ಆಶಾ ಕಾರ್ಯಕರ್ತೆಯರಿಗೆ ವೈಯಕ್ತಿಕ ನೆರವು ನೀಡಿದ ಈಶ್ವರ ಖಂಡ್ರೆ
ಬೀದರ್, ಮೇ 24; ಕೋವಿಡ್ ಮಾಹಾಮಾರಿ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್‌ಗಳಲ್ಲಿ ಆಶಾ ಕಾರ್ಯಕರ್ತೆಯರು ಸೇರಿದ್ದಾರೆ. ಭಾಲ್ಕಿ ತಾಲೂಕಿನ 247 ಆಶಾ ಕಾರ್ಯಕರ್ತರಿಗೆ ತಲಾ 2 ಸಾವಿರ ರೂ. ಪ್ರೋತ್ಸಾಹ ಧನವನ್ನು ಶಾಸಕ ಈಶ್ವರ ಖಂಡ್ರೆ ವೈಯಕ್ತಿಕವಾಗಿ ನೀಡಿದ್ದಾರೆ.
ಕೊರೊನಾ ಕಾಣಿಸಿಕೊಂಡ ದಿನದಿಂದಲೂ ಮನೆ ಮನೆಗೆ ತೆರಳಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಿ, ರೋಗ ಲಕ್ಷಣ ಇರುವವರನ್ನು ಪರೀಕ್ಷಿಸಿ, ಅವರಿಗೆ ಸೂಕ್ತ ಚಿಕಿತ್ಸೆ ಪಡೆಯಲು ಮನವೊಲಿಸು ಕಾರ್ಯವನ್ನು ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ.
ಅವರ ಕಾರ್ಯದಿಂದಾಗಿ ಜನರ ಪ್ರಾಣ ಉಳಿಯುತ್ತಿದೆ ಮತ್ತು ಸೋಂಕು ಸಮುದಾಯಕ್ಕೆ ಹರಡದಂತೆ ಬೇರು ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆ ಪರಿಗಣಿಸಿ ಈ ಸಹಾಯ ಮಾಡಲಾಗಿದೆ.

ಕಳೆದ 3 ತಿಂಗಳಿಂದಲೂ ಆಶಾ ಕಾರ್ಯಕರ್ತರಿಗೆ ಸರ್ಕಾರದಿಂದ ಬರಬೇಕಾದ ಗೌರವ ಧನವೂ ಬರುತ್ತಿಲ್ಲ ಎಂಬ ವಿಷಯ ಈಶ್ವರ ಖಂಡ್ರೆಗೆ ತಿಳಿದಿತ್ತು. ಆದ್ದರಿಂದ ತಮ್ಮ ಕಡೆಯಿಂದ ಕಿರು ಅಭಿನಂದನಾ ಕಾಣಿಕೆಯನ್ನು ಕೊರೊನಾ ವಾರಿಯರ್‌ಗಳಾದ ಆಶಾ ಕಾರ್ಯಕರ್ತರಿಗೆ ನೀಡಲಾಗುತ್ತಿದೆ ಎಂದು ಶಾಸಕರು ಹೇಳಿದ್ದಾರೆ.
"ಸರ್ಕಾರ ಕೂಡಲೇ ಆಶಾ ಕಾರ್ಯಕರ್ತರಿಗೆ ಕೊಡಬೇಕಾಗಿರುವ ಸಂಭಾವನೆಯನ್ನು ಬಿಡುಗಡೆ ಮಾಡಬೇಕು. ಕೊರೊನಾ ವಾರಿಯರ್ಸ್‌ಗಳಾದ ಅವರಿಗೆ ಪ್ರೋತ್ಸಾಹ ಧನವನ್ನು ನೀಡಬೇಕು" ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶಾಸಕರ ಪರವಾಗಿ ಈಶ್ವರ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಪ್ರೋತ್ಸಾಹ ಧನ ವಿತರಣೆ ಮಾಡಿದರು. ಒಟ್ಟು 5 ಲಕ್ಷ ರೂ. ವಿತರಣೆ ಮಾಡಿದರು. ಭಾಲ್ಕಿ ತಹಸೀಲ್ದಾರ್, ಡಿವೈಎಸ್ಪಿ, ತಾಲೂಕಾ ಆರೋಗ್ಯ ಅಧಿಕಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.











Click it and Unblock the Notifications