ಮುಸಲ್ಮಾನ ಎಂಬ ಅನುಮಾನ, ಆಧಾರ್ ಕಾರ್ಡ್ ತೋರಿಸಲಿಲ್ಲವೆಂದು ಹೊಡೆದು ಕೊಂದೇಬಿಟ್ರು
ಭೂಪಾಲ್, ಮೇ 21: ಆಧಾರ್ ಕಾರ್ಡ್ ತೋರಿಸಲಿಲ್ಲ ಎಂಬ ಕಾರಣಕ್ಕೆ ಅಮಾನವೀಯವಾಗಿ ಥಳಿತಕ್ಕೊಳಗಾಗಿದ್ದ ವೃದ್ಧರೊಬ್ಬರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ನಡೆದಿದೆ. ಮುಸಲ್ಮಾನ ಎಂಬ ಅನುಮಾನದಲ್ಲಿ ಆಧಾರ್ ಕಾರ್ಡ್ ಕೇಳಲಾಗಿದ್ದು, ತೋರಿಸದಿದ್ದಕ್ಕೆ ಮನಬಂದಂತೆ ಹೊಡೆದಿದ್ದರಿಂದ ವೃದ್ಧ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಈ ದುರ್ಘಟನೆಯಲ್ಲಿ ಸಾವನ್ನಪ್ಪಿರುವ ದುರ್ದೈವಿ 60 ವರ್ಷದ ಭನ್ವರ್‌ಲಾಲ್ ಎಂದು ಗುರುತಿಸಲಾಗಿದ್ದು, ಈತ ರತ್ಲಮ್ ನಗರದ ಸಾರ್ಸಿ ಗ್ರಾಮದವರು ಎಂದು ತಿಳಿದುಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರೋಪಿಗಳು ಥಳಿಸುವಾಗ ವೃದ್ಧನಿಗೆ ಆಧಾರ್ ಕಾರ್ಡ್ ತೋರಿಸುವಂತೆ ಕೇಳುತ್ತಿರುವ ಧ್ವನಿ ಕೇಳಿಬಂದಿದೆ.
|
ಅನ್ಯಧರ್ಮದವನೆಂದು ಶಂಕಿಸಿ ಥಳಿತ
ವೈರಲ್ ವಿಡಿಯೋದಲ್ಲಿ ಬಿಜೆಪಿ ಕಾರ್ಪೊರೇಟರ್ ಒಬ್ಬರ ಪತಿ ದಿನೇಶ್ ಕುಶ್ವಾಹ್ ಅವರು ಜೈನ್ ಅವರನ್ನು ಥಳಿಸಿ, ಅವರ ಆಧಾರ್ ಕಾರ್ಡ್ ಕೇಳುತ್ತಿರುವುದು ವಿಡಿಯೊದಲ್ಲಿದೆ. ಅಲ್ಲದೆ ವೈರಲ್ ವಿಡಿಯೋದಲ್ಲಿ ಕುಶ್ವಾಹ್ ಅವ ನೀನು ಮುಸ್ಲಿಂ ಎಂದು ಕೇಳುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಲೇ ಶನಿವಾರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಐಸಿಸಿ ಸೆಕ್ಷನ್ 304(ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಮತ್ತು ಸೆಕ್ಷನ್ 302( ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಟುಂಬಸ್ಥರಿಂದ ತಪ್ಪಿಸಿಕೊಂಡಿದ್ದ ಜೈನ್
ಭನ್ವರ್‌ಲಾಲ್ ಮೇ 18ರಂದು ತನ್ನ ಕುಟುಂಬದೊಂದಿಗೆ ರಾಜಸ್ಥಾನದ ಚಿತ್ತೋರ್‌ಗಢದಲ್ಲಿರುವ ಕೋಟೆಗೆ ತೆರಳಿದ್ದರು. ಆತ ಮಾನಸಿಕ ಅಸ್ವಸ್ಥ ಎನ್ನಲಾಗಿದ್ದು ಕೋಟೆಗೆ ಪೂಜೆಗೆ ತೆರಳಿದ್ದ ವೇಳೆ ತಪ್ಪಿಸಿಕೊಂಡಿದ್ದರು. ಸಾಕಷ್ಟು ಹುಡುಕಾಟದ ನಂತರ ಕುಟುಂಬ ಸದಸ್ಯರು ಚಿತ್ತೋರಗಢ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಬಗ್ಗೆ ದೂರು ದಾಖಲಿಸಿತ್ತು. ಆದರೆ ಶುಕ್ರವಾರ ನೀಮುಚ್ ಜಿಲ್ಲೆಯ ಮಾನಸದಲ್ಲಿ ಜೈನ್ ಶವವಾಗಿ ಪತ್ತೆಯಾಗಿದ್ದರು.
|
ಪೊಲೀಸರ ಹಂಚಿಕೊಂಡಿದ್ದ ಫೋಟೋದಿಂದ ಗುರುತು ಪತ್ತೆ
ಮಾನಸದ ರಾಮ್‌ಪುರ ರಸ್ತೆಯಲ್ಲಿರುವ ರಸ್ತೆಯಲ್ಲಿರುವ ಮಾರುತಿ ಶೋರೂಮ್ ಬಳಿ ವೃದ್ಧನ ಶವ ಪತ್ತೆಯಾಗಿತ್ತು. ಆದರೆ ಯಾವುದೇ ಗುರುತಿನಿ ಚೀಟಿ ಸಿಗದ ಕಾರಣ ಶವವನ್ನು ಫ್ರೀಜರ್‌ನಲ್ಲಿ ಇಟ್ಟು ಗುರುತಿಗಾಗಿ ಅವರ ಫೋಟೋವನ್ನು ತೆಗೆದು ಸಾಮಾಜಿಕ ಜಾಲಾತಾಣದಲ್ಲಿ ಹರಿಬಿಡಲಾಗಿತ್ತು. ಕೊನೆಗೂ ಸಾಮಾಜಿಕ ಜಾಲಾತಾಣದಲ್ಲಿ ಫೋಟೋ ನೋಡಿದ ರಾಕೇಶ್ ಜೈನ್ ಅದು ತಮ್ಮ ಸಹೋದರ ಭನ್ವರ್‌ಲಾಲ್ ಎಂದು ಗುರುತಿಸಿ ಮಾನಸಗೆ ಬಂದು ಮರಣೋತ್ತರ ಪರೀಕ್ಷೆಯ ಬಳಿಕ ಭನ್ವರ್‌ಲಾಲ್ ಶವವನ್ನು ತಮ್ಮ ಗ್ರಾಮಕ್ಕೆ ಕೊಂಡೊಯ್ದು ಅಂತ್ಯ ಸಂಸ್ಕಾರ ನಡೆಸಿದ್ದರು.
|
ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ವೈರಲ್ ವಿಡಿಯೋ
ಸಹೋದರನ ಎಲ್ಲಾ ಸಂಸ್ಕಾರ ಕಾರ್ಯ ನೆರವೇರಿಸಿದ ನಮತರ ಶನಿವಾರ ಭನ್ವಲ್‌ಲಾಲ್ ಜೈನ್ ಸಹೋದರ ರಾಕೇಶ್ ಜೈನ್ ಮೊಬೈಲ್‌ಗೆ ವಿಡಿಯೋ ಬಂದಿದ್ದು, ಅದರಲ್ಲಿ ಒಬ್ಬ ವ್ಯಕ್ತಿ ತನ್ನ ಸಹೋದರನಿಗೆ ಕಪಾಳಕ್ಕೆ ಹೊಡೆಯುತ್ತಿರುವುದು ಕಂಡುಬಂದಿದೆ. ವಿಡಿಯೋದಲ್ಲಿ ನಿನ್ನ ಹೆಸರು ಮೊಹಮ್ಮದ್ , ನಿನ್ನ ಆಧಾರ್ ಕಾರ್ಡ್ ತೋರಿಸು ಎಂದು ಸತತವಾಗಿ ಕಪಾಳಕ್ಕೆ ಹೊಡೆಯುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ನಂತರ ವಿಡಿಯೋದೊಂದಿಗೆ ರಾಕೇಶ್ ಜೈನ್ ಮಾನಸ ಠಾಣೆಗೆ ಆಗಮಿಸಿ, ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಮಾನಸ ಪೊಲೀಸರು ವೀಡಿಯೋವನ್ನು ಪರಿಶೀಲಿಸಿದ್ದು, ಹಲ್ಲೆ ನಡೆಸಿದ ವ್ಯಕ್ತಿ ಬಿಜೆಪಿ ಪಕ್ಷದ ಕಾರ್ಪೋರೇಟರ್ ಪತಿ ಎನ್ನಲಾಗುತ್ತಿದೆ.
|
ಲಾ ಅಂಡರ್ ಆರ್ಡರ್ ಬಗ್ಗೆ ಪ್ರಶ್ನಿಸಿದ ಕಾಂಗ್ರೆಸ್
ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಜ್ಯ ಸಭಾ ಸದಸ್ಯ ದಿಗ್ವಿಜಯ್ ಸಿಂಗ್ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಇದರಲ್ಲಿ ವೃದ್ಧನಿಗೆ ಥಳಿಸುತ್ತಿರುವ ವ್ಯಕ್ತಿ ಬಿಜೆಪಿಯ ದಿನೇಶ್ ಕುಶ್ವಾಹ್, ಈತನ ವಿರುದ್ಧ ಐಪಿಸಿ ಸೆಕ್ಷನ್ 302 ಕೊಲೆ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ನನಗೆ ಸಿಕ್ಕಿದೆ ಎಂದು ಟ್ವೀಟ್ ಮಾಡಿದ್ದಾರೆ.
ಮಧ್ಯ ಪ್ರದೇಶದ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಟ್ವಿಟ್ ಮಾಡಿದ್ದು, "ರಾಜ್ಯದಲ್ಲಿ ಲಾ ಅಂಡ್ ಆರ್ಡರ್ ಪರಿಸ್ಥಿತಿ ಹೇಗಿದೆ. ಮಧ್ಯಪ್ರದೇಶದಲ್ಲಿ ಏನಾಗುತ್ತಿದೆ? ಸೆಯೋನಿಯಲ್ಲಿ ಆದಿವಾಸಿಗಳನ್ನು ಹತ್ಯೆ ಮಾಡಲಾಗಿದೆ, ಗುನಾ ಮ್ಹಫವ್, ಮಾಂಡ್ಲಾ, ಇದೀಗ ರಾಜ್ಯದ ನೀಮುಚ್ ಜಿಲ್ಲೆಯ ಮಾನಸದಲ್ಲಿ ಭನ್ವರ್‌ಲಾಲ್ ಜೈನ್ ಎಂದು ಹೇಳಲಾದ ಹಿರಿಯ ವ್ಯಕ್ತಿಯ ಕೊಲೆ" ಎಂದು ಟ್ವೀಟ್ ಮಾಡಿದ್ದಾರೆ.