ಯಲಹಂಕ: ಕಸದ ವಾಹನಗಳಿಂದಲೇ ಸಮಸ್ಯೆ, ಪ್ರಶ್ನಿಸಿದರೆ ನಿವಾಸಿಗಳಿಗೆ ಚಾಲಕರ ಬೆದರಿಕೆ
ಬೆಂಗಳೂರು, ಆಗಸ್ಟ್ 22: ಬೆಂಗಳೂರಿನ ಯಲಹಂಕ ವಲಯ ವ್ಯಾಪ್ತಿಯ ಕೆಂಪೇಗೌಡ ವಾರ್ಡ್‌ನಲ್ಲಿ ಕಸ ವಿಲೇವಾರಿ ಮಾಡುವ ವಾಹನಗಳಿಂದ ಸ್ಥಳೀಯರು ಅನಾರೋಗ್ಯ, ಶಬ್ದ ಮಾಲಿನ್ಯ, ಸಂಚಾರ ಸಮಸ್ಯೆಯಂತಹ ಹಲವು ಕಿರಿ ಕಿರಿ ಅನುಭವಿಸುತ್ತಿದ್ದಾರೆ. ಈ ಸಂಬಂಧ ಬಿಬಿಎಂಪಿ ಕೈಗೊಳ್ಳದ ಹಿನ್ನೆಲೆಯಲ್ಲಿ ಯಲಹಂಕ ಪೊಲೀಸ್ ಠಾಣೆಗೆ ಇಲ್ಲಿನ ಬಡಾವಣೆಯ ನಿವಾಸಿಗಳು ದೂರು ನೀಡುವ ಮೂಲಕ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕೆಂಪೇಗೌಡ ವಾರ್ಡ್ ನಂ-01d ವ್ಯಾಪ್ತಿಯಲ್ಲಿ ಬರುವ ಶ್ರೀನಿವಾಸಪುರ ಗ್ರಾಮದ ಪೊನ್ನಪ್ಪ ಬಡಾವಣೆಯಲ್ಲಿನ ನಿವಾಸಿಗಳು ದಿನನಿತ್ಯ ಟ್ಯಾಕ್ಟರ್‌ಗಳು ಹಾಗೂ ಭಾರಿ ವಾಹನಗಳು ತ್ಯಾಜ್ಯ ವಸ್ತುಗಳನ್ನು ಮತ್ತು ಕಟ್ಟಡದ ಅವಶೇಷಗಳನ್ನು ತುಂಬಿಕೊಂಡು ಸದರಿ ಬಡಾವಣೆಯ ರಸ್ತೆಯಲ್ಲಿ ಸಂಚರಿಸುತ್ತವೆ. ಇಲ್ಲಿಂದ ಶ್ರೀನಿವಾಸಪುರ ಗ್ರಾಮದ ಪಕ್ಕದಲ್ಲಿರುವ ಕ್ವಾರಿಗೆ ಸುರಿಯಲು ನಿತ್ಯ ಓಡಾಡುತ್ತವೆ.

ಇದರಿಂದ ಸದರಿ ರಸ್ತೆಯ ಅಕ್ಕಪಕ್ಕದಲ್ಲಿ ವಾಸಿಸುವ ಬಡಾವಣೆಯ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಕಾಯಿಲೆಗಳು ಎದುರಾಗುವ ಸಾಧ್ಯತೆ ಇದೆ. ಹೀಗೆಂದು ಕಳವಳ ವ್ಯಕ್ತಪಡಿಸಿರುವ ಸದರಿ ಬಡಾವಣೆಯ ನಿವಾಸಿಗಳು ಪತ್ರದ ಮುಖೇನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾನೂನು ವ್ಯಾಪ್ತಿಯಲ್ಲಿ ಕ್ರಮಕ್ಕೆ ಆಗ್ರಹ
ಪೊಲೀಸರು ಸ್ಥಳ ಪರಿಶೀಲಿಸಿ ಪೊನ್ನಪ್ಪ ಬಡಾವಣೆಯ ರಸ್ತೆಗಳಲ್ಲಿ ತ್ಯಾಜ್ಯವನ್ನು ತುಂಬಿಕೊಂಡು ಒಡಾಡುವ ಟ್ರಾಕ್ಟರ್ ಮತ್ತು ಭಾರಿ ವಾಹನಗಳು ರಸ್ತೆಯಲ್ಲಿ ಓಡಾಡದಂತೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ನಿವಾಸಿಗಳು ಮನವಿ ಮಾಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸೃಷ್ಟಿಯಾಗುವ ಈ ಕಸದಿಂದ ಹಣ ಮಾಡುವ ಜಾಲವೊಂದು ಸೃಷ್ಟಿಯಾದ ಅನುಮಾನ ಹುಟ್ಟಿದೆ. ನಿಗದಿತ ಸ್ಥಳಕ್ಕೆ ತೆರಳದೇ ಹೀಗೆ ಚಿಕ್ಕ ಚಿಕ್ಕ ರಸ್ತೆಗಳ ಮೂಲಕ ಬೇರೊಂದು ಸ್ಥಳಕ್ಕೆ ಕಸ ಸಾಗಿಸುತ್ತಿದ್ದಾರೆ ಎನ್ನಲಾಗಿದೆ.
ವಾಹನ ಚಾಲಕರಿಂದ ಬೆದರಿಕೆ ಆರೋಪ
ಈ ವಾಹನಗಳು ನಿತ್ಯ ಓಡಾಡುವುದರಿಂದ ಈ ಭಾಗದಲ್ಲಿ ರಸ್ತೆ ಹಾಳಾಗುವುದಲ್ಲದೇ, ಅಂತರ್ಜಲ ಮಾಲಿನ್ಯ, ಅಡಚಣೆಗಳು, ಅಪಘಾತಗಳು ಮತ್ತು ಇತರ ಸಾರ್ವಜನಿಕ ಅವ್ಯವಸ್ಥೆ ಸೃಷ್ಟಿಯಾಗುತ್ತಿದೆ. ಈ ಕುರಿತು ಕೇಳಿದರೆ ಬೆದರಿಕೆ ಹಾಕುತ್ತಿದ್ದಾರೆ. ಗೂಂಡಾಗಳ ರೀತಿಯಲ್ಲಿ ವರ್ತಿಸುವವರನ್ನು ತಡೆಯಲು ನಮ್ಮಂಥಹ ಸಾಮಾನ್ಯ ಜನರಿಂದ ಅದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪೊಲೀಸ್ ಇಲಾಖೆ, ಮಾಧ್ಯಮ ಸಂಸ್ಥೆಗಳು ಸಹಾಯಕ್ಕೆ ಬರುವಂತೆ ಬಡಾವಣೆ ನಿವಾಸಿಗಳು ಮನವಿ ಮಾಡಿದ್ದಾರೆ.












Click it and Unblock the Notifications