ಬೀರು ಬೇಡ ನೀರು ಕೊಡಿ, ವಿಸ್ಕಿ ಬೇಡ ವಸತಿ ಕೊಡಿ: ಮಹಿಳೆಯರ ಆಗ್ರಹ
ಬೆಂಗಳೂರು, ಜನವರಿ 30: ಬೀರು ಬೇಡ ನೀರು ಕೊಡಿ, ವಿಸ್ಕಿ ಬೇಡ ವಸತಿ ಕೊಡಿ, ಮದ್ಯ ಬೇಡ ಉದ್ಯೋಗ ಬೇಕು, ಸಾರಾಯಿ ಬೇಡ ಸಂಸಾರ ಉಳಿಯಬೇಕು ಎಂಬ ಮಹಿಳೆಯರ ಒಕ್ಕೂರಲ ಕೂಗು ಇಂದು ಕೇವಲ ಅರಣ್ಯರೋಧನವಾಯಿತು. ಸರ್ಕಾರಕ್ಕೆ ಮಹಿಳೆಯರ ಕೂಗು ಬೇಡವಾಯಿತು.
ಮದ್ಯ ನಿಷೇಧಕ್ಕಾಗಿ ಒತ್ತಾಯಿಸಿ ಬರೋಬ್ಬರಿ 210 ಕಿ.ಮೀ ದೂರದಿಂದ ಬೆಂಗಳೂರಿಗೆ ನಡೆದುಕೊಂಡೇ ಮಹಿಳೆಯರು ಬಂದಿದ್ದರು. ಹಾದಿಯಲ್ಲಿ ಅವರು ಅನುಭವಿಸಿದ ಕಷ್ಟಗಳು ಸರಳವಾದುವಲ್ಲ.
ಮದ್ಯ ನಿಷೇಧಕ್ಕೆ ಒತ್ತಾಯಿಸಿ ಪ್ರತಿಭಟಿಸಿದ ಮಹಿಳೆಯರ ಪಾಡು ಚಿತ್ರಗಳಲ್ಲಿ
ಸಂಕ್ರಾಂತಿ ನಂತರದ ರಾತ್ರಿಗಳ ಚಳಿ, ಮಧ್ಯಾಹ್ನದ ಸುಡು ಬಿಸಿಲು ಎಲ್ಲವನ್ನೂ ಅವರ ದುಡಿದ ಜೀವಗಳು ಸಹಿಸಿಕೊಂಡು ಉತ್ಕಷ್ಟ ಗುರಿಯೊಂದರ ಈಡೇರಿಕೆಗೆ ಎದುರಾದ ಎಲ್ಲ ಕಷ್ಟವನ್ನೂ ಸಹಿಸಿಕೊಂಡು ಬೆಂಗಳೂರಿಗೆ ಬಂದಿದ್ದರು.

ಬಂದಿರುವ ಬಹುತೇಕ ಮಹಿಳೆಯರು ಮದ್ಯದಿಂದ ಒಂದಲ್ಲಾ ಒಂದು ರೀತಿ ತೊಂದರೆಗೆ ಒಳಪಟ್ಟವರೆ ಹಾಗಾಗಿಯೇ ಮದ್ಯದ ಮಾರಿಯನ್ನು ರಾಜ್ಯದಿಂದ ಓಡಿಸಬೇಕೆಂದು ಇಲ್ಲಿ ಸೇರಿದ್ದಾರೆ, ಸತತ 12 ದಿನಗಳ ತಮಗೆ ಒದಗಿಬಂದ ಎಲ್ಲ ಕಷ್ಟಗಳನ್ನು ಎದುರಿಸಿ ಬಂದಿದ್ದಾರೆ ಎಂದು ಪಾದಯಾತ್ರೆಯ ಮುಂದಾಳತ್ವ ವಹಿಸಿದ್ದವರಲ್ಲಿ ಒಬ್ಬರಾದ ಮಂಗಳಾ ಭಟ್ ಹೇಳಿದರು.
'ಈ ಮನಿಹಾಳ ಸೆರೆಯಿಂದ ನಮ್ಮುಗೋಳ ಮನಿ, ಮಠ ಎಲ್ಲಾ ಹಾಳಾಗಿ ಹೋದ್ವುರಿ, ಹಂಗಾಗಿ ಮದ್ಯ ನಿಷೇಧ ಮಾಡ್ಲಾಕ ಬೇಕು ಅಂತ ನಾವು ಸರ್ಕಾರಕ್ಕೆ ಒತ್ತಾಯ ಮಾಡ್ಲಾಕೆಂದು ನಮ್ಮೂರು ಗಂಗಾವತಿಯಿಂದ 16 ಮಂದಿ ಮಹಿಳೆಯರು ಬೆಂಗಳೂರು ಮಟ ನಡ್ಕೊಂಡಾ ಬಂದೀವಿ' ಎಂದು ಮಹಿಳೆಯೊಬ್ಬರು ಆಕ್ರೋಶಭರಿತವಾಗಿ ಹೇಳಿದರು.

ಕೆದರಿದ ಕೂದಲು, ಬಿಸಿಲಿಗೆ ಬಾಡಿದ ಮುಖ, ಬಿಸಿಲು-ಚಳಿಗೆ ಮುಖ ಒಡ್ಡಿದ ಪರಿಣಾಮ ಒಡೆದ ತುಟಿಗಳು, ಕೆನ್ನೆಯ ರಂಗೆಲ್ಲಾ ನಸುಗಪ್ಪಾದ ಹೆಣ್ಣು ಮಕ್ಕಳ ಕಣ್ಣಲ್ಲಿ ಮಾತ್ರ ಮಹತ್ತರವಾದುದೊಂದನ್ನು ಸಾಧಿಸುವ ಛಲವಿತ್ತು. ಸರ್ಕಾರವೇನೋ ಇಂದಿನ ಮಟ್ಟಿಗೆ ಪ್ರತಿಭಟನೆಯನ್ನು ಹತ್ತಿಕ್ಕಲು ಯಶಸ್ವಿಯಾಗಿದೆ ಆದರೆ ಈ ಮಹಿಳೆಯರು ಸುಮ್ಮನೆ ಕೂರುವರಲ್ಲ.












Click it and Unblock the Notifications