ಸೆಬಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ ಸಹಾರಾ ಗ್ರೂಪ್
ನವದೆಹಲಿ, ಡಿಸೆಂಬರ್ 03: ಸಹಾರಾ ಸಂಘಟನೆಯ ಮುಖ್ಯಸ್ಥ ಸುಬ್ರೊತೊ ರಾಯ್ ಮತ್ತು ಅವರ ಎರಡು ಕಂಪೆನಿಗಳು 62,600 ಕೋಟಿ ರೂ. (8.4 ಬಿಲಿಯನ್ ಡಾಲರ್) ಠೇವಣಿ ಇಡಲು ಕೇಳಿದ್ದ ಸೆಬಿ ವಿರುದ್ಧ, ಸಹರಾ ಇಂಡಿಯಾ ಗ್ರೂಪ್ ಸುಪ್ರೀಂಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದೆ.
ಸಹಾರಾ ಕಂಪನಿಯಿಂದ 62,600 ಕೋಟಿ ರೂಪಾಯಿ ಠೇವಣಿ ಕೇಳುತ್ತಿರುವ ಸೆಬಿ ಕ್ರಮ ಸರಿಯಿಲ್ಲ ಮತ್ತು ಇದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ. ಸೆಬಿ ಸುಪ್ರೀಂಕೋರ್ಟ್ ನ ದಾರಿ ತಪ್ಪಿಸಿದೆ ಮತ್ತು ಸಹಾರಾ ವಿರುದ್ಧ ಸಾರ್ವಜನಿಕರಲ್ಲಿ ಆಕ್ರೋಶ ಮೂಡುವಂತೆ ಮಾಡಿದೆ ಎಂದು ಸಹಾರಾ ತನ್ನ ಅರ್ಜಿಯಲ್ಲಿ ಆಕ್ಷೇಪಿಸಿದೆ.
2012 ಮತ್ತು 2015 ರ ನ್ಯಾಯಾಲಯದ ಆದೇಶಗಳ ಪ್ರಕಾರ ಹೂಡಿಕೆದಾರರಿಂದ ಸಂಗ್ರಹಿಸಿದ ಸಂಪೂರ್ಣ ಮೊತ್ತವನ್ನು ಶೇ. 15ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಠೇವಣಿ ಇಡಲು ಸಹಾರಾ ವಿಫಲವಾಗಿದೆ ಎಂದು ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

ಆದರೆ ಸೆಬಿ ತನ್ನ ಲೆಕ್ಕಾಚಾರದಲ್ಲಿ ಬಡ್ಡಿ ಮೊತ್ತವನ್ನು ಕೂಡಾ ಸೇರಿಸಿದೆ ಎಂದು ಸಹಾರಾ ಆರೋಪಿಸಿದೆ. ''ಸೆಬಿ ಹಾಗೂ ಸಹಾರಾ ಮರುಪಾವತಿ ಖಾತೆಯಲ್ಲಿ ಇರಬೇಕಾದ 24,029.73 ಕೋಟಿ ರೂಪಾಯಿ ಬದಲಿಗೆ ಸದ್ಯ 22,500 ಕೋಟಿ ರೂಪಾಯಿ ಮಾತ್ರ ಇದೆ. ಆದ್ದರಿಂದ ಸಹಾರಾ ಕೇವಲ 1,529 ಕೋಟಿ ರೂ. ಪಾವತಿಸಬೇಕಿದೆ '' ಎಂದು ಹೇಳಿದೆ.
ಎಂಟು ವರ್ಷಗಳಿಗಿಂತ ಹೆಚ್ಚು ಕಾಲ ಕಳೆದರೂ, ಸೆಬಿ 3.03 ಕೋಟಿ ಹೂಡಿಕೆದಾರರ ಪರಿಶೀಲನೆ ಮತ್ತು ಮರುಪಾವತಿಯನ್ನು ನಡೆಸಿಲ್ಲ. ಇದು ಹೂಡಿಕೆದಾರರ ಹಿತಾಸಕ್ತಿ ಮತ್ತು ಸೆಬಿ-ಸಹಾರಾ ವಿವಾದ ಪರಿಹಾರಕ್ಕೆ ಮುಖ್ಯವಾಗಿದೆ ಎಂದು ಎರಡು ಕಂಪನಿಗಳು ತಿಳಿಸಿವೆ.
ಆದರೆ ಬಡ್ಡಿಯೊಂದಿಗೆ ಸಂಗ್ರಹಿಸಿದ ಸಂಪೂರ್ಣ ಮೊತ್ತವನ್ನು ಠೇವಣಿ ಮಾಡುವ ಬಗ್ಗೆ ನ್ಯಾಯಾಲಯವು ಹೊರಡಿಸಿದ ವಿವಿಧ ಆದೇಶಗಳನ್ನು ಸಂಸ್ಥೆಗಳಿಂದ "ಸಂಪೂರ್ಣ ಉಲ್ಲಂಘನೆ" ಯಾಗಿವೆ ಎಂದು ಸೆಬಿ ಹೇಳಿದೆ.












Click it and Unblock the Notifications