ಕೋರಮಂಗಲದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಮೂರು ಜನರ ಬಂಧನ
ಬೆಂಗಳೂರು ಫೆಬ್ರವರಿ 21: ಸಿಲಿಕಾನ್ ಸಿಟಿ ಮಹಿಳೆಯರಿಗೆ ಸುರಕ್ಷಿತವಲ್ಲ ಅನ್ನೋದು ಮತ್ತೊಮ್ಮೆ ಸಾಬೀತು ಆಗಿದೆ. ಬೆಂಗಳೂರಿನ ಕೋರಮಂಗಲದಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಈ ಪ್ರಕರಣದಲ್ಲಿ ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಹೌದು... 36 ವರ್ಷದ ಮಹಿಳೆಯ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆಂದು ದೂರು ನೀಡಲಾಗಿದೆ. ಗುರುವಾರ ಮಧ್ಯರಾತ್ರಿ ಈ ಪೈಶಾಚಿಕ ಕೃತ್ಯ ನಡೆದಿದ್ದು, ಶುಕ್ರವಾರ ಬೆಳಗ್ಗೆ ಸಂತ್ರಸ್ತೆ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಗ್ಯಾಂಗ್ ರೇಪ್ ಕೇಸ್ ದಾಖಲಾಗಿದ್ದು, ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಅಜಿತ್, ವಿಶ್ವಾಸ್, ಶಿವು ಎನ್ನಲಾಗಿದೆ. ಇವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಘಟನೆ ನಡೆದಿದ್ದು ಹೇಗೆ?
ಕೋರಮಂಗಲದ ಪ್ರತಿಷ್ಠಿತ ಹೋಟೆಲ್‌ನಲ್ಲಿ ಕೆಲಸ ಮಾಡುವವರಿಂದ ಈ ಕೃತ್ಯ ನಡೆದಿದೆ. ವಿಚಾರಣೆ ವೇಳೆ ಕಾಮುಕರು ನಡೆದ ಘಟನೆಯ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಸಂತ್ರಸ್ತೆ ದೂರಿನಲ್ಲಿ, ಗುರುವಾರ ಸಂಜೆ ನಡೆದ ಕಾರ್ಯಕ್ರಮವೊಂದರಲ್ಲಿ ತನ್ನೊಂದಿಗೆ ಸ್ನೇಹ ಬೆಳೆಸಿಕೊಂಡು ಊಟಕ್ಕೆ ಆಹ್ವಾನಿಸಿದ್ದರು. ಬಳಿಕ ಮುಚ್ಚಿ ಹೋಗಿದ್ದ ಹೋಟೆಲ್ ಒಂದರ ಟೆರೇಸ್ ಮೇಲೆ ಕರೆದುಕೊಂಡು ಹೋಗಿ ಊಟ ಮಾಡಿದ ನಂತರ ನಾಲ್ವರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ ಶುಕ್ರವಾರ ಬೆಳಗ್ಗೆ ಐದು ಗಂಟೆ ಸುಮಾರಿಗೆ ಮೊಬೈಲ್, ಪರ್ಸ್ ಕಿತ್ತುಕೊಂಡು ಮಹಿಳೆಯನ್ನು ಆರೋಪಿಗಳು ಬಿಟ್ಟಿದ್ದಾರೆ ಎಂದು ದೂರಿನಲ್ಲಿ ಬರೆಯಲಾಗಿದೆ. ಘಟನೆ ಬಳಿಕ 122 ಕರೆ ಮಾಡಿದ ಮಹಿಳೆ ಮಾಹಿತಿ ನೀಡಿದ್ದಾರೆ. ದೂರಿನಲ್ಲಿ ನಾಲ್ವರು ವ್ಯಕ್ತಿಗಳ ಹೆಸರುಗಳನ್ನು ಹೆಸರಿಸಲಾಗಿದ್ದು, ಅವರಲ್ಲಿ ಮೂವರನ್ನು ಬಂಧಿಸಲಾಗಿದೆ. ಎಲ್ಲಾ ಆರೋಪಿಗಳು ಬೇರೆ ರಾಜ್ಯದವರಾಗಿದ್ದಾರೆ.
ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಜಂಟಿ ಆಯುಕ್ತ(ಪೂರ್ವ) ರಮೇಶ್ ಬಾನೋತ್ ಅವರು ಮಾತನಾಡಿ ತನಿಖೆ ನಡೆಸಿ ಮತ್ತೋರ್ವ ಆರೋಪಿಯನ್ನು ಬಂಧಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.












Click it and Unblock the Notifications