ಮಧ್ಯಪ್ರದೇಶದಲ್ಲಿ ಮತ್ತೆ ಬಿಜೆಪಿ ಹವಾ..? ಕಾಂಗ್ರೆಸ್ ಜಸ್ಟ್ ಮಿಸ್?! NDTV ವಿಶ್ಲೇಷಣೆ
ಭೋಪಾಲ್, ನವೆಂಬರ್ 23: ಇದೇ ತಿಂಗಳಾಂತ್ಯದಲ್ಲಿ ನಡೆಯಲಿರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ಎನ್ ಡಿವಿ ಪ್ರನೋಯ್ ರಾಯ್ ಅವರು ವಿಶ್ಲೇಷಿಸಿದ್ದಾರೆ.
ಕಾಂಗ್ರೆಸ್ ಸಹ ಅತ್ಯುತ್ತಮ ಪ್ರದರ್ಶನ ನೀಡಿ, ಕೆಲವೇ ಸೀಟುಗಳ ಅಂತರದಲ್ಲಿ ಬಹುಮತ ಪಡೆಯುವಲ್ಲಿ ವಿಫಲವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಮಧ್ಯಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆಯ ಹೊರತಾಗಿಯೂ ಮುಖ್ಯಮಂತ್ರಿ ಶಿವರಾಜ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಸತತ ನಾಲ್ಕನೇ ಬಾರಿಗೆ ಜನರು ಆರಿಸಲಿದ್ದಾರೆ ಎಂದು ಈ ವಿಶ್ಲೇಷಣೆಯಲ್ಲಿ ಚರ್ಚಿಸಲಾಗಿದೆ.

116 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು
2013 ರ ವಿಧಾನಸಭೆ ಚುನಾವಣೆಯಲ್ಲಿ 166 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಸ್ಪಷ್ಟ ಬಹುಮತ ಪಡೆದಿದ್ದ ಬಿಜೆಪಿ ಈ ಬಾರಿ 116 ಕ್ಕೆ ಕುಸಿಯಲಿದೆ. ಒಟ್ಟು 230 ಕ್ಷೇತ್ರಗಳ ವಿಧಾನಸಭೆಯಲ್ಲಿ 116 ಮ್ಯಾಜಿಕ್ ಸಂಖ್ಯೆಯಾಗಿರುವುದರಿಂದ ಬಿಜೆಪಿ ಬಹುಮತ ಪಡೆಯುತ್ತದೆ ಎಂದು ಈ ವಿಶ್ಲೇಷಣೆ ತಿಳಿಸಿದೆ.

102 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಜಯ
2013 ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 57 ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಕಾಂಗ್ರೆಸ್, ಈ ವರ್ಷ 102 ಕ್ಷೇತ್ರಗಳಲ್ಲಿ ಜಯಸಾಧಿಸಿ, ಹೆಚ್ಚುವರಿ 45 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂದು ವಿಶ್ಲೇಷಣೆ ಹೇಳಿದೆ. ಇದು ಬಿಜೆಪಿಗೆ ಮುಖಭಂಗವೂ, ಎಚ್ಚರಿಕೆಯೂ ಆಗಬಹುದು.

ಬಿಎಸ್ಪಿಗೆ ಎಷ್ಟು ಸ್ಥಾನ
ಮಾಯಾವತಿಯವರ ಬಹುಜನ ಸಮಾಜವಾದಿ ಪಕ್ಷವು 5 ಸ್ಥಾನಗಳಲ್ಲಿ ಜಯಸಾಧಿಸಬಹುದು ಎಂದು ಅಂದಾಜಿಸಲಾಗಿದೆ. ಕಳೆದ ಚುನಾವಣೆಯಲ್ಲಿ 4 ಸ್ಥಾನಗಳಲ್ಲಿ ಬಿಎಸ್ಪಿ ಗೆಲುವು ಸಾಧಿಸಿತ್ತು. ಇತರರು 7 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು. ಅಂದರೆ 102+5+7=114 ಸ್ಥಾನಗಳಾಗುವುದರಿಂದ ಬಿಎಸ್ಪಿ ಮತ್ತು ಇತರರೊಂದಿಗೆ ಮೈತ್ರಿ ಮಾಡಿಕೊಂಡರೂ ಕಾಂಗ್ರೆಸ್ ಬಹುಮತ ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ ಎಂಬುದು ವಿಶ್ಲೇಷಣೆಯ ಸಾರ.

ನ.28 ರಂದು ಚುನಾವಣೆ
230 ವಿಧಾನಸಭಾ ಕ್ಷೇತ್ರಗಳ ಮಧ್ಯಪ್ರದೇಶದಲ್ಲಿ ನ.28 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ. ಪ್ರಸ್ತುತ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ಸತತ ಮೂರು ಬಾರಿ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.












Click it and Unblock the Notifications