ಸ್ಕಾರ್ಪಿಯೋ ಎಸ್‌ಯುವಿಯಲ್ಲಿ ತೆರೆದುಕೊಳ್ಳದ ಏರ್‌ಬ್ಯಾಗ್, ಆನಂದ್ ಮಹೀಂದ್ರಾ ಸೇರಿ 13 ಮಂದಿ ವಿರುದ್ಧ ಪ್ರಕರಣ
ಕಾನ್ಪೂರ, ಸೆಪ್ಟೆಂಬರ್ 26: ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಮತ್ತು ಮಹೀಂದ್ರ ಆಂಡ್ ಮಹೀಂದ್ರಾ ಕಂಪನಿಯ 13 ಉದ್ಯೋಗಿಗಳ ವಿರುದ್ಧ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ.
ಮಹೀಂದ್ರಾ ಉದ್ಯೋಗಿಗಳು ಸ್ಕಾರ್ಪಿಯೊ ಎಸ್‌ಯುವಿಯನ್ನು ಏರ್‌ಬ್ಯಾಗ್ ಇಲ್ಲದೆ ಮಾರಾಟ ಮಾಡಿದ್ದಾರೆ. ಕಾರಿನಲ್ಲಿ ಅಪಘಾತದ ವೇಳೆ ಅವರ ಏಕೈಕ ಪುತ್ರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವ್ಯಕ್ತಿ ಆರೋಪಿಸಿದ್ದಾರೆ.

ಜೂಹಿ ನಿವಾಸಿ ರಾಜೇಶ್ ಮಿಶ್ರಾ ಅವರು 2 ಡಿಸೆಂಬರ್ 2020 ರಂದು ತಿರುಪತಿ ಆಟೋದಿಂದ 17.39 ಲಕ್ಷಕ್ಕೆ ಕಪ್ಪು ಬಣ್ಣದ ಸ್ಕಾರ್ಪಿಯೊವನ್ನು ಖರೀದಿಸಿದ್ದರು ಎಂದು ಹೇಳಿದರು. ಕಂಪನಿಯು ವೈಶಿಷ್ಟ್ಯಗಳನ್ನು ವಿವರಿಸಿದ ನಂತರ ಅವರು SUV ಅನ್ನು ಖರೀದಿಸಿದರು . ಇದಕ್ಕೂ ಮೊದಲು ಅವರು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಆನಂದ್ ಮಹೀಂದ್ರಾ ತೋರಿಸಿದ ಜಾಹೀರಾತನ್ನು ಸಹ ನೋಡಿದ್ದರು.
ಬಳಿಕ ರಾಜೇಶ್ ಮಿಶ್ರಾ ಅವರು ತಮ್ಮ ಏಕೈಕ ಪುತ್ರ ಡಾ.ಅಪೂರ್ವ ಮಿಶ್ರಾ ಅವರಿಗೆ ಸ್ಕಾರ್ಪಿಯೋವನ್ನು ಉಡುಗೊರೆಯಾಗಿ ನೀಡಿದ್ದು, ಅದೇ ಕಾರಿನಲ್ಲಿ ಸೆಕನ್‌ಪುರಕ್ಕೆ ಹಿಂತಿರುಗುತ್ತಿದ್ದಾಗ ಮಂಜಿನಿಂದಾಗಿ ಸ್ಕಾರ್ಪಿಯೋ ಎಸ್‌ಯುವಿ ಡಿವೈಡರ್‌ಗೆ ಡಿಕ್ಕಿ ಹೊಡೆದು ವಾಹನ ಪಲ್ಟಿಯಾಗಿದ್ದು, ಅವರ ಏಕೈಕ ಪುತ್ರ ಅಪೂರ್ವ ಸಾವನ್ನಪ್ಪಿದ್ದರು.
ಅಪಘಾತದ ಘಟನೆಯ ನಂತರ ಜನವರಿ 29 ರಂದು ರಾಜೇಶ್ ಅವರು ತಿರುಪತಿ ಆಟೋ ಶೋ ರೂಮ್‌ಗೆ ಹೋಗಿ ವಾಹನದ ದೋಷಗಳ ಬಗ್ಗೆ ಮತ್ತು ಅಪಘಾತದ ಸಮಯದಲ್ಲಿ ಸೀಟ್ ಬೆಲ್ಟ್ ಧರಿಸಿದ್ದರೂ ಏರ್ ಬ್ಯಾಗ್ ಕೆಲಸ ಮಾಡದಿರುವ ಬಗ್ಗೆ ತಿಳಿಸಿದರು.
ಬಳಿಕ ಕಾರಿನ ಬಗ್ಗೆ ದೂರು ನೀಡಿದ ಅವರು ಕಾರಿನ ಮಾರಾಟಗಾರರು ಕಾರನ್ನು ಮೋಸದಿಂದ ಮಾರಾಟ ಮಾಡುತ್ತಿದ್ದಾರೆ. ಸರಿಯಾಗಿ ಕಾರನ್ನು ತಪಾಸಣೆ ನಡೆಸಿದ್ದರೆ ಮಗ ಅಪಘಾತದಲ್ಲಿ ಸಾಯುತ್ತಿರಲಿಲ್ಲ. ಇದಲ್ಲದೆ ಸಮಸ್ಯೆ ಹೇಳಲು ಹೋದ ತಮ್ಮ ಮೇಲೆ ನಿರ್ದೇಶಕರ ಸೂಚನೆಯ ಮೇರೆಗೆ ಕಂಪನಿಯ ಮ್ಯಾನೇಜರ್ ತನ್ನನ್ನು ಮತ್ತು ಅವರ ಕುಟುಂಬವನ್ನು ನಿಂದಿಸಿದ್ದಾರೆ ಹಾಗೂ ಕಿರುಕುಳ ಮತ್ತು ಕೊಲೆ ಬೆದರಿಕೆಗಳನ್ನು ಹಾಕಲಾಗಿದೆ ಎಂದು ರಾಜೇಶ್ ಮಿಶ್ರಾ ಆರೋಪಿಸಿದ್ದಾರೆ.
ಬಳಿಕ ಮಿಶ್ರಾ ರಾಯಪುರ ಪೊಲೀಸ್ ಠಾಣೆಯಲ್ಲಿ ಆನಂದ್ ಗೋಪಾಲ್ ಮಹೀಂದ್ರ ಸೇರಿದಂತೆ 13 ಜನರ ವಿರುದ್ಧ ನ್ಯಾಯಾಲಯದ ಮೂಲಕ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಕಾರಿನ ತಾಂತ್ರಿಕ ತಪಾಸಣೆ ನಡೆಸಲಾಗುವುದು ಎಂದು ಠಾಣೆ ಪ್ರಭಾರಿ ತಿಳಿಸಿದ್ದಾರೆ.












Click it and Unblock the Notifications