ಗೋಹತ್ಯೆ ಆರೋಪದಲ್ಲಿ ಮುಸ್ಲಿಂ ಮನೆಗೆ ನುಗ್ಗಿದ ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು, ಜುಲೈ. 06: ಬಸವಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗರ ಮತ್ತು ಅವರ ಬೆಂಬಲಿಗರ ಮೇಲೆ ಬಕ್ರೀದ್ ಹಬ್ಬಕ್ಕೆ ಪ್ರಾಣಿಗಳನ್ನು ವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಮುಸ್ಲಿಂ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿ ಅವರ ಕುಟುಂಬ ಸದಸ್ಯರನ್ನು ನಿಂದಿಸಿದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಒಟ್ಟು 9 ಜನರ ವಿರುದ್ಧ ದೂರು ದಾಖಲಾಗಿದೆ.
ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಮೆಹರಾಜ್ ಇಮಾನುಲ್ಲಾಖಾನ್ (27) ಎಂಬುವವರು ಬುಧವಾರ ನೀಡಿದ ದೂರಿನ ಮೇರೆಗೆ ಬೀದರ್ ಜಿಲ್ಲೆಯ ಬಸವಕಲ್ಯಾಣದ ಶಾಸಕ ಶರಣು ಸಲಗರ ಮತ್ತು ಅವರ ಅನುಯಾಯಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 143 (ಕಾನೂನುಬಾಹಿರ ಸಭೆ), 147 (ಗಲಭೆ), 504 ( ಶಾಂತಿ ಭಂಗವನ್ನು ಪ್ರಚೋದಿಸಲು ಉದ್ದೇಶಪೂರ್ವಕವಾಗಿ ಅವಮಾನ ), 506 (ಅಪರಾಧ ಬೆದರಿಕೆ), 448 (ಮನೆಯ ಅತಿಕ್ರಮಣ), 295A (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಮತ್ತು 149 (ಸಾಮಾನ್ಯ ವಸ್ತುವಿನ ವಿಚಾರಣೆಯಲ್ಲಿ ಮಾಡಿದ ಅಪರಾಧಕ್ಕೆ ಕಾನೂನುಬಾಹಿರ ಸಭೆಯ ಪ್ರತಿಯೊಬ್ಬ ಸದಸ್ಯರು ತಪ್ಪಿತಸ್ಥರು) ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ಜುಲೈ 1 ರಂದು ಬಸವಕಲ್ಯಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ದೂರಿನ ಪ್ರಕಾರ, ಮೆಹರಾಜ್ ಇಮಾನುಲ್ಲಾಖಾನ್ ತನ್ನ ಮನೆಯೊಳಗೆ ಈದ್ ಆಚರಿಸುತ್ತಿದ್ದಾಗ, ಶರಣು ಸಲಗರ ಮತ್ತು ಸುಮಾರು 15 ರಿಂದ 25 ಬೆಂಬಲಿಗರು ತಮ್ಮ ಮನೆಯೊಳಗೆ ಪ್ರಾಣಿಗಳನ್ನು ಕೊಲ್ಲುತ್ತಿದ್ದಾರೆ ಎಂದು ಕಿರುಚುತ್ತಾ ಅವರ ಮನೆಗೆ ನುಗ್ಗಿದ್ದಾರೆ. ಆರಂಭದಲ್ಲಿ ಗೋಹತ್ಯೆ ಮಾಡಲಾಗುತ್ತಿದೆ ಎಂದು ಶಾಸಕರು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.
ಮೆಹರಾಜ್ ಇಮಾನುಲ್ಲಾಖಾನ್ ಮತ್ತು ಅವರ ನೆರೆಹೊರೆಯವರು ತಮ್ಮ "ಅನುಮಾನಗಳನ್ನು" ಪರಿಹರಿಸಲು ಪ್ರಯತ್ನಿಸುತ್ತಿದ್ದರೂ, ಶಾಸಕರು ಕುಟುಂಬದ ಮಹಿಳೆಯರನ್ನು ನಿಂದಿಸುವುದನ್ನು ಮುಂದುವರೆಸಿದರು ಮತ್ತು ಅವರಿಗೆ ಪಾಠ ಕಲಿಸುತ್ತೇವೆ ಎಂದು ಬೆದರಿಕೆ ಹಾಕಿದರು. ಮುಸ್ಲಿಮರು ಎಲ್ಲಾ ಫ್ಲಾಟ್‌ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹೀಗೆ ಅವರಿಗೆ ಅವಕಾಶ ನೀಡಿದರೆ, ಅವರು ಹಿಂದೂಗಳಿಗೆ ವಾಸಿಸಲು ಬಿಡುವುದಿಲ್ಲ. ಅವರು ಅತಿಯಾಗಿ ಆಡುತ್ತಿದ್ದಾರೆ. ನಾವು ಅವರಿಗೆ ತಕ್ಕ ಪಾಠ ಕಲಿಸುತ್ತೇವೆ" ಎಂದು ಶರಣು ಸಲಗರ ಬೆದರಿಸಿಸಿದ್ದಾರೆ ಎಂದು ತಮ್ಮ ದೂರಿನಲ್ಲಿ ಮೆಹರಾಜ್ ಹೇಳಿದ್ದಾರೆ.

ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಬಸವಕಲ್ಯಾಣ ಪೊಲೀಸರು ಇನ್ನೂ ತನಿಖೆ ಆರಂಭಿಸಿಲ್ಲ.












Click it and Unblock the Notifications