ಜೆಡಿಎಸ್ ನ ಬೆಳವಣಿಗೆಯಿಂದ ಬೇಸತ್ತ ವೈಎಸ್ ವಿ ದತ್ತ
ಬೆಂಗಳೂರು, ಮೇ 31: ಎಚ್.ಡಿ.ದೇವೇಗೌಡರ ಮಾನಸ ಪುತ್ರ ಅಂತಲೇ ಗುರುತಿಸಿಕೊಂಡಿರುವ ವೈಎಸ್ ವಿ ದತ್ತ ಪಕ್ಷದೊಳಗಿನ ಇತ್ತೀಚಿನ ಬೆಳವಣಿಗೆಗಳಿಂದ ಬೇಸರಗೊಂಡಿದ್ದಾರಾ? ಹೌದು, ಎನ್ನುತ್ತಿವೆ ಮೂಲಗಳು. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಸೋಲನುಭವಿಸಿದ್ದರು.
ಆ ನಂತರ ತಮ್ಮ ಸೋಲಿನ ಪರಾಮರ್ಶೆ ಮಾಡುತ್ತಾ, ಪಕ್ಷದೊಳಗೆ ಕೆಲವರಿಗೆ ನನ್ನ ಗೆಲುವು ಬೇಕಾಗಿರಲಿಲ್ಲ ಎಂದರು.
ಇನ್ನು ಸೈದ್ಧಾಂತಿಕವಾಗಿ ದೇವೇಗೌಡರ ವಿಚಾರಧಾರೆಗಳಿಗೆ ಹತ್ತಿರವಾಗಿರುವ ದತ್ತ ಅವರು ಕುಮಾರಸ್ವಾಮಿ ಸಿದ್ಧಾಂತ- ಆಲೋಚನೆಗಳಿಗೆ ಸ್ವಲ್ಪ ದೂರ. ವಿವಿಧ ಸಂದರ್ಭದಲ್ಲಿ ಸಿದ್ಧಾಂತದ ವಿಚಾರ ಬಂದಾಗ ದೇವೇಗೌಡರ ನಿಲವನ್ನು ಒಪ್ಪುವ ದತ್ತ, ಇತರರನ್ನು ಸಮರ್ಥಿಸಿಕೊಂಡವರಲ್ಲ.
ಇದೀಗ ಪಕ್ಷದೊಳಗಿನ ಇತ್ತೀಚಿನ ಬೆಳವಣಿಗೆ ಸ್ವತಃ ದತ್ತ ಅವರಿಗೆ ಬೇಸರ ತರಿಸಿದಂತೆ ಇದೆ. ಈ ಬಗ್ಗೆ ಪ್ರಶ್ನೆ ಮಾಡಲು ಒನ್ಇಂಡಿಯಾ ಕನ್ನಡ ದತ್ತ ಅವರನ್ನು ಮಾತನಾಡಿಸಿತು. "ನಾನು ಇಪ್ಪತ್ತನೇ ವಯಸ್ಸಿನಲ್ಲಿ ಈ ಪಕ್ಷದೊಳಗೆ ಬಂದೆ. ರಾಮಕೃಷ್ಣ ಹೆಗಡೆ ಹಾಗೂ ದೇವೇಗೌಡರ ಮಧ್ಯೆ ಅಸಮಾಧಾನ ಬಂದಾಗ ಜಾತಿ ನೋಡದೆ ಗೌಡರ ಜತೆ ನಿಂತೆ. ಅದಕ್ಕೆ ಸೈದ್ಧಾಂತಿಕ ಕಾರಣ ಇದೆ" ಎಂದರು.

ಈ ಹಿಂದೆ ಪಕ್ಷದಿಂದ ನನ್ನನ್ನು ಎಂಎಲ್ ಸಿ ಮಾಡಲಾಯಿತು. ಆ ನಂತರ ಒಂದು ಕ್ಷೇತ್ರ ಆಯ್ಕೆ ಮಾಡಿಕೊಂಡು ಕೆಲಸ ಮಾಡಬೇಕು ಅಂತ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ನಿಂತೆ. ಅಲ್ಲಿ ಒಮ್ಮೆ ಗೆದ್ದೆ. ಆದರೆ ಈ ಬಾರಿ ಪಕ್ಷದೊಳಗಿನ ಕೆಲವರು ದ್ರೋಹ ಬಗೆದರು. ನನ್ನ ವಿರುದ್ಧ ಕೆಲಸ ಮಾಡಿದರು. ಇದರಿಂದ ಮನಸಿಗೆ ಘಾಸಿಯಾಗಿದೆ ಎಂದು ದತ್ತ ಹೇಳಿದರು.
ಈ ವಿಚಾರವಾಗಿ ದೇವೇಗೌಡರ ಜತೆಗೆ ಮಾತನಾಡುವುದಕ್ಕೆ ಶುಕ್ರವಾರ ಹೋಗುತ್ತಿದ್ದೇನೆ. ನನ್ನಂಥ ಸಿದ್ಧಾಂತ ಇರುವ ಸಾಮಾನ್ಯ ಕಾರ್ಯಕರ್ತನಿಂದ ಪಕ್ಷಕ್ಕೆ ಯಾವುದೇ ಉಪಯೋಗ ಇಲ್ಲ ಅನ್ನೋದಾದರೆ ಅಂತರ ಕಾಯ್ದುಕೊಂಡು ದೂರ ಇದ್ದು ಬಿಡುವುದೇ ಒಳ್ಳೆಯದಲ್ಲವಾ? ಎಂದವರೇ, ಮಾತು ಮುಗಿಸಿದರು ದತ್ತ.












Click it and Unblock the Notifications