ್ಲಿ ಕಾರ್ಯ ನಿರ್ವಹಿಸಲಿದೆ. 2020-21ರ ಮೊದಲ ತ್ರೈಮಾಸಿಕ ಅವಧ್ಇಯಲ್ಲಿ ಸಂಸ್ಥೆ 25,460 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದೆ (ಪಿಟಿಐ)












Click it and Unblock the Notifications