ಬೆಂಗಳೂರಿನ ರೈಲ್ವೇ ನಿಲ್ದಾಣದ ಡ್ರಮ್‌ನಲ್ಲಿ ಮಹಿಳೆಯ ಶವ ಪತ್ತೆ: 3 ತಿಂಗಳಲ್ಲಿ 3ನೇ ಘಟನೆ
ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್‌ಎಂವಿಟಿ) ರೈಲು ನಿಲ್ದಾಣದ ಮುಖ್ಯ ಗೇಟ್ ಬಳಿ ಎಸೆದ ಡ್ರಮ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ಮಾರ್ಚ್ 14: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮಹಿಳೆಯರ ಹತ್ಯೆ ಪ್ರಕರಣಗಳು ದಾಖಲಾಗುತ್ತಿವೆ. ಕಳೆದ ಕೆಲ ತಿಂಗಳಿನಿಂದ ಒಂದೇ ರೀತಿ ಮಹಿಳೆಯರನ್ನು ಕೊಲೆ ಮಾಡಿರುವ ಪ್ರಕರಣಗಳು ಕಂಡು ಬಂದಿವೆ. ಕೊಲೆಯಾದ ಮಹಿಳೆಯರ ಗುರುತು ಸಿಗದ ಕಾರಣ ಶವಗಳು ಬೇರೆ ರಾಜ್ಯಗಳಿಂದಲೂ ಬಂದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಕಳೆದ ಕೆಲ ತಿಂಗಳಿನಿಂದ ಮಹಿಳೆಯರ ಶವಗಳು ರೈಲ್ವೆ ಫ್ಲಾಟ್ ಫ್ರಾಂನಲ್ಲಿ ಕಂಡು ಬಂದಿವೆ.
ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್‌ಎಂವಿಟಿ) ರೈಲು ನಿಲ್ದಾಣದ ಮುಖ್ಯ ಗೇಟ್ ಬಳಿ ಎಸೆದ ಡ್ರಮ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆಯ ವಯಸ್ಸು 32-35 ವರ್ಷ ಎಂದು ಕರ್ನಾಟಕ ಪೊಲೀಸ್ ವರಿಷ್ಠಾಧಿಕಾರಿ (ರೈಲ್ವೆ) ಎಸ್‌ಕೆ ಸೌಮ್ಯಲತಾ ತಿಳಿಸಿದ್ದಾರೆ. ಆದರೆ ಆಕೆಯ ಗುರುತು ಇನ್ನೂ ಸಿಗದ ಕಾರಣ ಕೊಲೆ ಪ್ರಕರಣ ದಾಖಲಾಗಿದೆ.

ಸೋಮವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಮೂವರು ದುಷ್ಕರ್ಮಿಗಳು ಶವವಿರುವ ನೀಲಿ ಡ್ರಮ್ ಅನ್ನು ಆಟೋದಲ್ಲಿ ತಂದು ರೈಲ್ವೇ ನಿಲ್ಆಣದಲ್ಲಿ ಇಟ್ಟು ಹೋಗಿದ್ದಾರೆ. ಆರೋಪಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ರೈಲ್ವೆ ಎಸ್ಲಿ ಸೌಮ್ಯಲತಾ,'ನಮಗೆ ನೀಲಿ ಡ್ರಮ್‌ನಿಂದ ಕೊಳೆತ ವಾಸನೆ ಬರುತ್ತಿದೆ ಎಂದು ದೂರವಾಣಿ ಕರೆ ಬಂದಿತ್ತು. ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಶವ ಇರುವುದು ಗೊತ್ತಾಗಿದೆ. ತನಿಖೆ ನಡೆಯುತ್ತಿದೆ. ಮೃತರು ಯಾರು ಎಂದು ಪತ್ತೆ ಹಚ್ಚಲಾಗುವುದು. ಆರೋಪಿಗಳಿಗೆ ಶೋಧ ನಡೆಸಲಾಗುತ್ತಿದೆ' ಎಂದರು.
ಬೆಂಗಳೂರಿನಲ್ಲಿ ಕಳೆದ ವರ್ಷಾಂತ್ಯದಿಂದ ಇದೇ ರೀತಿಯ ಎರಡು ಪ್ರಕರಣಗಳು ವರದಿಯಾಗಿವೆ. ಡಿಸೆಂಬರ್ ಎರಡನೇ ವಾರದಲ್ಲಿ ಎಸ್‌ಎಂವಿಟಿ ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲಿನ ಕೋಚ್‌ನಲ್ಲಿ ಹಳದಿ ಗೋಣಿಚೀಲದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಇತರ ಸಾಮಾನುಗಳೊಂದಿಗೆ ಎಸೆದಿದ್ದ ಗೋಣಿ ಚೀಲದಿಂದ ದುರ್ವಾಸನೆ ಬರುತ್ತಿದೆ ಎಂದು ಪ್ರಯಾಣಿಕರೊಬ್ಬರು ದೂರಿದ ನಂತರ ಹೆಚ್ಚು ಕೊಳೆತ ಶವ ಪತ್ತೆಯಾಗಿವೆ.

ಯಶವಂತಪುರ ರೈಲು ನಿಲ್ದಾಣದ ಇಂಥದ್ದೇ ಘಟನೆ:
ಜನವರಿ 4 ರಂದು ಯಶವಂತಪುರ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ನಂಬರ್ 1 ರ ತ್ಯಜಿಸಲಾದ ನೀಲಿ ಪ್ಲಾಸ್ಟಿಕ್ ಡ್ರಮ್‌ನೊಳಗೆ ಯುವತಿಯ ಕೊಳೆತ ಶವವನ್ನು ರೈಲ್ವೆ ಪೊಲೀಸರು ಪತ್ತೆ ಹಚ್ಚಿದ್ದರು. ಮೃತದೇಹವನ್ನು ಆಂಧ್ರಪ್ರದೇಶದ ಮಚಲಿಪಟ್ಟಣಂನಿಂದ ರೈಲು ನಿಲ್ದಾಣದಲ್ಲಿ ಎಸೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವೇಲ್‌ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿರುವ ಬಗ್ಗೆ ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿತ್ತು. ಪ್ಲಾಟ್‌ಫಾರ್ಮ್-ಒಂದರಲ್ಲಿ ಬಟ್ಟೆರಾಶಿಯೊಂದಿಗೆ ಡ್ರಮ್‌ನೊಳಗೆ ಶವ ಹುದುಗಿಸಿಡಲಾಗಿತ್ತು. ರಕ್ತಸಿಕ್ತವಾಗಿ ಸಿಕ್ಕ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಈ ಮಹಿಳೆ ಉತ್ತರ ಭಾರತ ಮೂಲಕದವರು ಎಂದು ಹೇಳಲಾಗಿತ್ತು. ಡಿಸೆಂಬರ್ 24-25ರಂದು ಮಹಿಳೆಯನ್ನು ಕೊಲೆಗೈದು ಆರೋಪಿಗಳು ರೈಲು ನಿಲ್ದಾಣದಲ್ಲಿ ಶವ ತುಂಬಿದ ಡ್ರಮ್ ಇಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಪೊಲೀಸರು ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಆದರೆ ಎಲ್ಲಾ ಮೂರು ಘಟನೆಗಳಿಗೆ ಸಂಬಂಧವಿದೆಯೇ ಎಂದು ಹೇಳಲು ನಿರಾಕರಿಸಿದರು.












Click it and Unblock the Notifications