ಬೀದರ್‌ನಲ್ಲಿ ಬೀಳುತ್ತಾ ಬಿಜೆಪಿ? ಲೋಕಸಭಾ ಚುನಾವಣೆಗೂ ಅಸಮಾಧಾನದ ಹೊಗೆ: ಭಗವಂತ್ ಖೂಬಾ ಸ್ಪರ್ಧಿಸದಂತೆ ಶಾಸಕರಿಂದ ವಿರೋಧ
ಬೀದರ್ ಜನವರಿ 10: ಲೋಕಸಭಾ ಚುನಾವಣೆಗೂ ಮುನ್ನ ಬೀದರ್‌ನಲ್ಲಿ ಬಿಜೆಪಿ ಶಾಸಕರು ಕೇಂದ್ರ ಸಚಿವ ಭಗವಂತ್ ಖೂಬಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಖೂಬಾ ಅವರು ಮುಂಬರುವ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಗಾಗಿ ಪ್ರಬಲ ಪಕ್ಷಗಳು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ತೊಡೆ ತಟ್ಟಿ ನಿಂತಿದೆ. ಹೀಗಾಗಿ ಈಗಿನಿಂದಲೇ ಪಕ್ಷದ ಉನ್ನತ ನಾಯಕರು ಸ್ಥಳೀಯ ಶಾಸಕರೊಂದಿಗೆ ಸಭೆ ನಡೆಸಿ ಚರ್ಚಿಸುತ್ತಿದ್ದಾರೆ. ಇದರೊಂದಿಗೆ ಪಕ್ಷದಲ್ಲಿ ಶಾಸಕರ ನಡುವೆ ಇರುವ ಭಿನ್ನಾಭಿಪ್ರಾಯಗಳಿಗೆ ತೆರೆ ಎಳಿಯುವಂತ ಕೆಲಸ ಮಾಡಲಾಗುತ್ತಿದೆ.

ಆ ನಿಟ್ಟಿನಲ್ಲಿ ಬೀದರ್ ಲೋಕಸಭಾ ಚುನಾವಣಾ ಅಭಿಪ್ರಾಯ ಸಂಗ್ರಹ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕೇಂದ್ರ ಸಚಿವ ಭಗವಂತ್ ಖೂಬಾ ಬಗ್ಗೆ ಶಾಸಕರು ಮುನಿಸಿನ ಮಾತುಗಳನ್ನಾಡಿದ್ದಾರೆ. ಭಗವಂತ್ ಖೂಬಾ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಇಬ್ಬರು ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ಟಿಕೆಟ್‌ಗಾಗಿ ಡಿಮ್ಯಾಂಡ್ ಕೂಡ ಮಾಡಿದ್ದಾರೆ.
ಮಾಜಿ ಸಚಿವ ಪ್ರಭುಚೌಹಾಣ್ ಹಾಗೂ ಶಾಸಕ ಶರಣು ಸಲಗರ ಸಭೆಯಲ್ಲಿ ನೇರಾ ನೇರಾ ಭಗವಂತ್ ಖೂಬಾ ಸ್ಪರ್ಧಿಸುವಂತಿಲ್ಲ ಎಂದು ವಾದಿಸಿದ್ದಾರೆ. ಜೊತೆಗೆ ಕಳೆದ ಬಾರಿ ವಿಧಾನಸಭೆಯಲ್ಲಿ ಬಿಜೆಪಿ ಸೋಲಲು ನೇರ ಕಾರಣ ಖೂಬಾ ಅವರೇ ಎಂದು ಶಾಸಕರು ದೂರಿದ್ದಾರೆ. ಜೊತೆಗೆ ಇನ್ನೂ ಕೆಲ ಶಾಸಕರೂ ಇದಕ್ಕೆ ಧ್ವನಿಗೂಡಿಸಿದ್ದು ಕೂಡ ಕಂಡು ಬಂದಿದೆ. ಶಾಸಕರ ವಿರೋಧ ವ್ಯಕ್ತವಾಗುತ್ತಿದ್ದಂತೆ ಸಭೆಯಿಂದ ಖೂಬಾ ಎದ್ದು ಹೋಗಿದ್ದಾರೆ. ಶಾಸಕರಿಂದ ನೇರವಾಗಿ ಅಭಿಪ್ರಾಯ ವ್ಯಕ್ತವಾದ ಬೆನ್ನಲ್ಲೆ ಬೇಸರಗೊಂಡು ಅವರು ಅಶ್ವತ್ಥ್ ನಾರಾಯಣ ಜೊತೆ ಮಾತನಾಡಿ ಸಭೆಯಿಂದ ತೆರಳಿದ್ದಾರೆ.

ವಿಧಾನಸಭಾ ಚುನಾವಣೆಯಿಂದ ಹುಟ್ಟಿಕೊಂಡ ಆಂತರಿಕ ಕಲಹ ಬೀದರ್ ಬಿಜೆಪಿಯಲ್ಲಿ ಇನ್ನೂ ಮುಂದುವರೆದಿದೆ. ಮುಂಬರುವ ಲೋಕಸಭಾ ಚುನಾವಣೆಗೂ ಇದು ಸಾಗುವ ಸಾಧ್ಯತೆ ದಟ್ಟವಾಗಿ ಕಾಣಿಸುತ್ತಿದೆ. ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಕಂಡು ಬರುತ್ತಿದೆ. ಸೋತ ಅಭ್ಯರ್ಥಿಗಳು ಹೊಂದಾಣಿಕೆ ರಾಜಕಾರಣವೇ ತಮ್ಮ ಸೋಲಿಗೆ ಕಾರಣ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಹೀಗಾಗಿ ಖೂಬಾ ಅವರು ಮುಂಬರುವ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ದೂರಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಮಾಜಿ ಸಚಿವ ಪ್ರಭು ಚವಾಣ್ ಕೇಂದ್ರ ಸಚಿವ ಭಗವಂತ್ ಖೂಬಾ ವಿರುದ್ಧ ವಾಗ್ದಾಳಿ ಮಾಡಿದ್ದರು. ಖೂಬಾ ತಮ್ಮನ್ನು ಕೊಲ್ಲು ಸಂಚು ಮಾಡಿದ್ದಾರೆನ್ನುವ ಆರೋಪ ಮಾಡಿದ್ದರು. ಜೊತೆಗೆ ಬಸವಕಲ್ಯಾಣ ಕ್ಷೇತ್ರದ ಶಾಸಕ ಶರಣು ಸಲಗರ ತಮ್ಮ ಅಸಮಾಧಾನವನ್ನು ಫೇಸ್ಬುಕ್ನಲ್ಲಿ ಹೊರ ಹಾಕಿದ್ದರು.
ಹೀಗೆ ಬಿಜೆಪಿ ನಾಯಕರ ಒಳಜಗಳ, ತಮ್ಮದೇ ಪಕ್ಷದ ಶಾಸಕರೊಂದಿಗೆ ಮುಸುಕಿನ ಗುದ್ದಾಟ, ಪ್ರಭು ಚೌವ್ಹಾಣ್-ಭಗವಂತ್ ಖೂಬಾ ನಡುವಿನ ಕಿತ್ತಾಟ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ, ಕ್ಷೇತ್ರದ ಜನರ ಜೊತೆ ಹಾಲಿ ಸಂಸದರ ಕಡಿಮೆ ಒಡನಾಟದಿಂದಾಗಿ ಬಿಜೆಪಿ ಈಬಾರಿಯೂ ಜಯ ಸಾಧಿಸಲು ಕಷ್ಟವಾಗುತ್ತಾ ಎನ್ನುವ ಅನುಮಾನ ಶುರುವಾಗಿದೆ.
ಅದೇನೇ ಇರಲಿ. ಸದ್ಯ ಸಭೆಯಲ್ಲಿ ಪಕ್ಷದ ನಾಯಕರು ಯಾರಿಗೆ ಟಿಕೆಟ್ ನೀಡಬೇಕೆಂದು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಶಾಸಕರನ್ನು ಸಮಾಧಾನಪಡಿಸಿದ್ದಾರೆಂದು ತಿಳಿದು ಬಂದಿದೆ. ಒಂದು ವೇಳೆ ಬಿಜೆಪಿ ಒಳಜಗಳ ಹೀಗೆ ಮುಂದುವರೆದರೆ ಮುಂಬರುವ ಚುನಾವಣೆಯಲ್ಲಿ ಇದು ಬಿಜೆಪಿಗೆ ದೊಡ್ಡ ಹೊಡೆತ ನೀಡುವುದರಲ್ಲಿ ಅನುಮಾನವೇ ಇಲ್ಲ.












Click it and Unblock the Notifications