ಹೊಸ ವರ್ಷ; ಟಫ್ ರೂಲ್ಸ್, ಬೆಂಗಳೂರಲ್ಲಿ ಗೃಹ ಸಚಿವರ ಸಿಟಿ ರೌಂಡ್ಸ್
ಬೆಂಗಳೂರು, ಡಿಸೆಂಬರ್ 31; ಕರ್ನಾಟಕದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ನಿಷೇಧ ಹೇರಿರುವ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಬೆಂಗಳೂರು ನಗರದಲ್ಲಿ ಪೊಲೀಸರು ನೈಟ್ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದ್ದಾರೆ.
ನೈಟ್ ಕರ್ಫ್ಯೂ ಹಿನ್ನಲೆಯಲ್ಲಿ ಹೊಸವರ್ಷಾಚರಣೆ ಇದ್ದರೂ ಪಬ್, ಬಾರ್, ರೆಸ್ಟೋರೆಂಟ್‌ಗಳನ್ನು 10 ಗಂಟೆಗೆ ಮುಚ್ಚಿಸಲಾಗುತ್ತಿದೆ. ಇಂದಿರಾ ನಗರ, ಕೋರಮಂಗಲ, ಎಂ. ಜಿ. ರಸ್ತೆ ಮುಂತಾದ ಕಡೆ ಓಡಾಡುತ್ತಿದ್ದ ಜನರನ್ನು ಪೊಲೀಸರು ಮನೆಗೆ ಕಳಿಸುತ್ತಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಬೆಂಗಳೂರು ನಗರದಲ್ಲಿನ ಪರಿಸ್ಥಿತಿ ವೀಕ್ಷಣೆಗಾಗಿ ಬೆಂಗಳೂರು ನಗರ ಪ್ರದಕ್ಷಿಣೆ ಕೈಗೊಂಡಿದ್ದಾರೆ. ನಗರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ರಾತ್ರಿ 1 & 2 ಗಂಟೆ ತನಕ ನಡೆಯುತ್ತಿತ್ತು. ಆದರೆ ಈ ಬಾರಿ ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಕಠಿಣ ನಿಯಮ ಜಾರಿಗೊಳಿಸಲಾಗಿದೆ.

ಕುಡಿದ ಮತ್ತಿನಲ್ಲಿ ಯುವತಿಯ ಜತೆ ಅಸಭ್ಯ ವರ್ತಿಸಿ, ಕಿರಿಕ್ ಮಾಡಿದ ವ್ಯಕ್ತಿಯನ್ನು ಪೊಲೀಸರು ಅಟ್ಟಾಡಿಸಿದ ಘಟನೆಯೂ ಬೆಂಗಳೂರಿನಲ್ಲಿ ನಡೆದಿದೆ. ನಗರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ, ನೈಟ್ ಕರ್ಫ್ಯೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಪೊಲೀಸರು ಜನರಿಗೆ ಸೂಚನೆ ನೀಡುತ್ತಿದ್ದಾರೆ.
ಪಬ್, ಬಾರ್‌ಗಳಿಂದ ಹೊರ ಬಂದ ಯುವತಿಯರು ಕುಡಿದ ಮತ್ತಿನಲ್ಲಿ ಕೋವಿಡ್ ನಿಯಮ ಪಾಲಿಸದೇ, ಮಾಸ್ಕ್ ಧರಿಸದೇ ಪೊಲೀಸರ ಜೊತೆ ವಾಗ್ವಾದ ನಡೆಸಿದ ಘಟನೆಯೂ ನಡೆದಿದೆ.
ಬೆಂಗಳೂರು ನಗರದಲ್ಲಿ ಶುಕ್ರವಾರ ಸಂಜೆ 6 ಗಂಟೆಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ. ಶನಿವಾರ ಮುಂಜಾನೆ 5 ಗಂಟೆಯ ತನಕ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.
"ಹೊಸ ಭರವಸೆಯೊಂದಿಗೆ ನೂತನ ವರ್ಷವನ್ನು ಸ್ವಾಗತಿಸುವ ಈ ಸಂಭ್ರಮದ ಸಮಯದಲ್ಲಿ ನಾವೆಲ್ಲರೂ ಸಾಂಕ್ರಾಮಿಕ ಹರಡದಂತೆ ಮುನ್ನೆಚ್ಚರಿಕೆ ವಹಿಸೋಣ. ತಪ್ಪದೇ ಮಾಸ್ಕ್ ಧರಿಸಿ, ಭೌತಿಕ ಅಂತರ ಕಾಯ್ದುಕೊಂಡು, ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸೋಣ, ಇದೇ ದೃಢ ಸಂಕಲ್ಪದೊಂದಿಗೆ ನವ ವರ್ಷವನ್ನು ಸ್ವಾಗತಿಸೋಣ": ಮುಖ್ಯಮಂತ್ರಿ @BSBommai. pic.twitter.com/Hh1tHdE5md
— CM of Karnataka (@CMofKarnataka) December 31, 2021
ಗೃಹ ಸಚಿವರ ಸಿಟಿ ರೌಂಡ್ಸ್; ಗೃಹ ಸಚಿವ ಆರಗ ಜ್ಞಾನೇಂದ್ರ ಬೆಂಗಳೂರು ನಗರ ಪ್ರದಕ್ಷಿಣೆ ನಡೆಸುತ್ತಿದ್ದಾರೆ. ಎಂ. ಜಿ. ರಸ್ತೆಯಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. "ಬೆಂಗಳೂರು ನಗರದ ಜನರು ನಿಯಮಗಳನ್ನು ಪಾಲಿಸುತ್ತಿದ್ದಾರೆ. ಈ ರಸ್ತೆಯಲ್ಲಿ ಈ ಮಾದರಿಯಲ್ಲಿ ನೋಡಲು ಬೇಸರವಾಗುತ್ತದೆ" ಎಂದರು.
"2021 ಮುಗಿಯುತ್ತಿದೆ, ವಿಶ್ವವೇ ಕೊರೊನಾ ಮುಕ್ತವಾಗಲಿ ಎಂದು ನಾವು ಪ್ರಾರ್ಥಿಸೋಣ. ಮುಂದಿನ ವರ್ಷ ಹೊಸ ವರ್ಷವನ್ನು ಎಲ್ಲರೂ ಸಂಭ್ರಮದಿಂದ ಆಚರಿಸುವಂತೆ ಆಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ" ಎಂದು ಹೇಳಿದರು.
ಕೋವಿಡ್ ಪ್ರಕರಣಗಳ ಏರಿಕೆ, ಓಮಿಕ್ರಾನ್ ಭೀತಿಯ ಕಾರಣಕ್ಕೆ ಕರ್ನಾಟಕ ಸರ್ಕಾರ ಡಿಸೆಂಬರ್ 28ರಿಂದ ಜನವರಿ 7ರ ತನಕ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯ ತನಕ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಮಾಡುವುದನ್ನು ನಿಷೇಧಿಸಲಾಗಿದೆ. ಜನರು ಗುಂಪು ಸೇರುವುದು ತಡೆಯಲು ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಕೋವಿಡ್ ಹರಡುವಿಕೆ ತಡೆಯಲು ಕರ್ನಾಟಕ ಸರ್ಕಾರ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಇದರ ನಡುವೆಯೇ ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. 832 ಹೊಸ ಕೋವಿಡ್ ಪ್ರಕರಣಗಳು ಶುಕ್ರವಾರ ದಾಖಲಾಗಿವೆ. ಅಲ್ಲದೇ ಇಂದು 23 ಕೋವಿಡ್ ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ.
ಹೊಸ ವರ್ಷದ ಶುಭಾಶಯಗಳು; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಜನರಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. "ಹೊಸ ಭರವಸೆಯೊಂದಿಗೆ ನೂತನ ವರ್ಷವನ್ನು ಸ್ವಾಗತಿಸುವ ಈ ಸಂಭ್ರಮದ ಸಮಯದಲ್ಲಿ ನಾವೆಲ್ಲರೂ ಸಾಂಕ್ರಾಮಿಕ ಹರಡದಂತೆ ಮುನ್ನೆಚ್ಚರಿಕೆ ವಹಿಸೋಣ. ತಪ್ಪದೇ ಮಾಸ್ಕ್ ಧರಿಸಿ, ಭೌತಿಕ ಅಂತರ ಕಾಯ್ದುಕೊಂಡು, ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸೋಣ, ಇದೇ ದೃಢ ಸಂಕಲ್ಪದೊಂದಿಗೆ ನವ ವರ್ಷವನ್ನು ಸ್ವಾಗತಿಸೋಣ" ಎಂದು ಟ್ವೀಟ್ ಮಾಡಿದ್ದಾರೆ.












Click it and Unblock the Notifications