ಎಚ್ ಪಿ ಕಂಪನಿಯಿಂದ 30 ಸಾವಿರ ಉದ್ಯೋಗ ಕಡಿತ
ಬೆಂಗಳೂರು, ಸೆ. 16: ಹ್ಯೂಲೆಟ್ ಪ್ಯಾಕರ್ಡ್ ಕೋ(ಎಚ್ ಪಿ) ಸಂಸ್ಥೆ ಮತ್ತೊಮ್ಮೆ ಭಾರಿ ಪ್ರಮಾಣದ ಉದ್ಯೋಗ ಕಡಿತ ಘೋಷಿಸಿದೆ. ಜೊತೆಗೆ ಕಂಪ್ಯೂಟರ್ ಹಾಗೂ ಪ್ರಿಂಟರ್ ವ್ಯವಹಾರ ಹಾಗೂ ಹಾರ್ಡ್ ವೇರ್ ಮತ್ತು ಇನ್ನಿತರ ಸರ್ವೀಸ್ ವಿಭಾಗ ಪ್ರತ್ಯೇಕ ಸಂಸ್ಥೆಗಳಾಗುವುದನ್ನು ಖಚಿತಪಡಿಸಿದೆ.
ಎಚ್ ಪಿ ಇಬ್ಭಾಗವನ್ನು ಸಮರ್ಧಿಸಿಕೊಂಡಿರುವ ಸಂಸ್ಥೆಯ ಸಿಇಒ ಮೆಗ್ ವಿಟ್ಮನ್ ಅವರು ಶೇ 10ರಷ್ಟು ಉದ್ಯೋಗಿಗಳು ಅಥವಾ ಸುಮಾರು 25 ರಿಂದ 30,000 ಉದ್ಯೋಗಿಗಳನ್ನು ಮನೆಗೆ ಕಳಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ. ಈ ಮುಂಚೆ 55,000 ಉದ್ಯೋಗಿಗಳ ಕಡಿತಕ್ಕೆ ಮುಂದಾಗಿರುವುದಾಗಿ ಘೋಷಿಸಿತ್ತು.

ಎಚ್ ಪಿ ಸಂಸ್ಥೆಯ ಈ ನಿರ್ಧಾರದಿಂದ ವಾರ್ಷಿಕವಾಗಿ 2.7 ಬಿಲಿಯನ್ ಡಾಲರ್ ಉಳಿತಾಯವಾಗಲಿದೆ. ಸಂಸ್ಥೆಯಲ್ಲಿ ಸದ್ಯಕ್ಕೆ 3,00,000 ಉದ್ಯೋಗಿಗಳಿದ್ದಾರೆ.
1939ರಲ್ಲಿ ಕ್ಯಾಲಿಫೋರ್ನಿಯಾದ ಗ್ಯಾರೇಜ್ ನಲ್ಲಿ ಬಿಲ್ ಹ್ಯೂಲೆಟ್ ಹಾಗೂ ಡೇವ್ ಪ್ಯಾಕರ್ಡ್ ಅವರು ಆರಂಭಿಸಿದ ಈ ಸಂಸ್ಥೆ ಸಿಲಿಕಾನ್ ವ್ಯಾಲಿಯಲ್ಲಿ ಸದ್ದು ಮಾಡಿದ್ದಲ್ಲದೆ ಪಿಸಿ ವಿಭಾಗದಲ್ಲಿ ಕ್ರಾಂತಿ ಹುಟ್ಟುಹಾಕಿತ್ತು. 2001ರಲ್ಲಿ ಕಂಪ್ಯಾಕ್ ಕಂಪ್ಯೂಟರ್ ಖರೀದಿಸಿದ ಎಚ್ ಪಿ ಸಂಸ್ಥೆ ಡೆಲ್ ಹಾಗೂ ಐಬಿಎಂ ವಿರುದ್ಧ ಪಿಸಿ ವಿಭಾಗದಲ್ಲಿ ಭಾರಿ ಪೈಪೋಟಿ ನೀಡಿತ್ತು.
ವಿಟ್ ಮನ್ ಅವರು ಹ್ಯೂಲೆಟ್ ಪ್ಯಾಕರ್ಡ್ ಎಂಟರ್ ಪ್ರೈಸಸ್ ನ ಸಿಇಒ ಆಗಿ ಮುಂದುವರೆಯಲಿದ್ದಾರೆ. ಎಚ್ ಪಿ ಐಎನ್ ಸಿ(ಪ್ರಿಂಟಿಂಗ್, ಪರ್ಸನಲ್ ಕಂಪ್ಯೂಟರ್)ಗೆ ಡಿಯಾನ್ ವೈಸ್ಲರ್ ಚೇರ್ಮನ್ ಆಗಲಿದ್ದಾರೆ.
ಈ ವರ್ಷ ಹಲವು ದೊಡ್ಡ ಜಾಗತಿಕ ಕಂಪನಿಗಳ ವಿಭಜನೆಯನ್ನು ಕಾಣಬಹುದಾಗಿದೆ. ಕಂಪ್ಯೂಟರ್ (ಪಿಸಿ) ಕ್ಷೇತ್ರದಲ್ಲಿ ಹೊಸತನ ಹುಟ್ಟುಹಾಕಿದ ಎಚ್ ಪಿ ಸಂಸ್ಥೆ ಈಗ ತನ್ನ ಮೂಲ ಶಕ್ತಿಯನ್ನೇ ವಿಭಜನೆ ಮಾಡುತ್ತಿದೆ. ಪೆಪ್ಸಿಕೋ ಸಂಸ್ಥೆ ಕೂಡಾ ತಂಪು ಪಾನೀಯ ಹಾಗೂ ಸ್ನ್ಯಾಕ್ಸ್ ವಿಭಾಗ ಇಬ್ಭಾಗಕ್ಕೆ ಮುಂದಾಗಿದೆ. ಇದೇ ರೀತಿ ಇಬ್ಭಾಗದ ಯೋಜನೆ ಜನರಲ್ ಎಲೆಕ್ಟ್ರಿಕ್ ಸಂಸ್ಥೆಯಲ್ಲೂ ಚಾಲ್ತಿಯಲ್ಲಿದೆ.












Click it and Unblock the Notifications