ಯಲಹಂಕ ವಾಯ್ಸ್ ಪತ್ರಿಕೆ ಸಂಪಾದಕ ಅನಿಲ್ ನೇಣಿಗೆ ಶರಣು
ಬೆಂಗಳೂರು, ಅಕ್ಟೋಬರ್ 16 : ಬೆಂಗಳೂರಿನ 'ಯಲಹಂಕ ವಾಯ್ಸ್' ಕನ್ನಡ ಮಾಸ ಪತ್ರಿಕೆ ಸಂಪಾದಕ ಅನಿಲ್ ರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಚಾರಣಾಧೀನ ಕೈದಿಯಾಗಿ ಅನಿಲ್ ಜೈಲಿನಲ್ಲಿದ್ದರು. ಕಾಂಗ್ರೆಸ್ ಪಕ್ಷದ ಜೊತೆ ಅನಿಲ್ ರಾಜ್ ಗುರುತಿಸಿಕೊಂಡಿದ್ದರು.
ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅನಿಲ್ ರಾಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಗಳವಾರ ಕುಟುಂಬ ಸದಸ್ಯರು ಅವರನ್ನು ಭೇಟಿಯಾಗಿದ್ದರು. ರಾತ್ರಿ ವೇಳೆಗೆ ಅನಿಲ್ ಸಾವನ್ನಪ್ಪಿದ್ದಾರೆ ಎಂದು ಕುಟುಂಬದರಿಗೆ ಮಾಹಿತಿ ನೀಡಲಾಗಿದೆ.
ಮದುವೆ ಆಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಅನಿಲ್ ರಾಜ್ ಮೇಲೆ ಇತ್ತು. ಯಲಹಂಕ ಉಪ ನಗರ ಪೊಲೀಸರು ಅವರನ್ನು ಬಂಧಿಸಿದ್ದರು. ವಿಚಾರಣಾಧೀನ ಕೈದಿಯಾಗಿ ಅನಿಲ್ ಜೈಲಿನಲ್ಲಿದ್ದರು.
ಜೈಲಿನ ಆವರಣದಲ್ಲಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ಮಾಹಿತಿ ಸಿಕ್ಕಿದೆ. ಅನಿಲ್‌ರನ್ನು ಕೆಳಗಿಳಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಮಾರ್ಗ ಮಧ್ಯಯೇ ಅವರು ಮೃತಪಟ್ಟಿದ್ದರು.

'ಯಲಹಂಕ ವಾಯ್ಸ್' ಪತ್ರಿಕೆ
'ಯಲಹಂಕ ವಾಯ್ಸ್' ಎಂಬ ಕನ್ನಡ ಮಾಸ ಪತ್ರಿಕೆಗೆ ಅನಿಲ್ ರಾಜ್ ಸಂಪಾದಕರಾಗಿದ್ದರು. ಭ್ರಷ್ಟಾಚಾರದ ಬಗ್ಗೆ ಪತ್ರಿಕೆಯಲ್ಲಿ ಸರಣಿ ವರದಿಗಳನ್ನು ಪ್ರಕಟಿಸುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯರಾಗಿದ್ದ ಅವರು ಅತ್ಯಾಚಾರ, ವಂಚನೆ ಆರೋಪದ ಮೇಲೆ ಜೈಲು ಸೇರಿದ್ದರು.

ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದರು
ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದ ಅನಿಲ್ ರಾಜ್ ಯಲಹಂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಭೂ ಒತ್ತುವರಿ ಕುರಿತು ಹಲವು ದಾಖಲೆಗಳನ್ನು ಸಂಗ್ರಹಿಸಿದ್ದ ಅನಿಲ್, ಸಾಮಾಜಿಕ ಜಾಲತಾಣದಲ್ಲಿ ಅವುಗಳನ್ನು ಹಾಕುತ್ತಿದ್ದರು.

ಮಾನನಷ್ಟ ಮೊಕದ್ದಮೆ ಹಾಕಿದ್ದರು
ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಆರ್. ವಿಶ್ವನಾಥ್ ವಿರುದ್ಧ ಹಲವು ವರದಿಗಳನ್ನು ಅನಿಲ್ ರಾಜ್ ಪ್ರಕಟಿಸಿದ್ದರು. ಅನಿಲ್ ರಾಜ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದ ವಿಶ್ವನಾಥ್, ಹಕ್ಕುಚ್ಯುತಿ ಮಂಡಿಸಲು ಸ್ಪೀಕರ್‌ಗೆ ದೂರು ನೀಡಿದ್ದರು. ಪತ್ರಿಕೆ ಪ್ರಕಟಣೆಗೆ ತಡೆಯನ್ನು ತಂದಿದ್ದರು. ಆದರೆ, ಕಾನೂನು ಹೋರಾಟದಲ್ಲಿ ಅನಿಲ್ ಗೆದ್ದಿದ್ದರು.

ದೊಡ್ಡ ಮಟ್ಟದ ಚರ್ಚೆ ಆಗಿತ್ತು
ವಿಧಾನಸಭೆಯ ಹಕ್ಕು ಬಾಧ್ಯತೆ ಸಮಿತಿ ಅನಿಲ್ ರಾಜ್‌ಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಬೇಕು ಎಂದು ಶಿಫಾರಸು ಮಾಡಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿತ್ತು. ನ್ಯಾಯಾಲಯ ಅನಿಲ್ ರಾಜ್ ಬಂಧಿಸದಂತೆ ತಡೆ ನೀಡಿತ್ತು. ಆಗ ಯಲಹಂಕ ವಾಯ್ಸ್ ಪತ್ರಿಕೆ ಬಗ್ಗೆ ಭಾರಿ ಚರ್ಚೆ ನಡೆದಿತ್ತು.

ಕಾರಣ ನಿಗೂಢ
ಕಾರಾಗೃಹ ಇಲಾಖೆ ಹಿರಿಯ ಅಧಿಕಾರಿಗಳು ಜೈಲಿಗೆ ತೆರಳಿ ಪರಿಶೀಲನೆ ನಡೆಸಿದರು. ಮಂಗಳವಾರ ಕುಟುಂಬ ಸದಸ್ಯರು ಅನಿಲ್ ರಾಜ್ ಭೇಟಿಯಾಗಿದ್ದರು. ಆದರೆ, ಆತ್ಮಹತ್ಯೆ ಮಾಡಿಕೊಂಡಿದ್ದು ಏಕೆ? ಎಂಬುದ ಇನ್ನೂ ನಿಗೂಢವಾಗಿದೆ.












Click it and Unblock the Notifications