LPG Price: ಕೇಂದ್ರ ಬಜೆಟ್ 2026 ಮಂಡನೆಗೂ ಮನ್ನ ಎಲ್‌ಪಿಜಿ ಸಿಲಿಂಡರ್ ದರ ಭಾರಿ ಏರಿಕೆ
LPG Price: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆಬ್ರವರಿ 1) ಕೇಂದ್ರ ಬಜೆಟ್ 2026 ಮಂಡನೆ ಮಾಡಲಿದ್ದಾರೆ. ಇದಕ್ಕೂ ಮುನ್ನವೇ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಹಾಗಾದ್ರೆ, ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇಂಧನ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳು ವಾಣಿಜ್ಯ ಸಿಲಿಂಡರ್ ದರವನ್ನು ಪರಿಷ್ಕರಣೆ ಮಾಡುತ್ತಲಿರುತ್ತವೆ. ಹಾಗೆಯೇ ಇದೀಗ ಫೆಬ್ರವರಿ ಆರಂಭದಲ್ಲೇ ಪರಿಷ್ಕರಣೆ ಮಾಡಿದ್ದು, ಭಾರೀ ಏರಿಕೆಯಾಗಿದೆ. ಹಾಗಾದ್ರೆ, ಯಾವ ನಗರದಲ್ಲಿ ಬೆಲೆ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ನೋಡಿ.

ಎಷ್ಟು ಏರಿಕೆ?: ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಇಂಧನ ಕಂಪನಿಗಳು ಇಂದು (ಫೆಬ್ರವರಿ1) ವಾಣಿಜ್ಯ (19 ಕೆಜಿ) ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 50 ರೂಪಾಯಿ ಹೆಚ್ಚಳ ಮಾಡಿವೆ. ಇದರಿಂದ ಎಲ್‌ಪಿಜಿ ಗ್ರಾಹಕರಿಗೆ ಪೆಟ್ಟು ಬಿದ್ದಿದೆ. ವಾಣಿಜ್ಯ ಮತ್ತು ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ದರಗಳನ್ನು ಫೆಬ್ರವರಿ 1, 2026ರಿಂದ ಅಂದರೆ ಇಂದಿನಿಂದಲೇ ಜಾರಿಗೆ ತರಲಾಗಿದೆ.
ಎರಡು ತಿಂಗಳಲ್ಲಿ ಭಾರೀ ಏರಿಕೆ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ ಆಗಿರುವುರಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ರಸ್ತೆಬದಿಯ ತಿನಿಸುಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳಿಗೆ ಭಾರೀ ಹೊಡೆತ ಬಿದ್ದಂತಾಗಿದೆ. ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನ ಎಲ್‌ಪಿಜಿ ದರಗಳನ್ನು ಪರಿಷ್ಕರಿಸುತ್ತವೆ. ಜನವರಿಯಲ್ಲೇ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 111 ರೂಪಾಯಿ ಹೆಚ್ಚಿಸಲಾಗಿತ್ತು. ಇದೀಗ 50 ರೂಪಾಯಿ ಹೆಚ್ಚಳ ಮಾಡಿ ಶಾಕ್ ಕೊಟ್ಟಿವೆ.
ಯಾವ ನಗರಗಳಲ್ಲಿ ದರ ಎಷ್ಟಿದೆ?: ಇಂದಿನ ದರ ಏರಿಕೆಯಿಂದ ದೆಹಲಿಯಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1691.50 ರೂಪಾಯಿನಿಂದ 1740.50 ರೂಪಾಯಿಗೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ 1844.50 ರೂಪಾಯಿ ಆಗಿದ್ದರೆ, ಮುಂಬೈನಲ್ಲಿ 1642.50 ರೂಪಾಯಿ ಇದ್ದ ಸಿಲಿಂಡರ್ ಬೆಲೆ ಈಗ 1692 ರೂಪಾಯಿ ಆಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 1,764.50 ಆಗಿದೆ.
ಈ ವರ್ಷದ ಜನವರಿ ಮತ್ತು ಫೆಬ್ರವರಿಯಲ್ಲಿ ದರ ಹೆಚ್ಚಳ ಕಂಡುಬಂದಿದ್ದರೂ, ಕಳೆದ ವರ್ಷ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಕ್ರಮವಾಗಿ 5 ರೂಪಾಯಿ ಹಾಗೂ 10 ರೂಪಾಯಿಗಳಷ್ಟು ದರ ಇಳಿಕೆ ಮಾಡಲಾಗಿತ್ತು. ಅಕ್ಟೋಬರ್‌ನಲ್ಲಿ ಕೇವಲ 15.50 ರೂಪಾಯಿಗಳ ಅಲ್ಪ ಏರಿಕೆ ಕಂಡುಬಂದಿದ್ದು, ಅದಕ್ಕೂ ಮುನ್ನ ವಾಣಿಜ್ಯ ಸಿಲಿಂಡರ್ ಬೆಲೆಗಳು ಸತತ ಆರು ತಿಂಗಳುಗಳ ಕಾಲ ಇಳಿಕೆ ಆಗಿದ್ದವು.
ಗೃಹಬಳಕೆ ಸಿಲಿಂಡರ್ ದರಪಟ್ಟಿ: ಮತ್ತೊಂದೆಡೆ, ಇಂಡಿಯನ್ ಆಯಿಲ್ ಬಿಡುಗಡೆ ಮಾಡಿದ ಮಾಹಿತಿಯಂತೆ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಪ್ರಸ್ತುತ ದೆಹಲಿಯಲ್ಲಿ 14.2 ಕೆಜಿ ದೇಶೀಯ ಸಿಲಿಂಡರ್ ಬೆಲೆ 853 ರೂಪಾಯಿ ಇದ್ದರೆ, ಉತ್ತರ ಪ್ರದೇಶದಲ್ಲಿ 850.50 ರೂಪಾಯಿ, ಪಾಟ್ನಾದಲ್ಲಿ 951 ರೂಪಾಯಿ, ಮುಂಬೈನಲ್ಲಿ 852.50 ರೂಪಾಯಿ ಮತ್ತು ಲಕ್ನೋದಲ್ಲಿ 890.50 ರೂಪಾಯಿ ಇದೆ.
ನಗರವಾರು ವಾಣಿಜ್ಯ (19 ಕೆಜಿ) ಸಿಲಿಂಡರ್ ದರ
* ಬೆಂಗಳೂರು - 1,764.50 ರೂಪಾಯಿ
* ನವದೆಹಲಿ - 1,740.50 ರೂಪಾಯಿ
* ಕೋಲ್ಕತ್ತಾ - 1,844.50 ರೂಪಾಯಿ
* ಮುಂಬೈ - 1,692 ರೂಪಾಯಿ
ಗೃಹಬಳಕೆ (14.2 ಕೆಜಿ) ಸಿಲಿಂಡರ್ ದರಪಟ್ಟಿ
* ದೆಹಲಿ - 853 ರೂಪಾಯಿ
* ಉತ್ತರ ಪ್ರದೇಶ - 850.50 ರೂಪಾಯಿ
* ಪಾಟ್ನಾ - 951 ರೂಪಾಯಿ
* ಮುಂಬೈ - 852.50 ರೂಪಾಯಿ
* ಲಕ್ನೋ - 890.50 ರೂಪಾಯಿ












Click it and Unblock the Notifications