ಪ್ರಯಾಣ, ಹೋಟೆಲ್ ತಿಂಡಿ, ಮೊಬೈಲ್ ಬಿಲ್ ದುಬಾರಿ!
ಬೆಂಗಳೂರು, ನ.16: ಸ್ವಚ್ಛಭಾರತ ಯೋಜನೆಯ ಅಂಗವಾಗಿ ಶೇ.0.5 ಮೇಲ್ತೆರಿಗೆ (ಸೆಸ್) ಯನ್ನು ಕೇಂದ್ರ ಸರಕಾರ ವಿಧಿಸಿರುವ ಹಿನ್ನೆಲೆಯಲ್ಲಿ ಹೊಟೇಲ್-ರೆಸ್ಟೋರಂಟ್, ದೂರಸಂಪರ್ಕ (ಮೊಬೈಲ್ ಹಾಗೂ ಟೆಲಿಫೋನ್) ಹಾಗೂ ಪ್ರಯಾಣ ದರಗಳು ರವಿವಾರದಿಂದ ದುಬಾರಿಯಾಗಲಿವೆ. ಇದರಿಂದಾಗಿ ಪ್ರಸಕ್ತ ಹಣಕಾಸು ವರ್ಷ ದಲ್ಲಿ ಕೇಂದ್ರದ ಬೊಕ್ಕಸಕ್ಕೆ 3,800 ಕೋಟಿ ರೂ. ಹೆಚ್ಚುವರಿ ಆದಾಯ ದೊರೆಯುವ ನಿರೀಕ್ಷೆಯಿದೆ.
ಸೆಸ್ ಹೇರಿಕೆಯಿಂದಾಗಿ, ಎಲ್ಲ ತೆರಿಗೆ ಯೋಗ್ಯ ಸೇವೆಗಳ ಸೇವಾತೆರಿಗೆ ದರವು ಶೇ.14ರಿಂದ ಶೇ.14.5ಕ್ಕೆ ಏರಿಕೆಯಾಗಲಿದೆ. ಸ್ವಚ್ಚ ಭಾರತ ಮೇಲ್ತೆರಿಗೆಯಿಂದಾಗಿ ಸಂಗ್ರಹವಾಗುವ ಆದಾಯವು ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನಕ್ಕೆ ಆರ್ಥಿಕ ನಿಧಿಯಾಗಿ ಬಳಸಿಕೊಳ್ಳಲಾಗುವುದು. ಶೇ. 0.5 ಸ್ವಚ್ಛಭಾರತ ಸೆಸ್ ಹೇರಿಕೆಯಿಂದಾಗಿ ರೆಸ್ಟಾರೆಂಟ್-ಹೊಟೇಲ್ ಬಿಲ್ ಗಳ ಸೇವಾತೆರಿಗೆ ದರವು ಶೇ. 5.6ರಿಂದ ಶೇ.5.8ಕ್ಕೇರಲಿದೆ.

ನವೆಂಬರ್ 15ಕ್ಕಿಂತ ಮೊದಲು ಹಣ ಪಡೆದಿರುವ ಹಾಗೂ ನ.29ಕ್ಕಿಂತ ಮೊದಲು ಸರಕುಪಟ್ಟಿ (ಇನ್‌ವಾಯ್ಸಿ) ಸಿದ್ಧಪಡಿಸಲಾದ ಸೇವೆಗಳಿಗೆ ಸ್ವಚ್ಛಭಾರತ ತೆರಿಗೆ ಅನ್ವಯವಾಗುವುದಿಲ್ಲವೆಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ಸ್ವಚ್ಛ ಭಾರತ ಮೇಲ್ತೆರಿಗೆಯಿಂದ ಸರಕಾರವು ಸಂಪೂರ್ಣ ವರ್ಷಕ್ಕೆ ಸುಮಾರು ರೂ. 10 ಸಾವಿರ ಕೋಟಿ ಸಂಗ್ರಹಿಸುವ ನಿರೀಕ್ಷೆ ಹೊಂದಿದೆ. ಆದುದರಿಂದ 2016ರ ಮಾ.31ರ ವರೆಗಿನ ಪ್ರಸಕ್ತ ವಿತ್ತ ವರ್ಷದ ಉಳಿದ ಭಾಗದಲ್ಲಿ ಈ ತೆರಿಗೆಯು ಬೊಕ್ಕಸಕ್ಕೆ ಸುಮಾರು 3800 ಕೋಟಿ ರೂ.ಗಳನ್ನು ತಂದುಕೊಡಲಿದೆ.












Click it and Unblock the Notifications