ಯಡಿಯೂರಪ್ಪಗೆ ಹುಚ್ಚು ಹಿಡಿದಿದೆ: ದಿನೇಶ್ ಗುಂಡೂರಾವ್
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅದಕ್ಕೆ 24 ಗಂಟೆಯೊಳಗೆ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳಿಸುವ ಮಾತನಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ
ಬೆಂಗಳೂರು, ಫೆಬ್ರವರಿ 21: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಉಗಾಂಡದ ಸರ್ವಾಧಿಕಾರಿಯಾಗಿದ್ದ ಇದಿ ಅಮೀನ್ ರೀತಿಯಲ್ಲಿ ಎಲ್ಲರನ್ನೂ ಜೈಲಿಗೆ ಕಳುಹಿಸುವ ಮಾತನಾಡುತ್ತಿದ್ದಾರೆ. ಯಡಿಯೂರಪ್ಪನವರಿಗೆ ತಕ್ಷಣ ಮಾನಸಿಕ ಚಿಕಿತ್ಸೆಯ ಅಗತ್ಯ ಇದೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ಇಪ್ಪತ್ನಾಲ್ಕು ಗಂಟೆಯಲ್ಲಿ ಜೈಲಿಗೆ ಕಳುಹಿಸುತ್ತೇನೆ ಎನ್ನುತ್ತಿರುವ ಯಡಿಯೂರಪ್ಪನವರೇನಾದರೂ ನ್ಯಾಯಾಧೀಶರೇ? ಅವರಿಗೆ ನಮ್ಮ ಮುಖ್ಯಮಂತ್ರಿಯನ್ನು ಜೈಲಿಗೆ ಕಳುಹಿಸಲೇಬೇಕು ಅಂತಿದ್ದರೆ, ಅವರದೇ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಸಿದ್ದರಾಮಯ್ಯ ಅವರ ವಿರುದ್ಧ ತನಿಖೆ ಮಾಡಿಸಲಿ. ತಪ್ಪಿತಸ್ಥರು ಅಂತ ಸಾಬೀತು ಪಡಿಸಿ, ಜೈಲಿಗೆ ಕಳುಹಿಸಲಿ ಎಂದು ಹೇಳಿದ್ದಾರೆ.[ನಾನು ಸಿಎಂ ಆದ್ರೆ ನಿಮಗೆ ಜೈಲು ಗ್ಯಾರಂಟಿ : ಸಿದ್ದುಗೆ ಬಿಎಸ್ವೈ ಧಮ್ಕಿ!]

ಈಚೆಗೆ ಮಡಿಕೇರಿಯಲ್ಲಿ ಕೂಡ ದಿನೇಶ್ ಗುಂಡೂರಾವ್ ಅವರು ಇದೇ ರೀತಿ, ಅವರು 'ಮಾನಸಿಕ ಸ್ಥಿಮಿತ' ಕಳೆದುಕೊಂಡಿದ್ದಾರೆ ಎಂಬ ಹೇಳಿಕೆಯನ್ನು ನೀಡಿದ್ದರು. ಇದೀಗ ಅದಕ್ಕೂ ಒಂದು ಹೆಜ್ಜೆ ಮುಂದುವರಿದು, ಉಗಾಂಡದ ಸರ್ವಾಧಿಕಾರಿ ಇದಿ ಅಮೀನ್ ಗೆ ಬಿಎಸ್ ಯಡಿಯೂರಪ್ಪ ಅವರನ್ನು ಹೋಲಿಸಿದ್ದಾರೆ.
ಇಪ್ಪತ್ನಾಲ್ಕು ಗಂಟೆಯೊಳಗೆ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸುವುದಾಗಿ ಈಚೆಗೆ ಯಡಿಯೂರಪ್ಪ ಹೇಳಿದ್ದರು. ಈ ವಿಚಾರದ ಬಗ್ಗೆ ಮಾತನಾಡಿದ ದಿನೇಶ್ ಗುಂಡೂರಾವ್, ಯಡಿಯೂರಪ್ಪನವರು ಹುಚ್ಚುಚ್ಚಾಗಿ ಮಾತನಾಡುವುದನ್ನು ಬಿಡಲಿ. ಮೊದಲು ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಲಿ ಎಂದಿದ್ದಾರೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ಸೋರಿಕೆ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಹಾಗೆ ನಮ್ಮ ಬಳಿ ದಾಖಲೆಗಳಿವೆ ಎಂದು ಕೂಡ ಅವರು ಹೇಳಿದ್ದಾರೆ.












Click it and Unblock the Notifications