ಕುತೂಹಲ ಮೂಡಿಸಿದ ಎಚ್ಡಿಕೆ-ಜಮೀರ್ ಅಹ್ಮದ್ ಭೇಟಿ
Recommended Video

ಬೆಂಗಳೂರು, ಜೂನ್ 20: ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ್ ಅವರು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
ರಂಜಾನ್ ನಿಮಿತ್ತ ಮೆಕ್ಕಾ ಯಾತ್ರೆಗೆ ತೆರಳಿದ್ದ ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್, ಕುಮಾರಸ್ವಾಮಿ ಅವರ ಪರವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೀಗ ಅವರನ್ನು ಭೇಟಿಯಾಗಿ ಸುಮಾರು ಅರ್ಧ ಗಂಟೆಗಳ ಕಾಲ ಮಾತನಾಡಿರುವುದು ಕಾಂಗ್ರೆಸ್ಸಿಗರಲ್ಲಿ ತಲ್ಲಣವೆಬ್ಬಿಸಿದೆ. ಆದರೆ ಜಮೀರ್ ಅವರು ಕುಮಾರಸ್ವಾಮಿಯವರೊಂದಿಗೆ ಯಾವ ವಿಷಯ ಚರ್ಚಿಸಿದ್ದಾರೆ ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ.
ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಜೆಡಿಎಸ್ ನಲ್ಲಿದ್ದಾಗ ಎಚ್ ಡಿ ಕುಮಾರಸ್ವಾಮಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಕೆಲವು ಭಿನ್ನಾಭಪ್ರಾಯಗಳಿಂದಾಗಿ ಜೆಡಿಎಸ್ ತೊರೆದಿದ್ದ ಅವರು ಎಚ್ ಡಿ ಕುಮಾರಸ್ವಾಮಿ ಅವರಿಗೆ ತಲೆನೋವಾಗಿದ್ದರು. ನಂತರ ಕಾಂಗ್ರೆಸ್ಸಿಗೆ ಸೇರಿ ಜೆಡಿಎಸ್ ಗೆ ಸೆಡ್ಡು ಹೊಡೆದು ನಿಂತಿದ್ದರು.

ವಿಧಾನಸಭೆಯ ಚುನಾವಣೆಯ ನಂತರ ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಗೆ ಬೆಂಬಲ ಘೋಷಿಸಿದ ಕಾರಣ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಇದರಿಂದ ಬಂಡಾಯ ಶಾಸಕರಿಗೆ ಕಸಿವಿಸಿಯಾದರೂ ಸದ್ಯಕ್ಕೆ ಒಡೆದುಹೋಗಿದ್ದ ಸಂಬಂಧಕ್ಕೆ ಮತ್ತೆ ತೇಪೆ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ. ಈ ಭೇಟಿಯೂ ಅದರದೇ ಒಂದು ಭಾಗ ಎನ್ನಲಾಗಿದೆ!












Click it and Unblock the Notifications