ನಿರ್ಮಾಣವಾಗಿ ಮೂರು ವರ್ಷವಾದ್ರೂ ಬಳಕೆಗೆ ಲಭ್ಯವಾಗದ ಯಶವಂತಪುರದ ಬೃಹತ್ ಪಾರ್ಕಿಂಗ್ ಕಾಂಪ್ಲೆಕ್ಸ್
ಬೆಂಗಳೂರು: ನಗರದಲ್ಲಿ ದಿನೇದಿನೇ ಹೆಚ್ಚುತ್ತಿರುವ ವಾಹನ ಸಂಚಾರ ಮತ್ತು ಪಾರ್ಕಿಂಗ್ ಸಮಸ್ಯೆಗೆ ಪರಿಹಾರವಾಗಬೇಕಿದ್ದ ಯಶವಂತಪುರ ಎಪಿಎಂಸಿ ಆವರಣದಲ್ಲಿನ ಬಹುಮಹಡಿ ಪಾರ್ಕಿಂಗ್ ಸಂಕೀರ್ಣವು ಮೂರು ವರ್ಷಗಳಾದರೂ ಇನ್ನೂ ಸಾರ್ವಜನಿಕ ಬಳಕೆಗೆ ಲಭ್ಯವಾಗಿಲ್ಲ. ನಗರದ ಅತ್ಯಂತ ಜನಸಂದಣಿ ಮತ್ತು ಸಾರಿಗೆ ಸಂಪರ್ಕ ಹೊಂದಿರುವ ಪ್ರದೇಶದಲ್ಲೇ ನಿರ್ಮಾಣಗೊಂಡಿರುವ ಈ 10 ಮಹಡಿಗಳ ಪಾರ್ಕಿಂಗ್ ಕಾಂಪ್ಲೆಕ್ಸ್ 2023ರ ಅಕ್ಟೋಬರ್‌ನಲ್ಲೇ ಸಂಪೂರ್ಣಗೊಂಡಿದ್ದರೂ ಕಾರ್ಯಾರಂಭ ಆಗಿಲ್ಲ.
ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಪಾರ್ಕಿಂಗ್ ಸಂಕೀರ್ಣವನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ವೆಚ್ಚವೇ ದೊಡ್ಡ ಅಡ್ಡಿಯಾಗಿದ್ದು, ಬಂಡವಾಳ ಹೂಡಿಕೆಗೆ ತಕ್ಕ ಲಾಭ ಸಿಗುವುದಿಲ್ಲ ಎಂಬ ಕಾರಣದಿಂದ ಗುತ್ತಿಗೆದಾರರು ಮುಂದೆ ಬರದೇ ಇದ್ದಾರೆ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

ಟೆಂಡರ್‌ನಿಂದ ಹಿಂದೆ ಸರಿದ ಗುತ್ತಿಗೆದಾರರು
ಈವರೆಗೆ ಮೂರು ಬಾರಿ ಟೆಂಡರ್ ಆಹ್ವಾನಿಸಿದರೂ ಒಂದೂ ಟೆಂಡರ್ ಯಶಸ್ವಿಯಾಗಿಲ್ಲ. ಮೊದಲ ಬಾರಿ 2024ರ ಜನವರಿಯಲ್ಲಿ ಟೆಂಡರ್ ಕರೆದಾಗ ಯಾರೂ ಅರ್ಜಿ ಸಲ್ಲಿಸಲಿಲ್ಲ. ಬಳಿಕ ಜುಲೈ 2024ರಲ್ಲಿ ಕೆಲವು ಷರತ್ತುಗಳನ್ನು ಸಡಿಲಿಸಿ ಮತ್ತೆ ಟೆಂಡರ್ ಆಹ್ವಾನಿಸಲಾಯಿತು. ಆಗಲೂ ಪೂರ್ವ-ಬಿಡ್ ಸಭೆಯಲ್ಲಿ ಭಾಗವಹಿಸಿದ್ದ ಕಂಪನಿಗಳು ಕೂಡ ಹಿಂಜರಿದವು. ನಂತರ ಫ್ರೀಡಂ ಪಾರ್ಕ್ ಪಾರ್ಕಿಂಗ್ ವ್ಯವಸ್ಥೆ ನಿರ್ವಹಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ 2025ರ ಮಾರ್ಚ್‌ನಲ್ಲಿ ಮೂರನೇ ಬಾರಿ ಟೆಂಡರ್ ಕರೆದರೂ ಯಾವುದೇ ಸ್ಪಂದನೆ ಸಿಗಲಿಲ್ಲ.
ಪಾರ್ಕಿಂಗ್ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲ್ ಮತ್ತು ಸ್ವಯಂಚಾಲಿತವಾಗಿ ನಡೆಸುವುದು ಕಡ್ಡಾಯವಾಗಿರುವುದು ಗುತ್ತಿಗೆದಾರರ ಪ್ರಮುಖ ಅಸಮಾಧಾನ. ಇದಕ್ಕಾಗಿ ಕ್ಯಾಮೆರಾ, ಬ್ಯಾರಿಯರ್, ಸೆನ್ಸರ್‌ಗಳು, ನಂಬರ್ ಪ್ಲೇಟ್ ರಿಕಗ್ನಿಷನ್ ಸಿಸ್ಟಂ, ಡಿಜಿಟಲ್ ಪ್ರವೇಶ-ನಿರ್ಗಮನ ಹಾಗೂ ಪಾವತಿ ವ್ಯವಸ್ಥೆ ಸೇರಿದಂತೆ ದುಬಾರಿ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅಳವಡಿಕೆ ಅಗತ್ಯವಿದೆ. ಈ ಹೆಚ್ಚುವರಿ ಹೂಡಿಕೆಯನ್ನು ವಾಪಸ್ ಪಡೆಯುವುದು ಕಷ್ಟ ಎನ್ನುವುದು ಗುತ್ತಿಗೆದಾರರ ವಾದ. ಇದರ ಜೊತೆಗೆ ಹಿಂದಿನ ಬಿಬಿಎಂಪಿ ಅನುಮೋದಿಸಿದ ಪಾರ್ಕಿಂಗ್ ಶುಲ್ಕ ಮಿತಿ (ಕಾರಿಗೆ ಮೊದಲ ಗಂಟೆಗೆ 25 ರೂ, ದ್ವಿಚಕ್ರ ವಾಹನಕ್ಕೆ 15 ರೂ.) ಲಾಭಕ್ಕೆ ಅಡ್ಡಿಯಾಗುತ್ತಿದೆ ಎನ್ನಲಾಗಿದೆ.
ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಎಪಿಎಂಸಿ ವತಿಯಿಂದ 'ಎಕ್ಸ್‌ಪ್ರೆಷನ್ ಆಫ್ ಇಂಟರೆಸ್ಟ್' (ಇಒಐ) ಆಹ್ವಾನಿಸಲಾಗಿದ್ದು, ಸ್ಥಿರ ಬಾಡಿಗೆ ಅಥವಾ ಆದಾಯ ಹಂಚಿಕೆ ಮಾದರಿಗಳ ಬಗ್ಗೆ ಸಲಹೆ ಕೇಳಲಾಗಿದೆ. ಇದಕ್ಕೆ ಎರಡು ಅರ್ಹ ಪ್ರತಿಕ್ರಿಯೆಗಳು ಬಂದಿದ್ದು, ಹಿರಿಯ ಅಧಿಕಾರಿಗಳು ಅವುಗಳನ್ನು ಪರಿಶೀಲಿಸುತ್ತಿದ್ದಾರೆ. ಎಪಿಎಂಸಿ ಹೆಚ್ಚುವರಿ ನಿರ್ದೇಶಕ ಹಾಗೂ ಕಾರ್ಯದರ್ಶಿ ದೊರೆಸ್ವಾಮಿ ಅವರು, ಪಾರ್ಕಿಂಗ್ ಸಂಕೀರ್ಣವನ್ನು ಶೀಘ್ರದಲ್ಲೇ ಕಾರ್ಯಾರಂಭಗೊಳಿಸುವ ಆಸಕ್ತಿ ಇದ್ದು, ಪರಿಷ್ಕೃತ ವಾರ್ಷಿಕ ಶುಲ್ಕ ಹಾಗೂ ಲಾಭ ಹಂಚಿಕೆ ಷರತ್ತುಗಳೊಂದಿಗೆ ಮುಂದಿನ ದಿನಗಳಲ್ಲಿ ಮತ್ತೆ ಟೆಂಡರ್ ಆಹ್ವಾನಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ವಾಹನಗಳ ಪಾರ್ಕಿಂಗ್ ಸಾಮರ್ಥ್ಯ
ಈ ಪಾರ್ಕಿಂಗ್ ಕಾಂಪ್ಲೆಕ್ಸ್‌ನಲ್ಲಿ ಒಟ್ಟು 735 ಕಾರುಗಳು ಮತ್ತು 110 ದ್ವಿಚಕ್ರ ವಾಹನಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಪಾರ್ಕಿಂಗ್ ವಲಯದ ಸುಮಾರು 40 ಶೇಕಡಾ ಭಾಗವನ್ನು ಎಪಿಎಂಸಿ ಮಾರುಕಟ್ಟೆಯ ಪರವಾನಗಿ ಪಡೆದ ವ್ಯಾಪಾರಿಗಳಿಗೆ ಮೀಸಲಿಡಲಾಗಿದೆ. ಜೊತೆಗೆ ಸಂಕೀರ್ಣದಲ್ಲಿ 26 ಅಂಗಡಿಗಳಿದ್ದು, ಅವುಗಳನ್ನು ಬಾಡಿಗೆಗೆ ನೀಡುವ ಪ್ರಕ್ರಿಯೆ ನಡೆಯುತ್ತಿದೆ.
ಇದರಿಂದ ಹೆಚ್ಚುವರಿ ಆದಾಯದ ನಿರೀಕ್ಷೆಯೂ ಇದೆ. ಇನ್ನು ಮೆಟ್ರೋ ನಿಲ್ದಾಣ, ರೈಲು ನಿಲ್ದಾಣ, ಎಪಿಎಂಸಿ ಮಾರುಕಟ್ಟೆ ಮತ್ತು ಕೈಗಾರಿಕಾ ಪ್ರದೇಶದ ಸಮೀಪದಲ್ಲಿರುವ ಈ ಪಾರ್ಕಿಂಗ್ ಸಂಕೀರ್ಣ ಕಾರ್ಯಾರಂಭಗೊಂಡರೆ, ಯಶವಂತಪುರ ಹಾಗೂ ಸುತ್ತಮುತ್ತಲ ಪ್ರದೇಶದ ಸಂಚಾರ ಮತ್ತು ಪಾರ್ಕಿಂಗ್ ಸಮಸ್ಯೆಗೆ ಬಹುಮಟ್ಟಿಗೆ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಆದರೆ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಸಿಲುಕಿರುವ ಈ ಮಹತ್ವದ ಮೂಲಸೌಕರ್ಯ ಯೋಜನೆ ಯಾವಾಗ ಸಾರ್ವಜನಿಕ ಬಳಕೆಗೆ ಬರಲಿದೆಯೇ ಎನ್ನುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.
---------
ಕ್ರಿಕೆಟ್ ಬಗ್ಗೆ ನಿಮಗೇನು ಬೇಕೋ ಅದೆಲ್ಲ 'ಮೈಖೇಲ್' ವೆಬ್‌ಸೈಟ್‌ನಲ್ಲಿದೆ
ಕ್ರಿಕೆಟ್ ಆಟವನ್ನು ಲೈವ್ ನೋಡುವುದಷ್ಟೇ ಅಲ್ಲ, ರಿಪೋರ್ಟ್ ಓದುವುದೂ ಸಹ ಅಭಿಮಾನಿಗಳ ಪಾಲಿಗೆ ಸುಖ. ಕನ್ನಡದಲ್ಲಿ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ 'ಮೈಖೇಲ್' ಜಾಲತಾಣದಲ್ಲಿ ಲಭ್ಯ. ಇಲ್ಲಿ ಲೈವ್ ಸ್ಕೋರ್, ಬ್ರೇಕಿಂಗ್ ನ್ಯೂಸ್, ಪಂದ್ಯಗಳ ವೇಳಾಪಟ್ಟಿ, ಮ್ಯಾಚ್ ರಿಪೋರ್ಟ್, ಆಟಗಾರರ ಹೇಳಿಕೆ, ವಿವಾದ, ಗಾಸಿಪ್, ಪ್ರೊಫೈಲ್, ಆಕರ್ಷಕ ಫೋಟೊಗಳು, ಇನ್‌ಫೋಗ್ರಾಫಿಕ್ಸ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಯಸುವ ಎಲ್ಲವೂ ಇದೆ. ಕ್ರಿಕೆಟ್ ಬಗ್ಗೇ ಏನೇ ಬೇಕಿದ್ದರೂ 'ಮೈಖೇಲ್' ವೆಬ್‌ಸೈಟ್ ನೋಡಿ. ನೆನಪಿರಲಿ: ಕನ್ನಡದಲ್ಲಿ ಕ್ರಿಕೆಟ್, 'ಮೈಖೇಲ್' ವೆಬ್‌ಸೈಟ್ ಬೆಸ್ಟ್.
ಕ್ರೀಡಾಲೋಕದ ತಾಜಾ ಮಾಹಿತಿಗಾಗಿ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲೂ ಮೈಖೇಲ್ ಫಾಲೊ ಮಾಡಿ.












Click it and Unblock the Notifications