ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾರ ಮೇಲೆ, ಯಾವ ಪರಿಣಾಮ ಬೀರಲಿದೆ ಜಿಎಸ್ ಟಿ: ಇಲ್ಲಿದೆ ಲೆಕ್ಕಾಚಾರ

|
Google Oneindia Kannada News

ಭಾರತದಲ್ಲಿ ಜುಲೈ ಒಂದರಿಂದ ಸರಕು ಮತ್ತು ಸೇವಾ ಕಾಯ್ದೆ (ಜಿಎಸ್ ಟಿ) ಯುಗಾರಂಭ ಆಗಿದ್ದು, ದೇಶಿಯ ಮಾರುಕಟ್ಟೆಯನ್ನು ಏಕರೂಪ ಮಾಡಿದೆ. ಇದರಿಂದ ವಸ್ತುಗಳು ಹಾಗೂ ಸೇವೆಗಳ ಪೂರೈಕೆ ಜಾಲವು ಪುನರ್ ರಚನೆ ಆಗಿದ್ದು, ಜಿಎಸ್ ಟಿ ಜಾರಿ ಆಗಿದ್ದರಿಂದ ಈ ಹಿಂದೆ ಇದ್ದ ಹಲವು ಹಂತದ ತೆರಿಗೆ ವಿಧಾನವು ಈಗಿಲ್ಲವಾಗಿದೆ.

ಜಿಎಸ್ ಟಿ ಜಾರಿ ಆಗಿದ್ದರಿಂದ ಭಾರತದ ಆರ್ಥಿಕ ವ್ಯವಸ್ಥೆಯ ಪ್ರಮುಖ ವಲಯಗಳ ಮೇಲೆ ಆದ ಬದಲಾವಣೆಗಳನ್ನು ನಿರ್ಧರಿಸುವುದಕ್ಕೆ ಸರಿಯಾದ ಸಮಯವಿದು. ಇದರ ಜತೆಗೆ ಸಾಮಾನ್ಯ ಗ್ರಾಹಕರ ಮೇಲೆ ಆಗುವ ಪರಿಣಾಮಗಳನ್ನು ಕೂಡ ಅಂದಾಜು ಮಾಡಬಹುದು.

ಉತ್ಪಾದನಾ ವಲಯದದಲ್ಲಿ ಜಿಎಸ್ ಟಿ ಜಾರಿಯಿಂದ ಸ್ಪರ್ಧಾತ್ಮಕತೆ ಹೆಚ್ಚಲಿದೆ ಎಂಬ ನಿರೀಕ್ಷೆಯಿದೆ. ಏಕೆಂದರೆ, ಇಲ್ಲಿವರೆಗೆ ಇದ್ದ ನಿಯಮಗಳ ಹೊರೆ ಕಡಿಮೆ ಆಗುತ್ತದೆ. ಇದರಿಂದ ಆಡಳಿತಾತ್ಮಕ ವೆಚ್ಚಗಳು ಕಡಿಮೆಯಾಗುತ್ತದೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ.

Impact of GST on key sectors and its ripple effect on the ordinary consumer

ಇನ್ನು ಜಿಡಿಪಿಗೆ ಪ್ರಮುಖ ಕೊಡುಗೆ ನೀಡುವ ಸೇವಾ ವಲಯದ ಮೇಲೆ ತೆರಿಗೆ ನಿಯಮಗಳು ಹೊರೆಯಾಗಲಿದೆ. ಏಕೆಂಡರೆ ಹಲವು ಸೇವೆಗಳು ಜಿಎಸ್ ಟಿಯ ಶೇ 18ರ ಸ್ಲ್ಯಾಬ್ ಅಡಿಯಲ್ಲಿ ಬರುತ್ತದೆ. ಆದರೆ ದೀರ್ಘಾವಧಿಯಲ್ಲಿ ಏಕರೂಪದ ಮಾರುಕಟ್ಟೆಯಲ್ಲಿ ಮಾಡುವ ವ್ಯವಹಾರದಿಂದ ಈ ವಲಯಕ್ಕೆ ಹೆಚ್ಚಿನ ಲಾಭವಾಗುತ್ತದೆ.

ಜಿಎಸ್ ಟಿ ಜಾರಿಯಿಂದ ಆರ್ಥಿಕತೆಯ ವಿವಿಧ ವಲಯಗಳ ಮೇಲೆ ಆಗುವ ಪರಿಣಾಮಗಳೇನು ಅಂತ ನೋಡೋಣ.

ಬ್ಯಾಂಕಿಂಗ್, ಆರ್ಥಿಕ ಸೇವೆಗಳು ಹಾಗೂ ವಿಮೆ

ಈ ವಲಯಗಳ ಮೇಲೆ ಜಿಎಸ್ ಟಿ ಎರಡು ಬಗೆಯಲ್ಲಿ ಪರಿಣಾಮ ಬೀರುತ್ತದೆ. ಒಂದು, ಸದ್ಯಕ್ಕೆ ಇರುವ ಸೇವಾ ತೆರಿಗೆಗಿಂತ ಜಿಎಸ್ ಟಿ ದರ ಜಾಸ್ತಿ ಇದೆ. ಇನ್ನು ಪ್ರತಿ ಬ್ಯಾಂಕ್ ಹಾಗೂ ಬ್ಯಾಂಕಿಂಗೇತರ ಫೈನಾನ್ಷಿಯಲ್ ಕಂಪೆನಿಗಳು ಎಲ್ಲೆಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆಯೋ ಅಲ್ಲೆಲ್ಲ ನೋಂದಣಿ ಮಾಡಿಸಬೇಕು.

ಸದ್ಯದ ಸನ್ನಿವೇಶ:

ಸದ್ಯಕ್ಕೆ ಬ್ಯಾಂಕಿಂಗ್ ವ್ಯವಹಾರಗಳ ಮೇಲಿನ ಸೇವಾ ಶುಲ್ಕ ಶೇ 15ರಷ್ಟಿದೆ. ಅದರಲ್ಲಿ ಸಾಲದ ಅರ್ಜಿ, ಡಿಡಿ ಪಡೆಯುವುದು, ವಿದೇಶಿ ಕರೆನ್ಸಿ ವಿನಿಮಯ ಹೀಗೆ ಹಲವು ಸೇವೆಗಳು ಒಳಗೊಳ್ಳುತ್ತವೆ. ಇದೇ ವಿಮಾ ವಲಯಕ್ಕೂ ಅನ್ವಯಿಸುತ್ತದೆ. ಟರ್ಮ್ ಹಾಗೂ ಆರೋಗ್ಯ ವಿಮೆಯ ಒಟ್ಟಾರೆ ಪ್ರೀಮಿಯಂ ಮೊತ್ತದ ಮೇಲೆ ಸದ್ಯಕ್ಕೆ ಶೇ 15ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

ಯುನಿಟ್ ಲಿಂಕ್ಡ್ ಇನ್ವೆಸ್ಟ್ ಮೆಂಟ್ಸ್ ಪ್ಲಾನ್ಸ್ (ಯುಲಿಪ್)ಗೆ ಪ್ರೀಮಿಯಂ-ಹೂಡಿಕೆ ಮೊತ್ತದ ಮೇಲೆ ಶೇ 15ರಷ್ಟು ದರವನ್ನು ವಿಧಿಸಲಾಗುತ್ತಿದೆ.

ಜಿಎಸ್ ಟಿ ಪರಿಣಾಮ:

ಬ್ಯಾಂಕಿಂಗ್ ಹಾಗೂ ವಿಮಾ ಕ್ಷೇತ್ರದ ಸದ್ಯದ ಶೇ 15ರಷ್ಟು ತೆರಿಗೆಯು ಶೇ 18ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಬ್ಯಾಂಕಿಂಗ್ ಉದ್ದೇಶಗಳಿಗಾಗಿ ನೀವು ಪಾವತಿಸುವ ಪ್ರತಿ ಸಾವಿರ ರುಪಾಯಿಗೆ ಹೆಚ್ಚುವರಿಯಾಗಿ ಶೇ ಮೂರರಷ್ಟು ತೆರಿಗೆ ಬೀಳುತ್ತದೆ. 180 ರುಪಾಯಿಯನ್ನು ಜಿಎಸ್ ಟಿ ಆಗಿ ಪಾವತಿಸುತ್ತೀರಿ.

ಇನ್ನು ಚಿನ್ನ ಹಾಗೂ ಬೆಳ್ಳಿಯಂಥದ್ದಕ್ಕೆ ಜಿಎಸ್ ಟಿಯ ವಿನಾಯಿತಿ ದರವು ಅನ್ವಯಿಸಲಿದೆ. ಆದ್ದರಿಂದ ಬ್ಯಾಂಕ್ ಗಳಿಂದ ಚಿನ್ನ-ಬೆಳ್ಳಿಯನ್ನು ಖರೀದಿಸುವಾಗ ಎಚ್ಚರದಿಂದ ಇರಬೇಕು.

ಗ್ರಾಹಕರ ಮೇಲೆ ಪರಿಣಾಮ:

ಪಾಲಿಸಿದಾರರು ಜಿಎಸ್ ಟಿ ನಂತರ ಹೆಚ್ಚು ಪ್ರೀಮಿಯಂ ಪಾವತಿಸಬೇಕಾಗುತ್ತದೆ. ತಜ್ಞರ ಪ್ರಕಾರ ವ್ಯಾಪಾರದ ಕಾರ್ಯನಿರತ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್) ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ನಗದು ಕೊರತೆ ಕೂಡ ಎದುರಾಗಬಹುದು.

ಈ ರೀತಿ ಬಂಡವಾಳದ ಕೊರತೆ ಕಂಡು ಬಂದಾಗ ವ್ಯವಹಾರದ ಸಾಲ ಪಡೆಯುವುದಕ್ಕೆ ಮುಂದಾಗಬಹುದು. ಇಂಥ ಸಾಲಗಳನ್ನು ಸುಲಭವಾಗಿ ಮರುಪಾವತಿಸಬಹುದು. ಅದೂ ಆಕರ್ಷಕ ಬಡ್ಡಿ ದರ ಹಾಗೂ ಅನುಕೂಲಕರವಾದ ಕಾಲಾವಕಾಶದಲ್ಲಿ. ವ್ಯಾಪಾರದ ಮಾಲೀಕರು ವ್ಯವಹಾರದ ಖಾತೆಯಿಂದ ಪಾವತಿಸುವ ಎಲ್ಲ ಸೇವೆಗಳಿಗೆ ಇನ್ ಪುಟ್ ಕ್ರೆಡಿಟ್ ಕೂಡ ಪಡೆಯಬಹುದು.

ಕೃಷಿ

ಭಾರತದ ಜಿಡಿಪಿಗೆ ದೊಡ್ಡ ಮಟ್ಟದ ಕೊಡುಗೆ ಸಿಗುವುದು ಕೃಷಿ ವಲಯದಿಂದ. ಈ ವಲಯದ ಮುಖ್ಯ ಸಮಸ್ಯೆ ಏನೆಂದರೆ, ವಸ್ತುಗಳ ಸಾಗಣೆ. ಅದೂ ದೇಶದ ನಾನಾ ರಾಜ್ಯಗಳಿಗೆ ಸಾಗಿಸಲಾಗುತ್ತದೆ. ಇದನ್ನು ಚೆನ್ನಾಗಿ ಗುರುತಿಸಿ, ಸಮಸ್ಯೆ ಬಗೆಹರಿಸಿರುವ ಜಿಎಸ್ ಟಿ ಕೃಷಿ ಆಧಾರಿತ ವಸ್ತುಗಳಿಗೆ ಏಕರೂಪದ ಮಾರುಕಟ್ಟೆ ಸೃಷ್ಟಿಸಿದೆ.

ಸದ್ಯದ ಸನ್ನಿವೇಶ:

ಸದ್ಯದ ತೆರಿಗೆ ವ್ಯವಸ್ಥೆಯಲ್ಲಿ ಕೃಷಿ ವಸ್ತುಗಳಿಗೆ ಹಲವು ಪರೋಕ್ಷ ತೆರಿಗೆಗಳು ಬೀಳುತ್ತಿವೆ. ಅದರಲ್ಲೂ ಸೇವಾ ತೆರಿಗೆ, ಅಬಕಾರಿ ಸುಂಕ ಮತ್ತು ವ್ಯಾಟ್ ಇದೆ.

ಆದರೆ, ಸಂಸ್ಕರಿತವಲ್ಲದ ಆಹಾರ ಧಾನ್ಯಗಳಿಗೆ ಅಂದರೆ, ಹಣ್ಣು, ತರಕಾರಿ, ಮಾಂಸ, ಮೊಟ್ಟೆ. ಅದೇ ರೀತಿ ಗೋಧಿ, ಅಕ್ಕಿ, ಕಲ್ಲುಪ್ಪು ಮತ್ತು ಸಕ್ಕರೆಗೆ ಕೆ-ವ್ಯಾಟ್ ನಿಂದ ವಿನಾಯ್ತಿ ಸಿಕ್ಕಿದೆ.

ಜಿಎಸ್ ಟಿ ಪರಿಣಾಮ:

ಕೃಷಿ ವಸ್ತುಗಳಿಗೆ ರಾಷ್ಟ್ರ ಮಟ್ಟದ ಮಾರುಕಟ್ಟೆ ಸೃಷ್ಟಿಸಲಿದೆ ಜಿಎಸ್ ಟಿ. ಇದು ಕೃಷಿ ವಲಯಕ್ಕೆ ಸಕಾರಾತ್ಮಕ ಅಂಶವಾಗಲಿದೆ. ಆದರೆ ಈ ಹಂತದಲ್ಲಿ ಕೃಷಿ ವಸ್ತುಗಳಿಗೆ ಜಿಎಸ್ ಟಿಯ ಬೇರೆ ಸ್ಲ್ಯಾಬ್ ಗಳಲ್ಲಿ ಅನ್ವಯ ಆಗುವ ದರಗಳ ಬಗ್ಗೆ ಸ್ಪಷ್ಟನೆ ಬೇಕಾಗಿದೆ.

ಉದಾಹರಣೆ ತಾಜಾ ಹಾಲಿನ ಮೇಲೆ ಜಿಎಸ್ ಟಿ ಇಲ್ಲ. ಇನ್ನು ಸ್ಕಿಮ್ಡ್ ಹಾಲಿನ ಮೇಲೆ ಶೇ 5ರಷ್ಟು ಜಿಎಸ್ ಟಿ ಹಾಗೂ ಗಟ್ಟಿ ಹಾಲಿನ ಮೇಲೆ ಶೇ 12ರಷ್ಟು ಜಿಎಸ್ ಟಿ ಬೀಳುತ್ತದೆ. ಜಿಎಸ್ ಟಿ ಜಾರಿ ನಂತರ ಕೆಲವು ಕೃಷಿ ವಸ್ತುಗಳ ಬೆಲೆ ಏರಿಕೆ ಆಗಲಿದೆ.

ಉದಾಹರಣೆಗೆ, ಗೊಬ್ಬರ. ಕೃಷಿಗೆ ಬಹಳ ಮುಖ್ಯವಾಗಿ ಬೇಕಾಗುವುದು ಗೊಬ್ಬರ. ಈ ಹಿಂದೆ ಶೇ 6ರಷ್ಟು (ವ್ಯಾಟ್ ಶೇ 5+ ಅಬಕಾರಿ ಸುಂಕ 1) ಆಗುತ್ತಿತ್ತು. ಜಿಎಸ್ ಟಿ ಜಾರಿಯಾದ ಮೇಲೆ ಶೇ 12ರಷ್ಟು ತೆರಿಗೆ ಆಗುತ್ತದೆ.

ಗ್ರಾಹಕರ ಮೇಲೆ ಪರಿಣಾಮ:

ಅಲ್ಪಾವಧಿಯಲ್ಲಿ ಕೆಲವು ಕೃಷಿ ವಸ್ತುಗಳ ಬೆಲೆಯಲ್ಲಿ ಏರಿಕೆ ಆಗುವ ನಿರೀಕ್ಷೆ ಇದೆ. ಆದರೆ ರಾಷ್ಟ್ರಮಟ್ಟದಲ್ಲಿ ಒಂದೇ ಥರದ ಕೃಷಿ ಮಾರುಕಟ್ಟೆ ಸೃಷ್ಟಿ ಆಗುವುದರಿಂದ ರೈತರಿಗೆ ಹಾಗೂ ವಿತರಕರಿಗೆ ದೀರ್ಘಾವಧಿಯಲ್ಲಿ ಅನುಕೂಲ ಆಗಲಿದೆ.

ಎಫ್ ಎಂಸಿಜಿ

ಜಿಎಸ್ ಟಿಯಿಂದ ಹೆಚ್ಚಿನ ಅನುಕೂಲವನ್ನು ನಿರೀಕ್ಷಿಸುತ್ತಿರುವುದು ಎಫ್ ಎಂಸಿಜಿ ವಲಯಕ್ಕೆ. ಸಾಗಣೆ ವೆಚ್ಚ ಕಡಿಮೆ ಆಗುತ್ತದೆ. ಜತೆಗೆ ಪೂರೈಕೆ ಜಾಲವು ಸುಧಾರಿಸಲಿದೆ. ಇನ್ ಪುಟ್ ಕ್ರೆಡಿಟ್ ಮತ್ತು ತೆರಿಗೆ ಹೊರೆ ಕಡಿಮೆ ಆಗುವುದರಿಂದ ಎಫ್ ಎಂಸಿಜಿ ಕಂಪೆನಿಗಳ ಒಟ್ಟಾರೆ ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ.

ಆ ಕಾರಣಕ್ಕೆ ಅಂತಿಮವಾಗಿ ಗ್ರಾಹಕರಿಗೆ ದೀರ್ಘಾವಧಿಯಲ್ಲಿ ಜಿಎಸ್ ಟಿ ಜಾರಿಯಿಂದ ಲಾಭವಾಗುತ್ತದೆ ಎಂಬ ನಿರೀಕ್ಷೆ ಇದೆ.

ಸದ್ಯದ ಸನ್ನಿವೇಶ:

ಅಬಕಾರಿ ಸುಂಕ, ಸೇವಾ ತೆರಿಗೆ, ವ್ಯಾಟ್ ಮತ್ತು ಕೇಂದ್ರ ಮಾರಾಟ ತೆರಿಗೆ ಹೀಗೆ ಹಲವು ಬಗೆಯ ತೆರಿಗೆಗಳನ್ನು ಎಫ್ ಎಂಸಿಜಿ ಕಂಪೆನಿಗಳು ಪಾವತಿಸುತ್ತಿವೆ. ಒಟ್ಟಾರೆಯಾಗಿ ಎಫ್ ಎಂಸಿಜಿ ವಲಯಕ್ಕೆ ಶೇ 22-24ರಷ್ಟು ತೆರಿಗೆ ಬೀಳುತ್ತಿದೆ.

ಜಿಎಸ್ ಟಿ ಪರಿಣಾಮ:

ಜಿಎಸ್ ಟಿ ಜಾರಿ ಆಗುವುದರಿಂದ ಎಫ್ ಎಂಸಿಜಿ ವಲಯದ್ಪ ಒಟ್ಟಾರೆ ತೆರಿಗೆ ಪ್ರಮಾಣ ಶೇ 18-20ಕ್ಕೆ ಬರುತ್ತದೆ. ಜತೆಗೆ ಇನ್ ಪುಟ್ ಕ್ರೆಡಿಟ್ ದೊರೆಯುವುದರಿಂದ ಎಫ್ ಎಂಸಿಜಿ ಕಂಪೆನಿಗಳಿಗೆ ಲಾಭವಾಗುತ್ತದೆ. ವೆಚ್ಚ ಇಳಿಕೆ ಆಗುವುದರಿಂದ ವಿತರಣೆ ವೆಚ್ಚವನ್ನೂ ಕಡಿಮೆ ಮಾಡುತ್ತದೆ (ಶೇ 2-7 ರಿಂದ ಶೆ 1.5ಕ್ಕೆ) ಮತ್ತು ಸುಲಭವಾದ ದಾಸ್ತಾನು ಹಾಗೂ ಸರಕು ಸಾಗಣೆಯಿಂದ ಎಫ್ ಎಂಸಿಜಿ ಕಂಪೆನಿಗಳಿಗೆ ಗಣನೀಯವಾದ ಉಳಿತಾಯ ಆಗುತ್ತದೆ.

ಗ್ರಾಹಕರ ಮೇಲಿನ ಪರಿಣಾಮ:

ಮೂಲ ಆಹಾರ ಪದಾರ್ಥಗಳಾದ ಅಕ್ಕಿ, ಗೋಧಿ, ತರಕಾರಿಗಳು ಮತ್ತು ಹಾಲನ್ನು ಜಿಎಸ್ ಟಿಯಿಂದ ಹೊರಗಿಟ್ಟಿರುವುದರಿಂದ ಶ್ರೀಸಾಮಾನ್ಯರಿಗೆ ದೊಡ್ಡ ಮಟ್ಟದ ನಿರಾಳವಾಗಿದೆ. ಅದೇ ರೀತಿ ನಗರವಾಸಿಗಳು ಸಂತದ ಪಡುವುದಕ್ಕೆ ಕೂಡ ಇಲ್ಲಿ ಕಾರಣಗಳಿವೆ.

ಪನೀರ್, ಶೀತಸ್ಥಿತಿಯಲ್ಲಿ ಇರಿಸಿದ ಆಹಾರ ಪದಾರ್ಥಗಳು ಶೇ 5ರ ಸ್ಲ್ಯಾಬ್ ನಲ್ಲಿ ಬರುತ್ತವೆ. ಅದು ಸದ್ಯದ ದರ ಶೇ 4ಕ್ಕೆ ಹತ್ತಿರದಲ್ಲಿದೆ. ಆದರೆ ಒಣ ಹಣ್ಣುಗಳು, ಚೀಸ್, ಬೆಣ್ಣೆ ಮತ್ತು ತುಪ್ಪದ ತೆರಿಗೆ ದರದಲ್ಲಿ ಏರಿಕೆ ಆಗಿದ್ದು, ಅವು ಶೇ 12 ಜಿಎಸ್ ಟಿ ವ್ಯಾಪ್ತಿಗೆ ಬರುತ್ತವೆ. ಇವೆಲ್ಲಕ್ಕೂ ಈ ಹಿಂದೆ ಶೇ 5ರಷ್ಟು ತೆರಿಗೆ ಬೀಳುತ್ತಿತ್ತು.

ಆದರೆ, ದೀರ್ಘಾವಧಿಯಲ್ಲಿ ಒಟ್ಟಾರೆಯಾಗಿ ಎಫ್ ಎಂಸಿಜಿ ವಲಯಕ್ಕೆ ಹಲವು ಅನುಕೂಲ ದೊರೆಯುವುದರಿಂದ ಜಿಎಸ್ ಟಿ ಜಾರಿಯಿಂದ ಗ್ರಾಹಕರಿಗೆ ಅನುಕೂಲವಾಗಲಿದೆ.

ಟೆಲಿ ಕಮ್ಯುನಿಕೇಷನ್

ಟೆಲಿಕಾಂ ವಲಯದ ಉತ್ಪಾದಕರು ದಾಸ್ತಾನುಗಳ ಸಮರ್ಪಕ ನಿರ್ವಹಣೆಯಿಂದ ಸರಕು ಸಾಗಣೆ ವೆಚ್ಚವನ್ನು ಉಳಿತಾಯ ಮಾಡಬಹುದು. ಆದರೆ ಅಲ್ಪಾವಧಿ ದೃಷ್ಟಿಯಿಂದ ನೋಡಿದರೆ ಜಿಎಸ್ ಟಿ ಜಾರಿ ಆಗಿರುವುದು ಅಲ್ಪ ಪ್ರಮಾಣದಲ್ಲಿ ನಕಾರಾತ್ಮಕವಾಗಲಿದೆ.

ಸದ್ಯದ ಸನ್ನಿವೇಶ:

ಸದ್ಯದ ಪರಿಸ್ಥಿತಿಯಲ್ಲಿ ಟೆಲಿಕಾಂ ವಲಯದ ಮೇಲೆ ಪರೋಕ್ಷ ತೆರಿಗೆಯ ಪರಿಣಾಮ ಆಗುತ್ತದೆ. ಸೇವಾ ತೆರಿಗೆ ಶೇ 14ರಷ್ಟು ಹಾಕುವ ಜತೆಗೆ ಸ್ವಚ್ಛ ಭಾರತ್ ಸೆಸ್ (ಎಸ್ ಬಿಸಿ -ಶೇ 0.5) ಮತ್ತು ಕೃಷಿ ಕಲ್ಯಾಣ್ ಸೆಸ್ (ಕೆಕೆಸಿ- -ಶೇ 0.5) ಬೀಳುತ್ತಿವೆ. ಪರೋಕ್ಷ ತೆರಿಗೆಯು ಸ್ವಚ್ಛ ಭಾರತ ಸೆಸ್ ನಲ್ಲಿ ಇದ್ದು, ಅದನ್ನು ಕೃಷಿ ಕಲ್ಯಾಣ ಸೆಸ್ ಜತೆಗೆ ಮಾತ್ರ ಹೊಂದಾಣಿಕೆ ಮಾಡಬಹುದು.

ಜಿಎಸ್ ಟಿ ಪರಿಣಾಮ:

ಜಿಎಸ್ ಟಿ ಜಾರಿಯಾಗುವುದರಿಂದ ಟೆಲಿಕಾಂ ಸೇವೆಗಳ ಮೇಲಿನ ತೆರಿಗೆಯು ಶೇ 15ರಿಂದ ಶೇ 18ಕ್ಕೆ ಏರಿಕೆ ಆಗಲಿದೆ. ಇನ್ನು ಮೊಬೈಲ್ ಹ್ಯಾಂಡ್ ಸೆಟ್ ಗಳಿಗೆ ಶೇ 12ರಷ್ಟು ಜಿಎಸ್ ಟಿ ನಿಗದಿ ಮಾಡಿದ್ದು, ಇದರಿಂದ ಸ್ಥಳೀಯ ಉತ್ಪಾದಕರು ಕಡಿಮೆ ತೆರಿಗೆ ದರದ ಅನುಕೂಲದಿಂದ ವಂಚಿತರಾಗುತ್ತಾರೆ.

ಗ್ರಾಹಕರ ಮೇಲಿನ ಪರಿಣಾಮ:

ಪೋಸ್ಟ್ ಪೇಯ್ಡ್ ಗ್ರಾಹಕರು ಸಾವಿರಕ್ಕಿಂತ ಹೆಚ್ಚು ಬಿಲ್ ಕಟ್ಟುವ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಮೂವತ್ತು ರುಪಾಯಿ ಪಾವತಿಸಬೇಕಾಗುತ್ತದೆ. ಇನ್ನು ಪ್ರೀಪೇಯ್ಡ್ ಗ್ರಾಹಕರಿಗೆ ಕಡಿಮೆ ಟಾಕ್ ಟೈಮ್ ಬರುತ್ತದೆ. ಇನ್ನು ಮೊಬೈಲ್ ಹ್ಯಾಂಡ್ ಸೆಟ್ ಗಳು ಶೇ 4-5ರಷ್ಟು ಹೆಚ್ಚಾಗಬಹುದು. ಏಕೆಂದರೆ ಅವು ಜಿಎಸ್ ಟಿಯ ಶೇ 12ರ ಸ್ಲ್ಯಾಬ್ ನಲ್ಲಿ ಬರುತ್ತವೆ.

ರಿಯಲ್ ಎಸ್ಟೇಟ್

ಜಿಎಸ್ ಟಿ ಜಾರಿ ಆಗುವುದರಿಂದ ರಿಯಲ್ ಎಸ್ಟೇಟ್ ವಲಯದಲ್ಲಿ ಉತ್ತರದಾಯಿತ್ವ ಮತ್ತು ಪಾರದರ್ಶಕತೆ ಬರುತ್ತದೆ. ಇದರಿಂದ ದೀರ್ಘಾವಧಿಯಲ್ಲಿ ಅನುಕೂಲವಾಗುತ್ತದೆ.

ಸದ್ಯದ ಸನ್ನಿವೇಶ:

ಸದ್ಯಕ್ಕೆ ರಿಯಲ್ ಎಸ್ಟೇಟ್ ವಲಯದ ಮೇಲೆ ಹಲವು ತೆರಿಗೆಗಳ ಹೊರೆ ಬಿದ್ದಿದೆ. ಅಬಕಾರಿ ಸುಂಕ, ಆಕ್ಟ್ರಾಯ್ ಮತ್ತು ಕೆಲವು ತೆರಿಗೆಗಳು ಹಾಕಲಾಗುತ್ತಿದೆ. ಇದರ ಜತೆಗೆ ವ್ಯಾಟ್ ಹಾಗೂ ಸೇವಾ ಶುಲ್ಕವನ್ನು ಸಹ ಕೆಲವು ಕಾಂಟ್ರ್ಯಾಕ್ಟರ್ ಗಳು ಹಾಕುತ್ತಿದ್ದಾರೆ.

ಜಿಎಸ್ ಟಿ ಪರಿಣಾಮ:

ಡೆವಲಪರ್ ಗಳಿಗೆ ಏಕ ರೂಪದ ತೆರಿಗೆ ನಿಯಮದಿಂದ ಅನುಕೂಲವಾಗುತ್ತದೆ. ಹದಿನಾರು ವಿವಿಧ ಪರೋಕ್ಷ ತೆರಿಗೆಗಳು ಒಂದೇ ತೆರಿಗೆ ಆಗುತ್ತವೆ. ಭೂಮಿ ಬೆಲೆ ಹಾಗೂ ಇನ್ ಪುಟ್ ಕ್ರೆಡಿಟ್ ನ ಅನುಕೂಲದ ಜತೆಗೆ ಶೇ 12ರಷ್ಟು ಜಿಎಸ್ ಟಿ ಅನ್ವಯಿಸುತ್ತದೆ. ಇನ್ನೊಂದು ಪ್ರಮುಖ ಬದಲಾವಣೆ ಏನೆಂದರೆ, ಕೆಲಸದ ಗುತ್ತಿಗೆಯನ್ನು ಇನ್ ಪುಟ್ ಕ್ರೆಡಿಟ್ ಜತೆಗೆ ಹೊಂದಾಣಿಕೆ ಮಾಡಬಹುದಾಗಿದೆ.

ಗ್ರಾಹಕರ ಮೇಲಿನ ಪರಿಣಾಮ:

ಡೆವಲಪರ್ ಗಳಿಗೆ ಜಿಎಸ್ ಟಿಯಿಂದ ನಿರಾಳವಾಗುತ್ತದೆ. ಆದರೆ ಮನೆಗಳ ಬೆಲೆಗಳು ಕಡಿಮೆ ಆಗುತ್ತದೆಯೋ ಅಥವಾ ಇಲ್ಲವೋ ಎಂದು ಈ ಹಂತದಲ್ಲಿ ಹೇಳುವುದು ಸಾಧ್ಯವಿಲ್ಲ. ಆದರೆ ಉತ್ತರದಾಯಿತ್ವ ಮತ್ತು ಪಾರದರ್ಶಕತೆಯಂತೂ ಬರುತ್ತದೆ. ದೀರ್ಘಾವಧಿಯಲ್ಲಿ ಇದರಿಂದ ಗ್ರಾಹಕರಿಗೆ ಅನುಕೂಲವಾಗುತ್ತದೆ.

ಆಟೋಮೊಬೈಲ್ಸ್

ಆಟೋಮೊಬೈಲ್ ವಲಯಕ್ಕೆ ಜಿಎಸ್ ಟಿ ಜಾರಿಯಿಂದ ಮಿಶ್ರ ಫಲ ದೊರೆತಿದೆ. ಹಲವು ತೆರಿಗಳನ್ನು ತೆಗೆದುಹಾಕಿ ಜಿಎಸ್ ಟಿ ಒಂದೇ ಬಂದಿದೆ.ಆದರೆ ಆಟೋಮೊಬೈಲ್ಸ್ ಗೆ ಶೇ 28ರಷ್ಟು ಜಿಎಸ್ ಟಿ ಹಾಕಲಾಗಿದೆ. ಇದರಿಂದ ದ್ವಿಚಕ್ರ ವಾಹನಗಳು ಹಾಗೂ ಸಣ್ಣ ಮತ್ತು ಮಧ್ಯಮ ಗಾತ್ರದ ಕಾರುಗಳ ಬೆಲೆ ಏರಿಕೆ ಆಗಲಿದೆ.

ಸದ್ಯದ ಸನ್ನಿವೇಶ:

ಸದ್ಯದ ತೆರಿಗೆ ಕಾನೂನಿನ ಪ್ರಕಾರ ವ್ಯಾಟ್, ಮಾರಾಟ ತೆರಿಗೆ, ರಸ್ತೆ ತೆರಿಗೆ, ನೋಂದಣಿ ಶುಲ್ಕ ಹೀಗೆ ಹಲವು ಬಗೆಯ ತೆರಿಗೆ ಹಾಕಲಾಗುತ್ತಿದೆ. ಅಂತಿಮವಾಗಿ ಇವೆಲ್ಲವೂ ಸೇರಿ ಗ್ರಾಹಕರು ಶೇ 26.50ರಿಂದ ಶೇ 44ರಷ್ಟು ತೆರಿಗೆ ಪಾವತಿಸುತ್ತಿದ್ದಾರೆ. ಇದು ಕೂಡ ಯಾವ ರಾಜ್ಯದಲ್ಲಿ ಎಂಬುದರ ಮೇಲೆ ಅವಲಂಬನೆ ಆಗುತ್ತದೆ.

ಜಿಎಸ್ ಟಿ ಪರಿಣಾಮ:

ಹಲವು ತೆರಿಗೆಗಳೆಲ್ಲ ತೆಗೆದುಹಾಕಿ, ಒಂದು ತೆರಿಗೆ ಪದ್ಧತಿ ಜಾರಿಗೆ ಬರಲಿದೆ. ಇನ್ನು ಇನ್ ಪುಟ್ ತೆರಿಗೆ (ಸೇವೆ, ಬಂಡವಾಳ ಸರಕು ಮತ್ತು ಉತ್ಪಾದನಾ ವಸ್ತುಗಳು) ಹಾಗೂ ಔಟ್ ಪುಟ್ ತೆರಿಗೆ ಹೊಂದಾಣಿಕೆಗೆ ಸಲೀಸಾಗುತ್ತದೆ. ಇದರಿಂದ ಆಟೋಮೊಬೈಲ್ಸ್ ವಲಯದ ಒಟ್ಟಾರೆ ಕ್ಷಮತೆ ಹೆಚ್ಚಿಸುತ್ತದೆ.

ಪೂರೈಕೆ ಜಾಲದಲ್ಲಿ ಪ್ರಗತಿ ಆಗುವುದರಿಂದ ಉತ್ಪಾದಕರು ಆಟೋ ಬಿಡಿಭಾಗಗಳನ್ನು ಸುಲಭವಾಗಿ ಪಡೆಯಬಹುದು. ವಿವಿಧ ವಾಹನಗಳಿಗೆ ವಿವಿಧ ರೀತಿ ಜಿಎಸ್ ಟಿ ದರ ನಿಗದಿ ಮಾಡಲಾಗಿದೆ. ಸೆಸ್ ಶೇ 1ರಿಂದ ಶೇ 15ರವರೆಗೆ ತಗುಲುತ್ತದೆ. ಇದರ ಪರಿಣಾಮವಾಗಿ 1200 ಸಿಸಿಗಿಂತ ಕಡಿಮೆ ಇರುವ ಕಾರಿಗೆ ಸೆಸ್ 1+28 ಜಿಎಸ್ ಟಿ ತಗುಲುತ್ತದೆ.

ವಾಹನಗಳು (ಮೋಟಾರ್ ಸೈಕಲ್ ಮತ್ತು ಕಾರು) 1500 ಸಿಸಿಗಿಂತ ಕಡಿಮೆ ಇರುವುದಕ್ಕೆ ಜಿಎಸ್ ಟಿ 28+3 ಸೆಸ್ ಆಗುತ್ತದೆ. 1500 ಸಿಸಿ ಮತ್ತು ಅದಕ್ಕಿಂತ ಹೆಚ್ಚಿನ ವಾಹನಕ್ಕೆ ಜಿಎಸ್ ಟಿ 28+15 ಸೆಸ್ ಆಗುತ್ತದೆ.

ಗ್ರಾಹಕರ ಮೇಲೆ ಪರಿಣಾಮ:

ಸಣ್ಣ ಕಾರುಗಳನ್ನು ಖರೀದಿಸಬೇಕು ಎಂದುಕೊಂಡವರಿಗೆ ಜಿಎಸ್ ಟಿ ಜಾರಿ ಒಳ್ಳೆ ಸುದ್ದಿ. ಹೆಚ್ಚಿನ ಎಂಜಿನ್ ಪವರ್ ಇರುವ ಕಾರು ಮತ್ತು ಐಷಾರಾಮಿ ಕಾರು ಖರೀದಿಸಬೇಕು ಎಂದುಕೊಂಡವರು ಸೆಸ್ ಜತೆಗೆ ಶೇ 28 ಜಿಎಸ್ ಟಿ ಪಾವತಿಸಬೇಕು.

ಹೆಚ್ಚಿನ ಓದಿಗೆ : ನಿಮ್ಮ ವ್ಯಾಪಾರವು ಜಿಎಸ್ ಟಿ ಜಾರಿಗೆ ಸಿದ್ಧವಾಗಿದೆಯೆ?

ಸಾಮಾನ್ಯ ಗ್ರಾಹಕರ ಮೇಲೆ ಆಗುವ ಪರಿಣಾಮಗಳ ಏರಿಳಿತ
ಸ್ವಾತಂತ್ರ್ಯಾ ನಂತರದಲ್ಲಿ ಭಾರತವು ಕಾಣುತ್ತಿರುವ ಮಹತ್ತರವಾದ ತೆರಿಗೆ ಸುಧಾರಣೆ ಜಿಎಸ್ ಟಿ. ಜಿಎಸ್ ಟಿ ಜಾರಿ ಮಾಡಿದ ಇತರ ರಾಷ್ಟ್ರಗಳಿಂದ ಅಂದರೆ ಅಂತರರಾಷ್ಟ್ರೀಯ ಮಟ್ಟದಿಂದ ಹಲವು ಪಾಠಗಳನ್ನು ಕಲಿಯಲಾಗಿದೆ. ಆರಂಭದಿದಂದಲೂ ಭಾರತ ಸರಕಾರದ ಉದ್ದೇಶ ಏನಿತ್ತೆಂದರೆ, ಹಣದುಬ್ಬರ ವಿರೋಧಿ ಕ್ರಮಗಳನ್ನು ಪರಿಚಯಿಸುವುದಾಗಿತ್ತು.

ಕೆಲವು ವಲಯಗಳ ಮೇಲೆ ಹೆಚ್ಚಿನ ತೆರಿಗೆ ಬಿದ್ದಂತೆ ಕಾಣುತ್ತಿರಬಹುದು. ಅವರು ಕೂಡ ಇನ್ ಪುಟ್ ಕ್ರೆಡಿಟ್ ನಿಂದ ಲಾಭ ಪಡೆಯುತ್ತಾರೆ. ಈ ಹಿಂದೆ ಇನ್ ಪುಟ್ ಕ್ರೆಡಿಟ್ ಇರಲಿಲ್ಲ.

ಕೇಂದ್ರ ಸರಕಾರದ ಸಂದೇಶ ಸ್ಪಷ್ಟವಾಗಿದೆ. ಜಿಎಸ್ ಟಿಯಿಂದ ಏಕರೂಪದ ಹಾಗೂ ಸ್ಥಳೀಯವಾದ ಮಾರುಕಟ್ಟೆ ಸೃಷ್ಟಿಯಾಗುತ್ತದೆ. ಸಾಮಾನ್ಯ ಗ್ರಾಹಕರು ಹೆಚ್ಚಿನ ತೆರಿಗೆ ಹೊರುವ ಅಗತ್ಯ ಇಲ್ಲ. ವಿವಿಧ ವಲಯಗಳ ವ್ಯವಹಾರ ಸಂಸ್ಥೆಗಳಿಗೆ ಇನ್ ಪುಟ್ ಕ್ರೆಡಿಟ್ ರೂಪದಲ್ಲಿ ದೊರೆಯುವ ಅನುಕೂಲವನ್ನು ಎಲ್ಲ ಕಡೆ ದಾಟಿಸುವ ನಿರೀಕ್ಷೆ ಇದೆ. ಅದು ಗ್ರಾಹಕರನ್ನೂ ತಲುಪುತ್ತದೆ. ಇದು ಗ್ರಾಹಕರಿಗೆ ವಾಸ್ತವವಾಗಿ ಅನುಭವಕ್ಕೆ ಬರಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು.

ಒಟ್ಟಾರೆ ಸಾರಾಂಶ

ಒಟ್ಟಾರೆಯಾಗಿ ಇಡೀ ಜಿಎಸ್ ಟಿ ಜಾರಿಯ ಪರಿಣಾಮವನ್ನು ತಿಳಿಸಬೇಕು ಅಂದರೆ, ಜಿಎಸ್ ಟಿ ಜಾರಿಯಾದ ತಕ್ಷಣ ಸಾಮಾನ್ಯ ಗ್ರಾಹಕರಿಗೆ ತೀರಾ ಅನುಕೂಲ ಆಗಿಬಿಡುತ್ತದೆ ಅಂತಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಅಲ್ಪ ಮಟ್ಟಿಗೆ ಸರಕು ಹಾಗೂ ಸೇವೆಗಳ ಬೆಲೆಯಲ್ಲಿ ಏರಿಕೆ ಆಗಬಹುದು. ಅದರಲ್ಲೂ ಶೇ 28ರಷ್ಟು ಜಿಎಸ್ ಟಿ ತಗುಲುವ ಸರಕು ಮತ್ತು ಸೇವೆ ದುಬಾರಿ ಆಗಬಹುದು.

ಆದರೆ, ಜಿಎಸ್ ಟಿಯಿಂದ ಪಾರದರ್ಶಕತೆ ಹಾಗೂ ಏಕ ರೂಪ ತೆರಿಗೆ ಪದ್ಧತಿ ಬರುವುದರಿಂದ ಗ್ರಾಹಕರಿಗೆ ಅನುಕೂಲವಾಗುತ್ತದೆ.

ಜಿಎಸ್ ಟಿ ಜಾರಿಯಿಂದ ಅಸಂಘಟಿತ ವಲಯಗಳು ಮುಳುಗಿ ಹೋಗುತ್ತವೆ. ಗ್ರಾಹಕರಿಗೆ ಸರಕು ಮತ್ತು ಸೇವೆಗಳ ಆಯ್ಕೆಗೆ ಉತ್ತಮ ಅವಕಾಶಗಳು ಸಿಗುತ್ತವೆ. ಕೊನೆಯದಾಗಿ, ಜಿಎಸ್ ಟಿ ಜಾರಿಯ ಅಲ್ಪಾವಧಿಯ ನೋವು ಹಾಗೂ ಗೊಂದಲಗಳು ದೀರ್ಘಾವಧಿಯಲ್ಲಿ ಗ್ರಾಹಕರಿಗೆ ಲಾಭವಾಗಿ ಪರಿಣಮಿಸುತ್ತದೆ.

ಒನ್ಇಂಡಿಯಾ ನ್ಯೂಸ್

English summary
This is an opportune moment to assess the impact of GST on key sectors in the Indian economy. It can also help gauge how the ordinary consumer will be impacted
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X