ಬೆಂಗಳೂರಿನ ಆಧಾರ್ ಕಚೇರಿಗೆ ಬಿಗಿ ಭದ್ರತೆ
ಬೆಂಗಳೂರು, ಏ. 24 : ಬೆಂಗಳೂರಿನಲ್ಲಿರುವ ಆಧಾರ್ ದತ್ತಾಂಶಗಳ ಕೇಂದ್ರ ಕಚೇರಿಗೆ ಬಿಗಿ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇಡೀ ದೇಶದ ಜನರ ಆಧಾರ್ ಕಾರ್ಡ್ ಮಾಹಿತಿಯನ್ನು ಹೊಂದಿರುವ ಕಚೇರಿಗೆ ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ 65 ಶಸ್ತ್ರ ಸಜ್ಜಿತ ಕಮಾಂಡೋಗಳು ರಕ್ಷಣೆ ನೀಡಲಿದ್ದಾರೆ.
ಭಾರತೀಯ ವಿಶಿಷ್ಟ ಗುರುತು ಸಂಖ್ಯೆ ಪ್ರಾಧಿಕಾರದ ದತ್ತಾಂಶಗಳನ್ನು ಹೊಂದಿರುವ ಕಚೇರಿ ಬೆಂಗಳೂರಿನ ಮಾರತಹಳ್ಳಿ-ಸರ್ಜಾಪುರ ಹೊರ ವರ್ತುಲ ರಸ್ತೆಯಲ್ಲಿದೆ. ಸದ್ಯ ಇದಕ್ಕೆ ಖಾಸಗಿ ಭದ್ರತಾ ಸಿಬ್ಬಂದಿ ರಕ್ಷಣೆ ಒದಗಿಸುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಕಟ್ಟಡಕ್ಕೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಒದ್ರತೆ ಒದಗಿಸಲು ನಿರ್ಧರಿಸಿದ್ದು, ಕಟ್ಟಡದ ಅಧ್ಯಯನ ಕಾರ್ಯವನ್ನು ಕಮಾಂಡೋಗಳು ಕೈಗೊಂಡಿದ್ದಾರೆ.

ದೇಶದ ಪ್ರಮುಖ ಸರ್ಕಾರಿ ವಲಯದ ಕಚೇರಿಗಳು, ವಿಮಾನ ನಿಲ್ದಾಣಗಳು ಮುಂತಾದ ಪ್ರಮುಖ ಸ್ಥಳಗಳಿಗೆ ಸಿಐಎಸ್‌ಎಫ್ ಭದ್ರತೆ ನೀಡುತ್ತಿದೆ. ಈ ಪಡೆಗೆ ಕೇಂದ್ರ ಸರ್ಕಾರ ಸದ್ಯ ಆಧಾರ್ ಪ್ರಾಧಿಕಾರದ ದತ್ತಾಂಶ ಕಚೇರಿಯ ಭದ್ರತೆಯ ಹೊಣೆಯನ್ನು ವಹಿಸಲು ನಿರ್ಧರಿಸಿದೆ. ಆಧಾರ್ ದತ್ತಾಂಶ ಕಟ್ಟಡದ ಅವಲೋಕನ ನಡೆಸಿ ಕೇಂದ್ರಕ್ಕೆ ಸಿಐಎಸ್‌ಎಫ್ ವರದಿ ಸಲ್ಲಿಸಲಿದ್ದು, ಬಳಿಕ ಈ ಕುರಿತ ಅಂತಿಮ ತೀರ್ಮಾನ ಹೊರಬೀಳಲಿದೆ. [ಸ್ಫೋಟ, ಭೂಕಂಪಕ್ಕೂ ಜಗ್ಗಲ್ಲ ಈ ಕಟ್ಟಡ]
ಏಕಿಷ್ಟು ಭದ್ರತೆ : ದೇಶದಲ್ಲಿ ಸದ್ಯ ಸಮಾರು 65 ಕೋಟಿ ಜನರಿಗೆ ಆಧಾರ್ ಕಾರ್ಡ್ ನೀಡಿರಬಹುದು. ಈ ಎಲ್ಲಾ ಆಧಾರ್ ಸಂಖ್ಯೆ ಹೊಂದಿರುವ ವ್ಯಕ್ತಿಗಳ ದತ್ತಾಂಶವನ್ನು ಈ ಕಟ್ಟಡದಲ್ಲಿ ಸಂಗ್ರಹಿಸಲಾಗಿದೆ. ಈ ದತ್ತಾಂಶಗಳು ದೇಶದ ಭದ್ರತೆಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಹೆಚ್ಚಿನ ಭದ್ರತೆಯನ್ನು ಒದಗಿಸಲು ನಿರ್ಧರಿಸಲಾಗಿದೆ. [ಬೆಂಗಳೂರು- ಭಾರತದ ಒಂದು ಹೊಸ ಮುಖ]
ಎಲ್ಲಿದೆ ಕಚೇರಿ : ಬೆಂಗಳೂರಿನ ಮಾರತಹಳ್ಳಿ-ಸರ್ಜಾಪುರ ಹೊರ ವರ್ತುಲ ರಸ್ತೆಯಲ್ಲಿ ಆಧಾರ್ ಪ್ರಾಧಿಕಾರದ ದತ್ತಾಂಶ ಕಚೇರಿಯನ್ನು ನಿರ್ಮಿಸಲಾಗಿದೆ. ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ಈ ಕಟ್ಟಡವನ್ನು 6245 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ಕಟ್ಟದ ಗೋಡೆಗಳು 500 ಮಿಲಿ ಮೀಟರ್ ದಪ್ಪನಾಗಿದ್ದು, ಸ್ಫೋಟ, ಪ್ರವಾಹ, ಭೂಕಂಪಗಳನ್ನು ತಡೆದುಕೊಳ್ಳುವ ಶಕ್ತಿ ಹೊಂದಿವೆ. [LPGಗೆಲ್ಲ ಆಧಾರ್ ಕಾರ್ಡ್ ಬಳಸಬೇಡಿ: ಸುಪ್ರೀಂ ತರಾಟೆ]
ಸದ್ಯ ಕಟ್ಟಡದ ಆಗಮನ ಮತ್ತು ನಿರ್ಗಮನ ದ್ವಾರದಲ್ಲಿ ಖಾಸಗಿ ಭದ್ರತಾ ಸಂಸ್ಥೆಯವರು ಭದ್ರತೆ ಒದಗಿಸುತ್ತಿದ್ದಾರೆ. ಆದರೆ, ಈಗ ಕೇಂದ್ರ ಸರ್ಕಾರದ ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ಸಿಐಎಸ್‌ಎಫ್ ಭದ್ರತೆ ಒದಗಿಸಲು ನಿರ್ಧರಿಸಲಾಗಿದೆ. ಈ ಭದ್ರತಾ ವ್ಯವಸ್ಥೆ ಖರ್ಚನ್ನು ಆಧಾರ್ ಪ್ರಾಧಿಕಾರ ನೀಡಬೇಕಾಗುತ್ತದೆ.












Click it and Unblock the Notifications