ಬೆಂಗಳೂರಲ್ಲಿ ಫುಡ್ ಡೆಲಿವರಿ ಸೇವೆ ಆರಂಭಿಸಿದ ಅಮೆಜಾನ್
ಬೆಂಗಳೂರು, ಮೇ 21 : ಮನೆ ಬಾಗಿಲಿಗೆ ಆಹಾರ ತಲುಪಿರುವ ಕ್ಷೇತ್ರಕ್ಕೆ ಅಮೆಜಾನ್ ಇಂಡಿಯಾ ಪಾದಾರ್ಪಣೆ ಮಾಡಲಿದೆ. ಈಗಾಗಲೇ ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸ್ವಿಗ್ಗಿ ಮತ್ತು ಝೆಮ್ಯೂಟೋಗೆ ಇದರಿಂದಾಗಿ ಪೈಪೋಟಿ ಎದುರಾಗಲಿದೆ.
ಗುರುವಾರ ಅಮೆಜಾನ್ ಇಂಡಿಯಾ ಈ ಕುರಿತು ಘೋಷಣೆ ಮಾಡಿದೆ. ಫುಡ್ ಡೆಲಿವರಿ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಬೆಂಗಳೂರು ಸೇರಿದಂತೆ ಕೆಲವು ನಗರದಲ್ಲಿ ಆರಂಭಿಸಲಾಗುತ್ತದೆ ಎಂದು ಹೇಳಿದೆ. ಅಮೆಜಾನ್ ಅಪ್ಲಿಕೇಶನ್‌ನಲ್ಲಿಯೇ ಆಹಾರವನ್ನು ಜನರು ಆರ್ಡರ್ ಮಾಡಬಹುದು.
ಪ್ರಾಯೋಗಿಕವಾಗಿ ಬೆಂಗಳೂರು ನಗರದ ಕೆಲವು ಪ್ರದೇಶಗಳಲ್ಲಿ ಈ ಸೇವೆ ಆರಂಭವಾಗಿದೆ. ಪಿನ್ ಕೋಡ್ ಬಳಸಿಕೊಂಡು ಜನರು ತಮ್ಮ ಬಡಾವಣೆಗೆ ಸೇವೆ ಲಭ್ಯವಿದೆಯೇ? ಎಂದು ಪರೀಕ್ಷಿಸಬಹುದಾಗಿದೆ.

ಅಮೆಜಾನ್ ಪ್ರತಿಷ್ಠಿತ ಹೋಟೆಲ್‌ಗಳ ಜೊತೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಅಡಿಗಾಸ್, ಫ್ರೆಶ್‌ಮೆನ್ಯು, ನಮಸ್ತೆ, ಚಾಯ್ ಪಾಯಿಂಟ್ ಸೇರಿದಂತೆ ವಿವಿಧ ಸಂಸ್ಥೆಗಳ ಜೊತೆ ಮಾತುಕತೆ ನಡೆಸಿದೆ. ಚೈನೀಸ್ ಖಾದ್ಯಗಳನ್ನು ತಯಾರು ಮಾಡುವ ಸಂಸ್ಥೆಗಳ ಜೊತೆಗೂ ಒಪ್ಪಂದ ಆಗಿದೆ.
ಜನರು ಆಹಾರ ಪದಾರ್ಥಗಳ ಡೆಲಿವರಿಗಾಗಿ ಹಲವು ದಿನಗಳಿಂದ ಬೇಡಿಕೆ ಇಡುತ್ತಿದ್ದರು. ಈಗಾಗಲೇ ಇರುವ ಸೇವೆಗಳ ಜೊತೆ ಆಹಾರ ಪದಾರ್ಥಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಲಾಕ್ ಡೌನ್ ಸಮಯದಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ ಎಂದು ಅಮೆಜಾನ್ ಹೇಳಿದೆ.
ಲಾಕ್ ಡೌನ್ ಅವಧಿಯಲ್ಲಿ ಅಮೆಜಾನ್ ಅಗತ್ಯ ವಸ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿದೆ. ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಪ್ರದೇಶಕ್ಕೆ ಅಗತ್ಯ ವಸ್ತುಗಳ ಸರಬರಾಜನ್ನು ಮಾಡಲಾಗಿದೆ. ಇದನ್ನೇ ಆಧಾರವಾಗಿ ಇಟ್ಟುಕೊಂಡು ಆಹಾರ ಪದಾರ್ಥಗಳ ಡೆಲಿವರಿಗೆ ಮುಂದಾಗಿದೆ.
ಸ್ವಿಗ್ಗಿ ಮತ್ತು ಝೊಮ್ಯಾಟೋ ಲಾಕ್ ಡೌನ್ ಅವಧಿಯಲ್ಲಿ ಆದ ನಷ್ಟದಿಂದ ಹೊರ ಬರಲು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿವೆ. ಇಂತಹ ಸಂದರ್ಭದಲ್ಲಿ ಅಮೆಜಾನ್ ಹೊಸದಾಗಿ ಈ ಕ್ಷೇತ್ರಕ್ಕೆ ಕಾಲಿಡುತ್ತಿದೆ.












Click it and Unblock the Notifications