ಬೆಂಗಳೂರಿಗರಿಗೆ ಗುಡ್ ನ್ಯೂಸ್: ಈ ಬೇಸಿಗೆಯಲ್ಲಿ ನೀರು ಪೂರೈಕೆ ನಿಲ್ಲದು!
ಬೆಂಗಳೂರು, ಮಾರ್ಚ್ 10: ಈ ಬಾರಿಯ ಬೇಸಿಗೆ ಬೆಂಗಳೂರಿಗರಿಗೆ ನೀರಿನ ದಾಹ ಸೃಷ್ಟಿಸಲಾರದು, ಪ್ರತಿ ವರ್ಷದಂತೆ ಈ ಬಾರಿ ಬೆಂಗಳೂರಿಗರು ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರ ಸೃಷ್ಟಿಸುವ ಅಗತ್ಯ ಬರುವುದಿಲ್ಲ ಎಂದು ಬೆಂಗಳೂರು ಜಲ ಮಂಡಳಿ ವಿಶ್ವಾಸ ಹೊಂದಿದೆ.
ಕಾವೇರಿ ಕಣಿವೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಬೇಸಿಗೆಯ ಅಂತ್ಯದವರೆಗೂ ಬೆಂಗಳೂರಿಗರಿಗೆ ಅಗತ್ಯವಿರುವ ನೀರನ್ನು ಪೂರೈಸಲು ಸಾಧ್ಯವಿದೆ, ಬೆಂಗಳೂರು ಜನರಿಗೆ ಯಾವುದೇ ನೀರಿನ ಸಮಸ್ಯೆ ಸೃಷ್ಟಿಯಾಗದು ಎಂದಿನಂತೆ ನೀರಿನ ಪೂರೈಕೆ ಮಾಡಬಹುದು ಎಂದು ಬೆಂಗಳೂರು ಜಲ ಮಂಡಳಿ ಹೇಳಿದೆ.
ಕಾವೇರಿ ನೀರಿನ ಹೊರತಾಗಿ ಸುಮಾರು 6 ಸಾವಿರ ಲೀಟರ್ ಸಾಮರ್ಥ್ಯವಿರುವ 65 ಟ್ಯಾಂಕರ್ ಮೂಲಕ ನೀರಿನ ಪೂರೈಕೆ ವ್ಯವಸ್ಥೆ ಮಾಡಲಾಗುತ್ತದೆ.
ಮಾರ್ಚ್, ಏಪ್ರಿಲ್, ಮೇ , ಜೂನ್ ಅಂತ್ಯದವರೆಗೆ ಬೇಸಿಗೆಯ ನಾಲ್ಕು ತಿಂಗಳ ಅವಧಿಗೆ ಒಟ್ಟು ಸುಮಾರು 6.5ರಿಂದ 7 ಟಿಎಂಸಿ ನೀರು ಸಾಕಾಗಲಿದೆ. ತಿಂಗಳಿಗೆ ತಲಾ 1.6 ಟಿಎಂಸಿ ಎಂದರೂ ಬೇಸಿಗೆಯ ಒಟ್ಟು ನಾಲ್ಕು ತಿಂಗಳಿಗೆ 6.5 ರಿಂದ 7 ಟಿಎಂಸಿ ಜಲಾಶಯಗಳಲ್ಲಿ ಲಭ್ಯವಿದೆ.
ಅಷ್ಟೂ ನೀರನ್ನೂ ಸಮರ್ಪಕವಾಗಿ ಪೂರೈಸಲು ಜಲಮಂಡಳಿ ಈಗಾಗಲೇ ವಾರ್ಡ್ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಿದೆ. ಜನರ ಕುಂದುಕೊರತೆ ಕುರಿತ ದೂರುಗಳನ್ನು ತಕ್ಷಣವೇ ಮೇಲ್ವಿಚಾರಕರ ವ್ಯಾಪ್ತಿಗೆ ತಂದು ಪರಿಹಾರ ಒದಗಿಸುವ ಮೂಲಕ ಬೇಸಿಗೆ ಪೂರ್ತಿ ನಗರದ ಯಾವ ಭಾಗದಲ್ಲಿಯೂ ನೀರಿನ ಹಾಹಾಕಾರ ಉಂಟಾಗದಂತೆ ಗಮನವಹಿಸಿದ್ದಾರೆ.

ಬೆಂಗಳೂರಿನಲ್ಲಿದೆ 2.5 ಲಕ್ಷ ನೋಂದಾಯಿತ ಬೋರ್‌ವೆಲ್‌ಗಳು
ಬೆಂಗಳೂರಿನಲ್ಲಿ 2.5 ಲಕ್ಷ ನೋಂದಾಯಿತ ಬೋರ್‌ವೆಲ್ ಅದರಲ್ಲಿ 7500 ಸಾವಿರ ನೋಂದಾಯಿತ ಬೋರ್‌ವೆಲ್‌ಗಳು ಜಲ ಮಂಡಳಿ ವ್ಯಾಪ್ತಿಯಲ್ಲಿವೆ. ಸುಗಮ ನೀರಿನ ಪೂರೈಕೆಗಾಗಿಯೇ 35 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ, ಸಾರ್ವಜನಿಕರು ಯಾವುದೇ ಸಮಯದಲ್ಲಿ ಸಹಾಯವಾಣಿಗೆ ಕರೆ ಮಾಡಿದರೂ ಕೂಡಲೇ ಜಲ ಮಂಡಳಿ ಸ್ಪಂದಿಸಲಿದೆ ಎಂದು ಜಲ ಮಂಡಳಿ ಮುಖ್ಯ ಎಂಜಿನಿಯರ್ ಸೋಮಶೇಖರ್ ತಿಳಿಸಿದ್ದಾರೆ.

ಹೊಸದಾಗಿ ಸೇರ್ಪಡೆಯಾಗಿರುವ ಹಳ್ಳಿಗಳಿಗೆ ನೀರು ಪೂರೈಕೆ
ಜಲಮಂಡಳಿ ವ್ಯಾಪ್ತಿಗೆ ಸೇರ್ಪಡೆಯಾಗಿರುವ 110 ಹಳ್ಳಿಗಳ ಪೈಕಿ 53 ಹಳ್ಳಿಗಳ ಸುಮಾರು 10-15 ಸಾವಿರ ಕಟ್ಟಡಗಳು ಅಧಿಕೃತವಾಗಿ ನೀರಿನ ಸಂಪರ್ಕ ಪಡೆದಿವೆ. ಅವೆಲ್ಲವುಗಳಿಗೆ ಅಗತ್ಯದಷ್ಟು ನೀರು ಪೂಊರೈಸಲಾಗುತ್ತಿದೆ. 2023-2024ರ ವೇಳೆಗೆ ಪೂರ್ಣಗೊಳ್ಳಲಿರುವ ಕಾವೇರಿ ನೀರು ಸರಬರಾಜು 5ನೇ ಹಂತದಡಿ ಸೇರ್ಪಡೆಯಾದ ಈ ಎಲ್ಲಾ 110 ಹಳ್ಳಿಗಳಿಗೂ ನೀರು ಒದಗಿಸಲು ಸಾಧ್ಯವಾಗಲಿದೆ.

ಜಲಮಂಡಳಿ ಸಿದ್ಧತೆಗಳೇನು?
ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲು ವಿಶೇಷವಾಗಿ ಬೇಸಿಗೆಗೆಂದೇ ನಗರಾದ್ಯಂತ 35 ನೋಡಲ್ ಅಧಿಕಾರಿಗಳು ನೇಮಕಗೊಂಡಿದ್ದಾರೆ. ಈ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಮಾರ್ಗಗಳಲ್ಲಿ ನೀರು ಸೋರಿಕೆ ಕಂಡು ಬಂದರೆ ತಡೆಯಲು ಹಾಗೂ ಪೈಪ್‌ಗಳು ಒಡೆದು ನೀರು ಪೋಲಾಗುತ್ತಿದ್ದರೆ ಕೂಡಲೇ ದುರಸ್ತಿಗೆ ಕ್ರಮ ವಹಿಸಿದ್ದಾರೆ.
Recommended Video

ಬೆಂಗಳೂರಿನ ಜನತೆಗೆ ಅಗತ್ಯವಿರುವ ನೀರೆಷ್ಟು?
ಬೆಂಗಳೂರಿನ ಜನತೆಗೆ ನಿತ್ಯ 1440 ದಶಲಕ್ಷ ಲೀಟರ್ ನೀರಿನ ಅಗತ್ಯತೆ ಇದ್ದು, ಒಂದು ತಿಂಗಳಿಗೆ ಅಗತ್ಯವಿರುವ ಒಟ್ಟು 1.6 ಟಿಎಂಸಿ ನೀರು ಜಲಮಂಡಳಿಯಿಂದ ಸರಬರಾಜು ಆಗುತ್ತದೆ. ಇಷ್ಟು ಅಗತ್ಯ ನೀರನ್ನು ತಾಪಮಾನ ಹೆಚ್ಚಿರುವ ಬೇಸಿಗೆಯಲ್ಲಿ ಸಮರ್ಪಕವಾಗಿ ಪೂರೈಸುವುದು ಸವಾಲಾಗುತ್ತದೆ. ಅಲ್ಲದೇ ಜಲಮೂಲಗಳಲ್ಲಿ ನೀರಿನ ಸಂಗ್ರಹದಲ್ಲಿ ಕೊರತೆ ಎದುರಾದರೆ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ಆದರೆ ಸಾಮಾನ್ಯ ದಿನಗಳಷ್ಟೇ ಬೇಸಿಗೆಯಲ್ಲೂ ನೀರಿನ ಬೇಡಿಕೆ ಇರುವುದರಿಂದ ಹಾಗೂ ಈ ಬಾರಿ ನೀರಿನ ಸಂಗ್ರಹ ಸಮಪರ್ಕಕವಾಗಿರುವುದರಿಂದ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications