ಸರಕಾರಿ ನಿಯಮಗಳ ಗೂಟ ಜಡಿದು ಇ ಕಾಮರ್ಸ್ ಕಂಪನಿಗಳಿಗೆ ಹಗ್ಗ ಕಟ್ಟಲು ತಯಾರಿ
ಫ್ಲಿಪ್ ಕಾರ್ಟ್, ಅಮೆಜಾನ್ ನಂಥ ಇ ಕಾಮರ್ಸ್ ಕಂಪನಿಗಳಿಗೆ ಬಿಗಿಯಾದ ಕಡಿವಾಣ ಹಾಕಲು ಸರಕಾರ ಕೆಲ ಕಠಿಣ ನಿಯಮಾವಳಿಗಳನ್ನು ಜಾರಿಗೊಳಿಸಲಿದೆ. ತನ್ನದೇ ವ್ಯವಹಾರದ ಪಾಲುದಾರಿಕೆ ಇರುವ ಕಂಪನಿಗಳ ಉತ್ಪನ್ನಗಳನ್ನು ಮಾರಾಟ ಮಾಡಬಾರದು ಎಂಬುದು ಅಂಥ ನಿಯಮಗಳಲ್ಲೊಂದು.
ಎಕ್ಸ್ ಕ್ಲೂಸಿವ್ ಮಾರಾಟ ಎಂದು ಕೆಲ ಉತ್ಪನ್ನಗಳನ್ನು ತಮ್ಮ ಮೂಲಕ ಮಾತ್ರ ಮಾರುವ ಒಪ್ಪಂದ ಮಾಡಿಕೊಳ್ಳಬಾರದು ಎಂದು ವಾಣಿಜ್ಯ ಹಾಗೂ ಕೈಗಾರಿಕೆ ಸಚಿವಾಲಯ ನಿಷೇಧ ಹೇರಲಿದೆ. ಇದರ ಜತೆಗೆ ಕ್ಯಾಶ್ ಬ್ಯಾಕ್ ಕೊಡುಗೆಗಳನ್ನು ನೀಡುತ್ತಿವೆಯಲ್ಲಾ, ಅವು ನ್ಯಾಯ ಸಮ್ಮತವಾಗಿರಬೇಕು ಹಾಗೂ ಪಕ್ಷಪಾತ ಮಾಡಬಾರದು ಎಂದು ಕೂಡ ಸೇರಿಸಲಾಗಿದೆ.
ಇನ್ನು ಆಡಿಟರ್ ಮೂಲಕ ಲೆಕ್ಕಪತ್ರ ವರದಿಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಸಲ್ಲಿಸಬೇಕು. ಹಿಂದಿನ ಆರ್ಥಿಕ ವರ್ಷದ ಲೆಕ್ಕಾಚಾರದ ಮಾಹಿತಿ ಸೆಪ್ಟೆಂಬರ್ ಮೂವತ್ತರೊಳಗೆ ಸಲ್ಲಿಕೆ ಆಗಲೇಬೇಕು. ಈ ಎಲ್ಲ ಬದಲಾವಣೆಯು 2019ರ ಫೆಬ್ರವರಿ 1ನೇ ತಾರೀಕಿನಿಂದ ಜಾರಿಯಾಗುತ್ತದೆ.

ಇ ಕಾಮರ್ಸ್ ಕಂಪನಿಗಳು ಭಾರೀ ರಿಯಾಯಿತಿ ನೀಡುವುದರಿಂದ ದೇಸಿ ವ್ಯಾಪಾರಸ್ಥರಿಂದ ಸಮಸ್ಯೆಗಳಾಗುತ್ತವೆ ಎಂದು ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯದ ನಿಯಮಾನುಸಾರ ಮಾರುಕಟ್ಟೆ ಸ್ಥಳ ಆಧಾರಿತ ಇ ಕಾಮರ್ಸ್ ಚಟುವಟಿಕೆಗಳಿಗೆ ಶೇಕಡಾ ನೂರರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಇದೆ. ಸರಕು ಆಧಾರಿತ ಚಟುವಟಿಕೆಗೆ ಇದನ್ನು ನಿಷೇಧಿಸಲಾಗಿದೆ.












Click it and Unblock the Notifications