ಮಧ್ಯಪ್ರದೇಶ: 94 ಶಾಸಕರ ಹೆಸರಲ್ಲಿ ಕ್ರಿಮಿನಲ್ ಕೇಸ್!
ಭೋಪಾಲ್, ಡಿಸೆಂಬರ್ 15: ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯ ಫಲಿತಾಂಶ ಇತ್ತೀಚೆಗೆ ಪ್ರಕಟವಾಗಿ, ಮುಖ್ಯಮಂತ್ರಿಯ ಆಯ್ಕೆಯೂ ಆಗಿದೆ.
ಆದರೆ ಇಲ್ಲಿನ 230 ರಲ್ಲಿ 94 ಕ್ಕೂ ಹೆಚ್ಚು ಶಾಸಕರ ಹೆಸರಿನಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂಬ ಆಘಾತಕಾರಿ ಮಾಹಿತಿಯನ್ನು ಅಸೋಸಿಯೇಶನ್ ಆಫ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಹೊರಹಾಕಿದೆ.
94 ರಲ್ಲಿ 47 ಶಾಸಕರು ಗಂಭೀರ ಅಪರಾಧ ಪ್ರಕರಣ ಎನ್ನಿಸಿದ ಕೊಲೆ, ಕೊಲೆ ಪ್ರಯತ್ನ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಎದುರಿಸುತ್ತಿದ್ದಾರೆ ಎಂದು ಈ ವರದಿ ತಿಳಿಸಿದೆ.

ಕಾಂಗ್ರೆಸ್ ನ 25 %, ಬಿಜೆಪಿಯ 14% ರಷ್ಟು ಶಾಸಕರು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದು, ಸುಖದೇವ್ ಫನ್ಸೆ ಎಂಬ ಕಾಂಗ್ರೆಸ್ ಶಾಸಕ ಕೊಲೆ ಪ್ರಕರಣವನ್ನೂ ಎದುರಿಸುತ್ತಿದ್ದಾರೆ. ಅವರು ಮಧ್ಯಪ್ರದೇಶದ ಮುಲ್ತಾಯ್ ಕ್ಷೇತ್ರದ ಶಾಸಕರು!
ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ನೀಡಿದ ಅಫಿಡವಿಟ್ ನಲ್ಲಿ 56(114) ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ತಮ್ಮ ಮೇಲೆ ಅಪರಾಧ ಪ್ರಕರಣವಿರುವುದನ್ನು ಉಲ್ಲೇಖಿಸಿದ್ದರೆ, ಬಿಜೆಪಿಯ 34(109) ಶಾಸಕರು ಅಪರಾಧ ಪ್ರಕರಣ ಎದುರಿಸುತ್ತಿದ್ದಾರೆ.
ನವೆಂಬರ್ 28 ರಂದು ನಡೆದ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ಡಿಸೆಂಬರ್ 11 ರಂದು ಬಿಡುಗಡೆಯಾಗಿತ್ತು. ಒಟ್ಟು 230 ಕ್ಷೇತ್ರಗಳಲ್ಲಿ 114 ರಲ್ಲಿ ಕಾಂಗ್ರೆಸ್ ಮತ್ತು 109 ಬಿಜೆಪಿ ಗೆದ್ದಿತ್ತು. ಪಕ್ಷೇತರರ ಬೆಂಬಲದೊಂದಿಗೆ ಕಾಂಗ್ರೆಸ್ ಸರ್ಕಾರ ರಚಿಸುತ್ತಿದ್ದು, ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಅವರನ್ನು ಮಧ್ಯಪ್ರದೇಶದ ಮುಖ್ಯಮಂತ್ರಿಯನ್ನಾಗಿ ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಘೋಷಿಸಿದೆ.












Click it and Unblock the Notifications